24 ಜೋಡಿಗಳ ಸಾಮೂಹಿಕ ವಿವಾಹಉಡುಪಿ: ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಮೇ 20ರಂದು ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 24 ಜೋಡಿಗಳು ಹಸೆಮಣೆಗೇರಿದರು.
     ವರದಕ್ಷಿಣೆ ರಹಿತ ಮತ್ತು ಸರಳ ವಿವಾಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2009ರಲ್ಲಿ 59, 2010ರಲ್ಲಿ 25, 2011ರಲ್ಲಿ 11, 2012ರಲ್ಲಿ 11 ಜೋಡಿಗಳ ವಿವಾಹ ನಡೆಸಲಾಗಿತ್ತು. ಈ ವರ್ಷ 24 ಜೋಡಿಗಳ ವಿವಾಹ ನಡೆಯಿತು.
      ವಧುವಿಗೆ ಈಗಾಗಲೇ ನೀಡಿದ ಕಾಲುಂಗುರ, ಸೀರೆ, ರವಕೆ ಕಣ, ವರನಿಗೆ ನೀಡಿದ ಕುರ್ತಾ, ಪೈಜಾಮವನ್ನು ಧರಿಸಿ ವಧೂವರರು ಕಲ್ಯಾಣಮಂಟಪಕ್ಕೆ ಹಿರಿಯರೊಡಗೂಡಿ ಆಗಮಿಸಿದಾಗ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ವಧುವಿಗೆ ತಾಳಿಸರವನ್ನು ಡಾ| ಜಿ. ಶಂಕರ್‌, ಶಾಲಿನಿ ಶಂಕರ್‌, ಸಮಾಜದ ಮುಖಂಡರು, ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೀಡಿದರು.
     ಸಾಮೂಹಿಕ ವಿವಾಹವನ್ನು ಹಿಂದಿನ ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ವರದಕ್ಷಿಣೆರಹಿತವಾಗಿ, ಆಡಂಬರರಹಿತವಾಗಿ ವಿವಾಹ ನಡೆಸುವ ನಮ್ಮ ಉದ್ದೇಶವನ್ನು ಸಾಕಾರಗೊಳಿಸಲು ಸಮಾಜ ಬಾಂಧವರು ನೆರವಾಗಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಸಹಕಾರ ಕೊಡಬೇಕು. ಭವಿಷ್ಯದ ದಿನಗಳಲ್ಲಿ ಸಾಮೂಹಿಕ ವಿವಾಹದಲ್ಲಿ 101 ಜೋಡಿಗಳನ್ನು ಮದುವೆ ಮಾಡಿಸುವ ಗುರಿ ಇದೆ ಎಂದು ಡಾ| ಜಿ. ಶಂಕರ್‌ ಹೇಳಿದರು.
     ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್‌, ಬಾರಕೂರು ಸಂಯುಕ್ತ ಸಭಾ ಅಧ್ಯಕ್ಷ ತಿಮ್ಮ ಮರಕಾಲ, ಬಗ್ವಾಡಿ ಮೊಗವೀರ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಸುವರ್ಣ, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ನಿಕಟಪೂರ್ವ ಅಧ್ಯಕ್ಷರಾದ ಸತೀಶ ಎಂ. ನಾಯ್ಕ, ಸತೀಶ ಅಮೀನ್‌ ಪಡುಕರೆ, ಎಂ.ಎಸ್‌.ಸಂಜೀವ ಕೋಟ ಮೊದಲಾದವರಿದ್ದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com