ಅಂಚೆ ಕಚೇರಿಯಲ್ಲಿ ಮುಂಗಡ ರೈಲ್ವೆ ಟಿಕೆಟ್‌ಗೆ ಪೈಪೋಟಿ- ಒತ್ತಡದಲ್ಲಿ ಸಿಬ್ಬಂದಿಗಳು

ಕುಂದಾಪುರ: ಇಲ್ಲಿನ ಅಂಚೆ ಕಚೇರಿಯಲ್ಲಿ ಆರಂಭಿಸಲಾಗಿರುವ ರೈಲ್ವೆ ರಿಸರ್ವೇಶನ್ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಎದುರಾಗಿದೆ. 
      ಮುಂಜಾನೆ 5 ಗಂಟೆಯಿಂದಲೇ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಅಂಚೆ ಕಚೇರಿ ಸಿಬ್ಬಂದಿ ಕಾರ್ಯದೊತ್ತಡದಿಂದ ಕಂಗೆಡುವಂತಾಗಿದೆ. ಗ್ರಾಹಕರ ಅನುಕೂಲದ ಹಿತದೃಷ್ಟಿಯಿಂದ ಕುಂದಾಪುರ ಕೇಂದ್ರ ಭಾಗದಲ್ಲಿರುವ ಅಂಚೆ ಕಚೇರಿಯಲ್ಲಿ ರಿಸರ್ವೇಶನ್ ಟಿಕೆಟ್ ಕೌಂಟರ್ ತೆರೆಯಲಾಗಿದೆ. ಆದರೆ ಇದರ ಕಾರ್ಯಭಾರವನ್ನು ಅಂಚೆ ಇಲಾಖೆ ಹೊರುತ್ತಿದೆ. 
    ಕೊಂಕಣ ರೈಲ್ವೆ ನಿಗಮ ಟಿಕೆಟ್ ವಿತರಿಸಲು ಸಿಬ್ಬಂದಿಗಳನ್ನು ನೀಡದಿರುವುದರಿಂದ ಅಂಚೆ ಇಲಾಖೆ ಸಿಬ್ಬಂದಿ ಹೆಚ್ಚುವರಿ ಹೊಣೆ ಹೊರುತ್ತಿದ್ದು, ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ರೈಲ್ವೆ ಟಿಕೆಟ್ ವಿತರಣೆ ಕಾರ್ಯದಲ್ಲಿ ಸುಸ್ತು ಹೊಡೆಯುವಂತಾಗಿದೆ. 

ಸಿಬ್ಬಂದಿ ಒದಗಿಸಿ: ಪ್ರತಿದಿನ 50ರಿಂದ 60 ಸಾವಿರ ರೂ. ಆದಾಯ ಬರುತ್ತಿದೆ. ಟಿಕೆಟ್ ರಿಸರ್ವೇಶನ್ ಕೌಂಟರ್‌ನಿಂದಾಗಿ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಮಾಸಿಕ ಆದಾಯ 15 ಲಕ್ಷ ರೂ. ಮೀರಿದೆ. ಕೊಂಕಣ ರೈಲ್ವೆ ನಿಗಮ ಟಿಕೆಟ್ ವಿತರಣೆಗೆ ಸಿಬ್ಬಂದಿಗಳ ನೇಮಕಾತಿ ಮಾಡಿದಲ್ಲಿ ಅನುಕೂಲ. ಪ್ರಸ್ತುತ ಇದರ ಹೊಣೆಯನ್ನು ಅಂಚೆ ಇಲಾಖೆ ನಿರ್ವಹಿಸುತ್ತಿರುವುದರಿಂದ ಬಹಳ ಕಷ್ಟವಾಗುತ್ತಿದೆ ಎಂದು ಅಂಚೆ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. 

ಕಾಳಸಂತೆಯಲ್ಲಿ ಟಿಕೆಟ್ ವಿಕ್ರಯ: ರೈಲ್ವೆ ಟಿಕೆಟ್ ಕಾಳಸಂತೆಯಲ್ಲಿ ವ್ಯಾಪಕವಾಗಿ ವಿಕ್ರಯ ಆಗುತ್ತಿದೆ. 500 ರೂ. ಧಾರಣೆಯ ಟಿಕೆಟ್ 1000-1500 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆಲವರು ಇದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದು, ಅವರ ಪ್ರತಿದಿನದ ಆದಾಯ 10-15 ಸಾವಿರ ಆಗುತ್ತಿದೆ. ಬೆಳಗ್ಗೆ ಬೇಗ ಬರುವ ಕೆಲವು ಮಂದಿ ಟಿಕೆಟ್ ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಗ್ರಾಹಕರಿಗೆ ಬಹಳ ನಷ್ಟವಾಗುತ್ತಿದ್ದು ಸಂಬಂಧಿತ ಇಲಾಖೆ, ರೈಲ್ವೆ ಪೊಲೀಸರು ಗಮನ ಹರಿಸಿ ಕಾಳಸಂತೆಯಲ್ಲಿ ಟಿಕೆಟ್ ವಿಕ್ರಯ ಆಗುವುದನ್ನು ತಪ್ಪಿಸಬೇಕು ಎಂದು ಗ್ರಾಹಕರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. 

ಅಕ್ರಮ ತಪ್ಪಿಸಲು ರಿಸರ್ವೇಶನ್ ಸ್ಲಿಪ್ : ಏಜೆಂಟರ ಹಾವಳಿ ಮತ್ತು ಕಾಳಸಂತೆಯಲ್ಲಿ ರೈಲ್ವೆ ಟಿಕೆಟ್ ಮಾರಾಟ ತಪ್ಪಿಸಲು ಪ್ರತಿಯೊಬ್ಬರಿಗೂ ಒಂದೊಂದು ರಿಸವೇರ್ಶನ್ ಸ್ಲಿಪ್ ನೀಡಲಾಗುತ್ತಿದೆ. ಇದರಿಂದ ಅಕ್ರಮ ತಡೆಗಟ್ಟಲು ಸಾಧ್ಯವಿದೆ. ಇದನ್ನು ಮೀರಿಯೂ ಅಕ್ರಮ ನಡೆದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. - ಕೊಂಕಣ ರೈಲ್ವೆ 

ಕುಂದಾಪುರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಮೂಡ್ಲಕಟ್ಟೆಯಲ್ಲಿರುವ ಕುಂದಾಪುರ ರೈಲ್ವೆ ನಿಲ್ದಾಣ ಶೀಘ್ರದಲ್ಲಿಯೇ ಮೇಲ್ದರ್ಜೆಗೇರಲಿದೆ. ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದ್ದಾರೆ. ಇಲ್ಲಿಯ ಜನರ ಬಹುದಿನದ ಬೇಡಿಕೆಯಾಗಿರುವ ಸಿಎಸ್‌ಟಿ-ಮಂಗಳೂರು ಸೂಪರ್ ಫಾಸ್ಟ್ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ನೀಡಲು ಕೊಂಕಣ ರೈಲ್ವೆ ನಿಗಮ ಒಪ್ಪಿಗೆ ಸೂಚಿಸಿದೆ. ಗ್ರಾಹಕರ ಅನುಕೂಲದ ಹಿತದೃಷ್ಟಿಯಿಂದ ಕುಂದಾಪುರ ಅಂಚೆ ಕಚೇರಿಯಲ್ಲಿ ರೈಲ್ವೆ ರಿಸರ್ವೇಶನ್ ಕೌಂಟರ್ ತೆರೆಯಲಾಗಿದೆ. ಇಲ್ಲಿ ಸಿಬ್ಬಂದಿಗಳ ನೇಮಕಾತಿ ಬಗ್ಗೆಯೂ ಮನವಿ ಸಲ್ಲಿಸಲಾಗಿದೆ.  - ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿ 

ವರದಿ: ಜಾನ್ ಡಿಸೋಜ ಕುಂದಾಪುರ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com