ಬೈಕ್‌ನಲ್ಲಿ ಬಂದು ಸರ ಅಪಹರಣ

ಕುಂದಾಪುರ: ಸಿಗರೇಟ್‌ ಖರೀದಿ ಮಾಡುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ವ್ಯಕ್ತಿಗಳು ಚಾಕಾಲಿನಿಂದ ಅಂಗಡಿಯ ಮಾಲಿಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಘಟನೆ ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆ ಬಳಿ ಆ.8ರಂದು ಸಂಭವಿಸಿದೆ.

ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆಯಲ್ಲಿರುವ ರಾಮ್‌ ರಾಯ್‌ ನಾಯಕ್‌ ಅವರ ಅಂಗಡಿಗೆ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಸಿಗರೇಟ್‌ನ್ನು ಕೇಳಿದ್ದು, ಅಂಗಡಿಯ ಡಬ್ಬದಿಂದ ಸಿಗರೇಟ್‌ನ್ನು ತೆಗೆದುಕೊಡುವ ವೇಳೆ ರಾಮ್‌ ರಾಯ್‌ ನಾಯಕ್‌ ಅವರ ಕುತ್ತಿಗೆಯಲ್ಲಿದ್ದ ಎರಡು ಪವನ್‌ ಚಿನ್ನದ ಸರವನ್ನು ಸೆಳೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ಚಿನ್ನದ ಸರದ ಮೌಲ್ಯ ಸುಮಾರು 40 ಸಾವಿರ ರೂ. ಆಗಿದ್ದು ರಾಮ್‌ ರಾಯ್‌ ನಾಯಕ್‌ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾರ್ಟ್‌ಸರ್ಕ್ನೂಟ್‌ನಿಂದ ಕಾರಿನಲ್ಲಿಬೆಂಕಿ ಅಕಸ್ಮಿಕ

ಕುಂದಾಪುರ: ನಗರದ ಕಾಲೇಜು ರಸ್ತೆಯ ಬಳಿ ನಿಲ್ಲಿಸಿದ್ದ ಮಾರುತಿ 88 ಕಾರನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಅಕಸ್ಮಿಕವಾಗಿ ಶಾರ್ಟ್‌ಸರ್ಕ್ನೂಟ್‌ನಿಂದಾಗಿ ಬೆಂಕಿಕಾಣಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಬೆಂಕಿಯನ್ನು ಆರಿಸಿದ್ದರಿಂದ ಸಂಭವನೀಯ ದುರಂತವನ್ನು ತಪ್ಪಿಸಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಕುಂದಾಪುರದ ಬರೆಕಟ್ಟು ನಿವಾಸಿ ಗಣೇಶ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು,ಕಾರಿನ ಹಿಂದುಗಡೆ ಗ್ಯಾಸ್‌ ಸಿಲೆಂಡರ್‌ ಇದ್ದು, ಬೆಂಕಿ ಹೊತ್ತಿಕೊಂಡಿದ್ದರೆ ಈ ಗ್ಯಾಸ್‌ ಸಿಲೆಂಡರ್‌ಗೆ ತಾಗಿ ಅಪಾಯ ಸಂಭವಿಸಲಿತ್ತು. ತಕ್ಷಣ ಕುಂದಾಪುರದ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಸಂಭವನೀಯ ಅಪಾಯವನ್ನು ತಡೆದಿದ್ದಾರೆ.

ಗಾಯಗೊಂಡ ನವಿಲು ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರ


ಕುಂದಾಪುರ : ಶಿರಿಯಾರದ ಬಳಿ ಗಾಯಗೊಂಡು ಅಪಾಯಕ್ಕೆ ಸಿಲುಕಿದ್ದ ರಾಷ್ಟ್ರಪಕ್ಷಿ ನವಿಲನ್ನು ಸ್ಥಳೀಯ ಯುವಕರು ಹಿಡಿದು ಉಪಚರಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದರು.

ನವಿಲು ಗಾಯಗೊಂಡು ನಡೆಯಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ನಾಯಿ ಹಾಗೂ ಇತರ ಪ್ರಾಣಿಗಳ ಹಾವಳಿಗೆ ಸಿಗುವ ಮುನ್ನ ಸ್ಥಳೀಯರಾದ ರಮೇಶ್‌ ಆಚಾರ್‌, ಶ್ರೀಕಾಂತ್‌ ಕುಲಾಲ್‌,ಹರಿದಾಸ್‌ ಅವರು ಉಪಚರಿಸಿ ಅಧಿಕಾರಿಗಳಿಗೆ ಪಕ್ಷಿಯನ್ನು ಹಸ್ತಾಂತರಿಸಿದರು.

ಚಿತ್ರ : ದಿನೇಶ್‌ ಪುತ್ರನ್‌ ವಿಠಲವಾಡಿ

ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಕುಂದಾಪುರ: ತಾಲೂಕಿನ ಶೇಡಿಮನೆ ಗ್ರಾಮದ ಬೆಪ್ಡೆ ಎಂಬಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗುಜರಿ ವ್ಯಾಪಾರಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾರ್ಕಳ ತಾಲೂಕಿನ ಮುನಿಯಾಲು ಗ್ರಾಮದ ಇಸುಬು(55) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಪ್ರಕರಣದ ವಿವರ: ಅಪ್ಪ, ಅಮ್ಮನನ್ನು ಕಳೆದುಕೊಂಡಿರುವ ಕೊಂಚ ಮಾನಸಿಕ ಅಸ್ವಸ್ಥೆಯಿಂದ ಕೂಡಿರುವ ಯುವತಿ ಒಬ್ಬಳೇ ಇದ್ದಳು. ಆಕೆಯ ಇಬ್ಬರು ಸಹೋದರಿಯರು ಉದ್ಯೋಗ ನಿಮಿತ್ತ ಹೊರಗೆ ಹೋಗಿದ್ದರು. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗುಜರಿ ಹೆಕ್ಕುವ ಇಸುಬು ಗೂಡ್ಸ್ ರಿಕ್ಷಾದಲ್ಲಿ ಆಗಮಿಸಿದ್ದಾನೆ. ಯುವತಿ ಒಬ್ಬಳೇ ಮನೆಯಲ್ಲಿದ್ದು, ಆಕೆ ಕೊಂಚ ಮಾನಸಿಕ ಅಸ್ವವಸ್ಥೆಯೂ ಆಗಿರುವ ಕಾರಣ ಅಲ್ಲಿಗೆ ಹೋಗಬೇಡಿ ಎಂದು ಪಕ್ಕದ ಮನೆಯವರು ಹೇಳಿದ್ದರೂ, ಇಸುಬು ಯುವತಿಯ ಮನೆಗೆ ಬಂದು ಗುಜರಿ ಕೇಳುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ ಎಂದು ಆಪಾದಿಸಲಾಗಿದೆ. ಯುವತಿ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ವ್ಯಾಪಾರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯ ದೂರಿನಂತೆ ಪೊಲೀಸರು ಇಸುಬುನ್ನು ಬಂಧಿಸಿದರು. ಆರೋಪಿ ವಿರುದ್ಧ ಈಗಾಗಲೇ ಹೆಬ್ರಿ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವಿದೆ.

ಕೋಟ: ಜಾನುವಾರು ಅಕ್ರಮ ಸಾಗಾಟಕ್ಕೆ ಯತ್ನ

ಕೋಟ: ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಾಟ ನಡೆಸಲು ಪ್ರಯತ್ನಿಸುತ್ತಿದ್ದ ಸಂದರ್ಭ, ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಯ ಸದಸ್ಯರು ಮಧ್ಯ ಪ್ರವೇಶಿಸಿ ಜಾನುವಾರುಗಳನ್ನು ರಕ್ಷಣೆ ನಡೆಸಿದ ಘಟನೆ ಆ.7ರಂದು ಅಪರಾಹ್ನ ಕೋಟದಲ್ಲಿ ನಡೆದಿದೆ.

ಕೋಟದ ಮಣೂರು ಸಮೀಪ ಮೂರು ಗಂಡು ಕರುಗಳನ್ನು ಕಾಲು ಹಾಗೂ ಬಾಯಿಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಟಕ್ಕೆ ಪ್ರಯತ್ನಿಸುತ್ತಿದ್ದ ವೇಳೆ. ಕೋಟದ ಹಿಂದೂ ಜಾಗರಣಾ ವೇದಿಕೆ ಸದಸ್ಯರು, ಸಾರ್ವಜನಿಕರೊಂದಿಗೆ ಸ್ಥಳಕ್ಕೆ ತೆರಳಿದ್ದು, ಆರೋಪಿಗಳು ಜಾನುವಾರುಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅನಂತರ ಜಾನುವಾರುಗಳನ್ನು ಸುರಕ್ಷಿತವಾಗಿ ಕೋಟೇಶ್ವರ ಸಮೀಪದ ಗೋಶಾಲೆಗೆ ಹಸ್ತಾಂತರಿಸಲಾಯಿತು.

ಮಗು ಪತ್ತೆ ಪ್ರಕರಣ: ಆರೋಪಿ ಬಂಧನ

ಕುಂದಾಪುರ: ಕೊಲ್ಲೂರು ಬಳಿಯ ಜಡ್ಕಲ್‌ನ ಕಾಡಿನಲ್ಲಿ ಮಗು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಗರದ ಶಶಿಕಾಂತ್‌ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
    ಕಳೆದ ಶುಕ್ರವಾರ ಕಾಡಿನಲ್ಲಿ ಮಗು ಪತ್ತೆಯಾದ ಬಗ್ಗೆ ಹೆಮ್ಮಾಡಿಯ ಕಾರು ಚಾಲಕ ಗಣೇಶ್‌ ದೇವಾಡಿಗ ಅವರು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದದ್ದರು. ಅದೇ ವೇಳೆ ಈ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಸಿನ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಮದುವೆಯಾಗದೇ ಮಗುವಿಗೆ ಜನ್ಮನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಆರಂಭಿಸಿದ ಪೊಲೀಸರು ಶ‌ಶಿಕಾಂತ್‌ನನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿ ಹುಡುಗಿಯ ಹತ್ತಿರದ ಸಂಬಂಧಿಯಾಗಿದ್ದು, ಮದುವೆಗೆ ವಿರೋಧವಿರುವುದರಿಂದ ಮದುವೆಯ ಮೊದಲೇ ದೈಹಿಕ ಸಂಪರ್ಕ ಹೊಂದಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ. 
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com