ಸಿದ್ದು ಸಿ.ಎಂ ಆಗುವುದನ್ನೇ ಕಾದು ಅಗಲಿದ ಗೆಳೆಯ

ಮೈಸೂರು: ಗ್ರಾಮದಿಂದ ನಗರಕ್ಕೆ ಹಾಲು ತಂದು ಹಾಕುವ ಹುಡುಗನಿಗೆ ಹೋಟೆಲ್‌ವೊಂದನ್ನು ಮತ್ತೊಬ್ಬ ಹುಡುಗ ಗೊತ್ತು ಮಾಡಿಕೊಟ್ಟ. ಆತ ಹೆಚ್ಚು ಓದಬೇಕೆಂಬ ಆಸೆ ತೋರಿದಾಗ ಹಾಲಿನ ಕ್ಯಾನ್ ಕಿತ್ತುಕೊಂಡು ಎಲ್‌ಎಲ್‌ಬಿಗೆ ಸೇರಲು ಸಹಾಯ ಮಾಡಿದ. ಹೊಸ ಸೈಕಲ್ ಕೊಡಿಸಿ, ಕೈಗಿಷ್ಟು ಹಣವನ್ನೂ ನೀಡಿ ಪ್ರೋತ್ಸಾಹಿಸಿದ. ಬಾಲ್ಯ ಸ್ನೇಹವೇ ಅಂತದ್ದು. ನೆರವು ಪಡೆದಾತ ಈಗ ನಾಡಿನ ಮುಖ್ಯಮಂತ್ರಿ. ಅವರಿಗೆ ಬೆನ್ನೆಲುಬಾಗಿ ನಿಂತ ಸ್ನೇಹಿತ ಇಹಲೋಕ ತ್ಯಜಿಸಿದ್ದಾರೆ. 
       ಹೌದು, ಬಾಲ್ಯ ಸ್ನೇಹಿತ ರಾಮಣ್ಣ (64) ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ದೌಡಾಯಿಸಿ ಬಂದು ಕಂಬನಿ ಮಿಡಿದರು. 

ಹಾಲಿನ ರಾಮಣ್ಣ: 
       ರಾಮಣ್ಣ ಚಿಕ್ಕ ವಯಸ್ಸಿನಲ್ಲಿ ಮೈಸೂರಿನ ಇಟ್ಟಿಗೆಗೂಡಿನಲ್ಲಿದ್ದ ಸಂಬಂಧಿಕರ ಮನೆಗೆ ಬಂದು ಸೇರಿಕೊಂಡಿದ್ದರು. ಇಲ್ಲಿಯೇ ಹಸುಗಳನ್ನು ಸಾಕಿ, ಹಾಲು ಮಾರುವ ವೃತ್ತಿಯನ್ನು ಆರಂಭಿಸಿದರು. ಇಟ್ಟಿಗೆಗೂಡು ಸೇರಿ ಸುತ್ತಮುತ್ತಲ ಬಡಾವಣೆ ಜನರಿಂದ 'ಹಾಲಿನ ರಾಮಣ್ಣ' ಎಂದೇ ಕರೆಸಿಕೊಳ್ಳುತ್ತಿದ್ದರು. ಬಾಲ್ಯ ಸ್ನೇಹಿತ ಸಿದ್ದರಾಮಯ್ಯ ಸಿದ್ದರಾಮಯ್ಯನಹುಂಡಿ ಗ್ರಾಮದ ಜನರು ಕರೆಯುತ್ತಿದ್ದ ಹಾಲನ್ನು ತಂದು ರಾಮಣ್ಣಗೆ ಹಾಕುತ್ತಿದ್ದರು. ನಂತರ ಆತನಿಗೆ ಹೋಟೆಲ್‌ಗೆ ಗೊತ್ತುಪಡಿಸಿದ್ದು, ಕಾಲೇಜಿಗೆ ಸೇರಿಸಿದ್ದು, ಹೊಸ ಸೈಕಲ್ ಕೊಡಿಸಿದ್ದನ್ನು ರಾಮಣ್ಣ ಪತ್ನಿ ಸಾವಿತ್ರಿ ಮೆಲುಕು ಹಾಕಿದರು. 
        ರಾಮಣ್ಣ ಅಂತಿಮ ದರ್ಶನಕ್ಕೆ ಸಿ‌ಎಂ ಮೈಸೂರಿಗೆ ಆಗಮಿಸುತ್ತಿದ್ದಾರೆಂಬ ಮಾಹಿತಿ ಕೇಳಿ ಎಲ್ಲರಿಗೂ ಆಶ್ಚರ್ಯ. ಪೊಲೀಸರು, ಅಧಿಕಾರಿ ವರ್ಗ ಅಲ್ಲದೆ ಮಾಧ್ಯಮವರಿಗೂ ಕುತೂಹಲ. ಇದನ್ನು ತಿಳಿಯಲು ರಾಮಣ್ಣ ಅವರ ಮನೆ ಬಳಿ ತೆರಳಿದಾಗ ಹಿನ್ನೆಲೆ ಅರ್ಥವಾಯಿತು. ನೂತನ ಮುಖ್ಯಮಂತ್ರಿ ಬೆಳವಣಿಗೆಗೆ ಪೂರಕವಾಗಿ ರಾಮಣ್ಣ ಮೂರು ದಶಕದಿಂದ ನಿಂತಿದ್ದರು. 

ಕಣ್ಣೀರಿಟ್ಟ ಸಿದ್ದು 
      ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ನೇಹಿತ ರಾಮಣ್ಣನ ಪಾರ್ಥಿವ ಶರೀರ ನೋಡುತ್ತಿದ್ದಂತೆಯೇ ಕಣ್ಣೀರಿಟ್ಟರು. ರಾಮು ಪತ್ನಿ ಸಾವಿತ್ರಿ, ಮಕ್ಕಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ನಂತರ, ರಾಮು ಅವರೊಂದಿಗೆ ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಲೇ ಗದ್ಗದಿತರಾದರು. ಕಷ್ಟ ಕಾಲದಲ್ಲಿ ಜತೆಗಿದ್ದ ಸ್ನೇಹಿತ ಸುಖದಲ್ಲಿ ಇಲ್ಲವಾದನಲ್ಲ ಎಂದು ಕಣ್ಣೀರಿಟ್ಟರು. 
     ಇಬ್ಬರ ಜಾತಿಯೂ ಬೇರೆಯಾಗಿದ್ದರೂ ಅವರ ಸ್ನೇಹಕ್ಕೆ ಇದು ಅಡ್ಡಿಯಾಗಿರಲಿಲ್ಲ. ಬಾಲ್ಯದ ಸ್ನೇಹ ಕೊನೆಯವರೆಗೂ ಉಳಿದಿತ್ತು.
     ಸಿದ್ದರಾಮಯ್ಯ ನಗರಕ್ಕೆ ಬಂದಾಗಲೆಲ್ಲ ರಾಮು ಅವರ ಮನೆಗೆ ತೆರಳುತ್ತಿದ್ದರು. `ಮುದ್ದೆ, ಉಪ್ಸಾರು, ನಾಟಿಕೋಳಿ ಸಾರು, ಮಜ್ಜಿಗೆ... ಅವರಿಗೆ ಇಷ್ಟ. ಎಷ್ಟೋ ಸಲ ಊಟ ಮಾಡುತ್ತಿದ್ದರು. ಆದರೆ ಏನನ್ನೂ ಕೇಳದೆ ಇದ್ದುದನ್ನೇ ಊಟ ಮಾಡುತ್ತಿದ್ದರು.
    
ಸಿದ್ದರಾಮಯ್ಯ ಅವರು ಶಾಸಕರಾದಾಗಿನಿಂದ ಸಿ‌ಎಂ ಆಗುವ ತನಕವೂ ಆಗಾಗ ನಮ್ಮ ತಂದೆಯನ್ನು ಭೇಟಿ ಮಾಡುತ್ತಿದ್ದರು. ನಮ್ಮ ತಂದೆಯೇ ಸಿದ್ದರಾಮಯ್ಯ ಅವರನ್ನು ನೋಡಲು ಹೋದರೆ 'ಇಷ್ಟು ದೂರ ಯಾಕೆ ಬರಬೇಕಿತ್ತು? ಹೇಳಿ ಕಳುಹಿಸಿದ್ದರೆ ನಾನೇ ಬರುತ್ತಿರಲಿಲ್ಲವೇ' ಎನ್ನುತ್ತಿದ್ದರು. - ಸತೀಶ್, ರಾಮಣ್ಣರ ಹಿರಿಯ ಪುತ್ರ 

ನಾಮಪತ್ರ ಸಲ್ಲಿಸುವ ಮುನ್ನ ಮನೆಗೆ ಬಂದವರು ಮಜ್ಜಿಗೆ ಕುಡಿದು ಅವಸರದಲ್ಲಿ ಹೊರಟುಹೋದರು. ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯೂ ಆದರು. ಆದರೆ ಈಗ ಅವರ ಗೆಳೆಯ ನಮ್ಮೆಲ್ಲರನ್ನೂ ಬಿಟ್ಟು ಹೊರಟೇ ಹೋದ್ರು' ಎಂದು ಕಣ್ಣೀರಿಟ್ಟರು ರಾಮು ಅವರ ಪತ್ನಿ ಶಾಂತಮ್ಮ.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com