ವಾಗ್ದಾನ ಉಳಿಸಿಯಾರೇ ಉಡುಪಿ ಸಚಿವ ಸೊರಕೆ?

ಉಡುಪಿ: 'ನಾನು ಬೃಹತ್ ಉದ್ದಿಮೆಗಳ ಕೈಗೊಂಬೆಯಾಗುವುದಿಲ್ಲ..'
ಇದು, ಮೇ 8ರಂದು ಉಡುಪಿಯ ಮತ ಎಣಿಕಾ ಕೇಂದ್ರದ ಹೊರಗೆ ಕಾಪು ಕ್ಷೇತ್ರದಿಂದ ಆಗ ತಾನೇ ಶಾಸಕರಾಗಿ ಘೋಷಿಸಲ್ಪಟ್ಟ ವಿನಯಕುಮಾರ್ ಸೊರಕೆ ಅವರು ತನ್ನನ್ನು ಆರಿಸಿದ ಮತದಾರರಿಗೆ ನೀಡಿದ ವಾಗ್ದಾನ.
 ಈಗ ಅವರು ಸಚಿವರಾಗಿದ್ದಾರೆ, ಶಾಸಕರಾದ ಸಂತೋಷದಲ್ಲಿ ಅವರು ನೀಡಿರುವ ಈ ವಾಗ್ದಾನವನ್ನು ಮಂತ್ರಿಯಾಗಿ ಉಳಿಸಿಕೊಳ್ಳುವುದು ಅವರ ಮುಂದಿರುವ ನಿಜವಾದ ಸವಾಲು.

ಬೃಹತ್ ಉದ್ಯಮಗಳ ಆಡೊಂಬಲ: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್ ಎಂಬ ಕಲ್ಲಿದ್ದಲು ಸುಟ್ಟು ವಿದ್ಯುತ್ ಉತ್ಪಾದಿಸುವ ಭಾರಿ ಉದ್ದಿಮೆ ಈಗಾಗಲೇ ಕಾಲಿಟ್ಟು ಪರಿಸರಕ್ಕೆ, ಜನಜೀವನಕ್ಕೆ ಭಾರಿ ತೊಂದರೆಗೆ ಕಾರಣವಾಗಿದೆ. ಜೊತೆಗೆ ಗಾಳಿ ವಿದ್ಯುತ್ ಉತ್ಪಾದಿಸುವ ಯಂತ್ರಗಳನ್ನು ತಯಾರಿಸುವ ಉದ್ದಿಮೆ ಕೂಡ ಆರಂಭವಾಗಿದೆ. ಭೂಮಿಯಡಿ ಕಿ.ಮೀ.ಗಟ್ಟಲೇ ಉದ್ದದ ಕಚ್ಚಾ ತೈಲ ಸಂಗ್ರಹ ಮಾಡುವ ಬೃಹತ್ ಸ್ಥಾವರ ನಿರ್ಮಾಣವಾಗುತ್ತಿದೆ, ಸಿಮೆಂಟ್ ತಯಾರಿಸುವ ಭಾರಿ ಉದ್ದಿಮೆ ಕಾಲಿಡುತ್ತಿದೆ, ಇಲ್ಲಿ ಪೆಟ್ರೋಕೆಮಿಕಲ್ ಉದ್ಯಮಗಳಿಗಾಗಿ ವಿಶೇಷ ಕೈಗಾರಿಕಾ ವಲಯದ ಸ್ಥಾಪನೆಗೆ ಪ್ರಸ್ತಾಪ ಇದೆ... ಇನ್ನೂ ಅನೇಕ ಭಾರಿ ಕೈಗಾರಿಕೆಗಳು ಕಾಪು ವಿಧಾನಸಭಾ ಕ್ಷೇತ್ರದತ್ತ ಕಣ್ಣಿಟ್ಟಿವೆ.
 ಈಗಾಗಲೇ ಹತ್ತಾರು ಸಾವಿರ ಎಕ್ರೆ ಕೃಷಿ, ಅರಣ್ಯ, ವಸತಿ ಭೂಮಿ ಈ ಕೈಗಾರಿಕೆಗಳಿಗೆ ಬಳಕೆ ಆಗಿದೆ, ಆಗುತ್ತಿದೆ, ಆಗಲಿದೆ. ಸಹಜವಾಗಿಯೇ ಜನರ ವಿರೋಧವೂ ಇದೆ.

ಅಂದು ಯುಪಿಸಿಎಲ್ ವಿರೋಧಿಸಿದ್ದರು..: ಯುಪಿಸಿಎಲ್ ಸ್ಥಾವರದ ವಿರುದ್ಧ ನಡೆದ ಹೋರಾಟದಲ್ಲಿ ಸಚಿವ ವಿನಯಕುಮಾರ್ ಸೊರಕೆ (ಆಗ ಅವರು ಉಡುಪಿಯ ಸಂಸದರಾಗಿದ್ದರು) ಭಾಗವಹಿಸಿದ್ದರು. ಮಾತ್ರವಲ್ಲ, ಆಗ ಅವರ ಮೇಲೆ ದಾಖಲಿಸಿಕೊಳ್ಳಲಾಗಿರುವ ಪ್ರಕರಣದ ವಿಚಾರಣೆ ಈಗಲೂ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ.
 ಕಾಪು ಕ್ಷೇತ್ರ ಮಾತ್ರವಲ್ಲ, ಉಡುಪಿ ಹಾಗೂ ದ.ಕ. ಜಿಲ್ಲೆಯ ಶಾಸಕರ, ಸಂಸದರ ಮೇಲೆ ಇರುವ ಆರೋಪ, 'ಅವರು ಈ ಭಾರಿ ಕೈಗಾರಿಕೆಗಳ ವಿರೋಧಿಗಳಲ್ಲ' ಎನ್ನುವುದು. ಕೆಲವರಂತೂ ಈ ಕೈಗಾರಿಕಾಶಾಹಿಯ ಕೈಗೊಂಬೆಗಳು ಎಂದೇ ಪರಿಸರವಾದಿಗಳು ಕರೆಯುತ್ತಾರೆ.

ವಾಗ್ದಾನ ಈಡೇರಿಸಿಯಾರೇ?: ಈ ಆರೋಪ ಗೊತ್ತಿದ್ದರಿಂದಲೇ ಕಾಪು ಶಾಸಕ ಸೊರಕೆ ಅವರು ತಾನು ಕೈಗಾರಿಕೆಗಳ ಕೈಗೊಂಬೆಯಾಗುವುದಿಲ್ಲ, ಅರ್ಥಾತ್ ಕಾಪು ಕ್ಷೇತ್ರಕ್ಕೆ ಭಾರಿ ಕೈಗಾರಿಕೆಗಳು ಬರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ. ಈಗ ಅವರು ಮಂತ್ರಿಯಾಗಿರುವುದರಿಂದ ಸಹಜವಾಗಿ ಅವರು ಕಾಪು ಕ್ಷೇತ್ರ ಮಾತ್ರವಲ್ಲ, ಕನಿಷ್ಠ ಉಡುಪಿ ಜಿಲ್ಲೆಯ ಮಟ್ಟಿಗಾದರೂ ತಮ್ಮ ವಾಗ್ದಾನವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ಶಾಸಕನಾಗಿ ಮಾತನಾಡುವುದಕ್ಕೂ, ಲಾಬಿಗಳ ಮಧ್ಯದಲ್ಲಿ ಮಂತ್ರಿಯಾಗಿ ಕೆಲಸ ಮಾಡುವುದಕ್ಕೂ ವ್ಯತ್ಯಾಸ ಇರುವುದರಿಂದ ಸೊರಕೆ ತನ್ನ ವಾಗ್ದಾನವನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆಯೇ, ಕಾದು ನೋಡಬೇಕು.

ಸೊರಕೆ ಅವರಿಂದ ಜಿಲ್ಲೆಯ ನಿರೀಕ್ಷೆಗಳು..
- ಜಿಲ್ಲೆಯನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದು.
- 30 ವರ್ಷಗಳಿಂದ ನಡೆಯುತ್ತಿರುವ ವಾರಾಹಿ ನೀರಾವರಿ ಯೋಜನೆ ಮುಗಿಸುವುದು.
- ಈಗಾಗಲೇ ಭಾರಿ ಕೈಗಾರಿಕೆಗಳಿಂದಾಗುತ್ತಿರುವ ತೊಂದರೆ ನಿವಾರಿಸುವುದು.
- ಜಿಲ್ಲೆಯ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು, ಕೃಷಿಯನ್ನು ಹೆಚ್ಚಿಸುವುದು.
- ಕಡಲು ಕೊರೆತಕ್ಕೆ ಶಾಶ್ವತ ಪರಿಸರ ಸಹ್ಯ ಪರಿಹಾರ ಒದಗಿಸುವುದು.
- ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಬೆಳೆಸುವುದು.
- ಅಕ್ರಮ ಸಕ್ರಮ, ನಿವೇಶನ, ವಸತಿ ವಿತರಣೆ ತ್ವರಿತಗೊಳಿಸುವುದು.
- ಕುಮ್ಕಿ, ಗೇರು ಲೀಸ್ ಭೂಮಿ ಯೋಜನೆಯಿಂದ ಬಡವರ ಶೋಷಣೆ ತಪ್ಪಿಸುವುದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದು.
- ಬಿಜೆಪಿ ಸರ್ಕಾರ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿ ಪೂರ್ಣಗೊಳಿಸುವುದು.
-ಸುಭಾಶ್ಚಂದ್ರ ಎಸ್. ವಾಗ್ಳೆ

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com