ಕೊಲ್ಲೂರಿನ ದೇವಳಕ್ಕೆ ಬಿದರಿ ಬೆಳ್ಳಿಯ ಖಡ್ಗ ಸಮರ್ಪಣೆ


 ಬೈಂದೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕೆಗೆ ನವರತ್ನ ಖಚಿತ ಬೆಳ್ಳಿಯ ಖಡ್ಗ ಸಮರ್ಪಿಸಿದರು.
ಶ್ರೀ ಕ್ಷೇತ್ರ ಕೊಲ್ಲೂರಿಗೆ  ಆಗಮಿಸಿ ಖಡ್ಗವನ್ನು ದೇವಿಗೆ ಅರ್ಪಿಸಿ ದರ್ಶನ ಪಡೆದು ಮಾತನಾಡಿದ ಅವರು ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಿಗೂ ಒಂದು ಖಡ್ಗ ನೀಡಿರುವುದಾಗಿ ತಿಳಿಸಿದರಲ್ಲದೇ ಸಂಜೆ ಕಾರ್ಕಳ ಶ್ರೀ ವೆಂಕಟರಮಣ ದೇವರಿಗೆ ಗಧೆಯನ್ನು ಅರ್ಪಿಸುವುದಾಗಿ ತಿಳಿಸಿದರು. ಸಾರ್ವಜನಿಕರಿಂದ ಬಂದ ವಸ್ತುಗಳು ದೇವರಿಗೆ ಸಲ್ಲಬೇಕೆನ್ನುವುದೇ ನನ್ನ ಆಶಯವಾಗಿತ್ತು ಎಂದರು.
    ಮುಂದಿನ ಲೋಕಸಭೆಗೆ ಕಾಂಗ್ರೇಸ್‌ನಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿದರಿ, ನನ್ನ ಜೀವನದಲ್ಲಿ ಏನನ್ನೂ ಯಾರಿಂದಲೂ ಕೇಳಿ ಪಡೆದಿಲ್ಲ. ಪಕ್ಷ, ಸಮಾಜ, ದೇಶ ನನ್ನನ್ನು ಯಾವ ರೀತಿಯಾಗಿ ಬಳಸಿ ಕೊಳ್ಳುತ್ತದೋ ಅದರಂತೆ ಮುಂದುವರಿಯುವೆ ವಿನಹ ಯಾವುದಕ್ಕೂ ಲಾಬಿ ಮಾಡುವ ಉದ್ದೇಶವಾಗಲೀ ಅವಶ್ಯಕತೆಯಾಗಲೀ ನನಗಿಲ್ಲ ಎಂದರಲ್ಲದೇ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ರಾಜ್ಯಭಾರ ಮಾಡುವುದಲ್ಲದೇ, ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯನ್ನು, ಅಭಿವೃದ್ಧಿಯನ್ನು ನೂತನ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲಾ ಮಂತ್ರಿಗಳು ಹಾಗೂ ಶಾಸಕರೂ ಸೇರಿ ಈಡೇರಿಸುವ ವಿಶ್ವಾಸವಿದೆ ಎಂದರು.
 ಕುಟುಂಬಿಕರೊಡಗೂಡಿ ಕ್ಷೇತ್ರಕ್ಕೆ ಆಗಮಿಸಿದ್ದ ಬಿದರಿಗೆ ದೇವಳದ ಸಹಾಯಕ ಕಾರ್‍ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಶಾಲು ಹೊದೆಸಿ ಗೌರವಿಸಿದರು. ವೃತ್ತ ನೀರಿಕ್ಷಕ ಅರುಣ ಬಿ.ನಾಯಕ್, ಕೊಲ್ಲೂರು ಠಾಣಾಧಿಕಾರಿ ದೇವೇಂದ್ರ, ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com