ಉತ್ತರ ಪತ್ರಿಕೆ ನಕಲು ತಡ: ಮರು ವೌಲ್ಯಮಾಪನ ಬೇಗ: ಇಕ್ಕಟ್ಟಲ್ಲಿ ಪಿಯುಸಿ ವಿದ್ಯಾರ್ಥಿಗಳು

ಉಡುಪಿ: ಹೆಚ್ಚು ಅಂಕ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದರೆ ಮರು ವೌಲ್ಯಮಾಪನ ಮಾಡಿಸುತ್ತಾರೆ. ಆ ರೀತಿ ಮರು ವೌಲ್ಯಮಾಪನ ಮಾಡಿಸುವ ಮೊದಲು ತಮ್ಮ ಉತ್ತರ ಸರಿ ಇದೆಯೇ ಎಂದು ನೋಡಲು ಉತ್ತರ ಪತ್ರಿಕೆಯ ನಕಲು ತರಿಸುತ್ತಾರೆ. ಸಮಯಕ್ಕೆ ಸರಿಯಾಗಿ ಉತ್ತರ ಪತ್ರಿಕೆಯ ಫೋಟೊಕಾಪಿ ಬಾರದೆ ಪಿಯುಸಿ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
      ತಾವು ಬರೆದ ಉತ್ತರ ಪತ್ರಿಕೆಯ ನಕಲು ಪಡೆಯಬೇಕಿದ್ದರೆ ಪ್ರತಿ ವಿಷಯಕ್ಕೆ 420 ರೂ. ಕಟ್ಟಬೇಕು. ಅದರದ್ದೇ ಆದ ಅರ್ಜಿ ನಮೂನೆ ತುಂಬಿಸಿ ಕಳುಹಿಸಬೇಕು. ವಿದ್ಯಾರ್ಥಿ ಕಳುಹಿಸಿದ 15 ದಿನಗಳ ಒಳಗೆ ಉತ್ತರ ಪತ್ರಿಕೆಯ ನಕಲು ವಿದ್ಯಾರ್ಥಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಳುಹಿಸಿಕೊಡಬೇಕು.
     ಸಮಸ್ಯೆ ಏನೆಂದರೆ 15 ದಿನ ನಕಲು ಪ್ರತಿಗೆ ಕಾಯುತ್ತಾ ಕೂತರೆ ಮರು ವೌಲ್ಯಮಾಪನಕ್ಕೆ ಕಳುಹಿಸಬೇಕಾದ ಕೊನೆಯ ದಿನಾಂಕ ಮುಗಿದು ಹೋಗುತ್ತದೆ. ಮರು ವೌಲ್ಯಮಾಪನಕ್ಕೆ ವಿಷಯವಾರು ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.
     ಮೇ 6ರಂದು ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದರೂ, ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಕಟಗೊಂಡಿದ್ದು ಮೇ 7. ಅಂದು ಫೋಟೊ ಕಾಪಿ ತರಿಸುವ ಅರ್ಜಿಯನ್ನು ಒದಗಿಸಲಾಗಿರಲಿಲ್ಲ. ಮೇ 8ರಂದು ಅರ್ಜಿ ನಮೂನೆಯನ್ನು ನೀಡಲಾಗಿದೆ. ಅಂದೇ ಕಳುಹಿಸಿದರೂ ಇವತ್ತಿನವರೆಗೆ ನಕಲು ಕಾಪಿ ಬಂದಿಲ್ಲ. ಕಾನೂನು ಪ್ರಕಾರ 15 ದಿನ ಕಾಯಬೇಕು ಎಂದಿರುವುದರಿಂದ ಮೇ 23ರವರೆಗೆ ಪ್ರಶ್ನಿಸುವಂತಿಲ್ಲ. ನಕಲು ಕಾಪಿಗಾಗಿ ಕಾಯುತ್ತಾ ಕೂತರೆ ಮರು ವೌಲ್ಯಮಾಪನ ಮಾಡಿಸಲು ಸಾಧ್ಯವಾಗುವುದಿಲ್ಲ.
       ಮರು ವೌಲ್ಯಮಾಪನ ಮಾಡಿಸಲು ನಕಲು ಕಾಪಿ ನೋಡಲೇಬೇಕು ಎಂಬ ನಿಯಮವಿಲ್ಲ. ಆದರೆ ತಾವು ಬರೆದ ಉತ್ತರ ಸರಿ ಇದೆಯೇ ಇಲ್ಲವೇ ಎಂಬುದು ನಕಲು ಕಾಪಿ ನೋಡಿದಾಗ ಗೊತ್ತಾಗುತ್ತದೆ. ಆಗ ಮರು ವೌಲ್ಯಮಾಪನ ಮಾಡಿಸಬೇಕೇ? ಬೇಡವೇ? ಎಂಬುದನ್ನು ನಿರ್ಧರಿಸಲು ಸುಲಭವಾಗುತ್ತದೆ. ಯಾಕೆಂದ್ರೆ ಮರು ವೌಲ್ಯಮಾಪನ ಮಾಡಿಸಬೇಕಿದ್ದರೆ ಪ್ರತಿ ವಿಷಯಕ್ಕೆ 1,050 ರೂ. ಕಟ್ಟಬೇಕು.
      ಎಂಜಿಎಂ ಕಾಲೇಜಿನ ವಿಜ್ಞಾನ ವಿಭಾಗ ವಿದ್ಯಾರ್ಥಿನಿ ಮೇಘಾ ರಾವ್ ಸೇರಿದಂತೆ ಹಲವು ಮಂದಿ ಈ ಬಾರಿ ಪ್ರತಿ ವಿಷಯಕ್ಕೆ 420 ರೂ.ನಂತೆ ಕಡಿಮೆ ಅಂಕ ಪಡೆದ ಉತ್ತರ ಪತ್ರಿಕೆಯ ನಕಲು ಪ್ರತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕಾಗಿ ಈಗ ಕಾಯುತ್ತಾ ಕೂತರೆ ಆಗುವುದಿಲ್ಲ ಎಂದು 1,050 ರೂ. ಮರು ವೌಲ್ಯಮಾಪನಕ್ಕೆ ಕಟ್ಟಿದ್ದಾರೆ. ಇನ್ನು ನಕಲು ಪ್ರತಿ ಬಂದರೂ ಅದರಿಂದ ಪ್ರಯೋಜನವಾಗುವುದಿಲ್ಲ. ವಿಷಯ ಒಂದಕ್ಕೆ 420 ರೂ.ನಂತೆ ಕಳೆದುಕೊಂಡದ್ದಷ್ಟೆ ಬಂದಿದೆ.
        ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ಆಡುವ ಬದಲು ಪದವಿ ಪೂರ್ವ ಶಿಕ್ಷಣ ಇಲಾಖೆ ಈ ನಿಯಮವನ್ನು ಬದಲಾಯಿಸಬೇಕಿದೆ. ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಮೊದಲು ನಕಲು ಪ್ರತಿ ಸಿಗುವಂತೆ ಮಾಡಬೇಕು. ಇಲ್ಲದೇ ಹೋದರೆ ಸರಕಾರಕ್ಕೆ ನಕಲು ಪ್ರತಿಯ ಹೆಸರಲ್ಲಿ ಒಂದಷ್ಟು ಹಣ ಬರುತ್ತದೆ ಎಂಬುದನ್ನು ಬಿಟ್ಟರೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗದು.
ಬಾಲಕೃಷ್ಣ ಶಿಬಾರ್ಲ 

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com