ಜಿಯೋಗ್ರಾಫಿಕ್ ಬೀ-ಸಾತ್ವಿಕ್ ಮನೆಯಲ್ಲಿ ಅಜ್ಜ ಅಜ್ಜಿಯ ಸಂಭ್ರಮ

(ಜಾನ್‌ಡಿಸೋಜ - ವಿಕ)
ಕುಂದಾಪುರ: ಅಮೆರಿಕದ ನ್ಯಾಶನಲ್ ಜಿಯೋಗ್ರಾಫಿಕ್ ಸೊಸೈಟಿ ನಡೆಸುವ ಪ್ರತಿಷ್ಠಿತ  ನ್ಯಾಶನಲ್ ಜಿಯೋಗ್ರಾಫಿಕ್ ಬೀ ರಸಪ್ರಶ್ನೆಯಲ್ಲಿ ಕುಂದಾಪುರದ ಅಂಕದಕಟ್ಟೆ ಮೂಲದ ಸಾತ್ವಿಕ್ ಕಾರ್ಣಿಕ್ ವಿಜಯಿಯಾಗಿರುವುದ ರಿಂದ ಮನೆಯಲ್ಲಿರುವ ಅಜ್ಜಅಜ್ಜಿ ಸಂಭ್ರಮಪಡುತ್ತಿದ್ದಾರೆ. ಸಾತ್ವಿಕ್‌ನ ಅಜ್ಜ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ನಿವೃತ್ತ ಗಣಿತಶಾಸ್ತ್ರ ಪ್ರಾಧ್ಯಾಪಕ ನಾಗಪ್ಪಯ್ಯ ಕಾರ್ಣಿಕ್ ಹಾಗೂ ಅಜ್ಜಿ ಸಾವಿತ್ರಿ ಅವರಿಗೆ ಬೆಳಗ್ಗಿನಿಂದಲೇ ಫೋನ್ ಮೂಲಕ ಅಭಿನಂದನೆಯ ಸುರಿಮಳೆಯೇ ಹರಿದುಬರುತ್ತಲಿದೆ. 
    ಬಂಧುಬಾಂಧವರ, ಹಿತೈಷಿಗಳ ಅಭಿನಂದನೆ ಕರೆ: ಸ್ವೀಕರಿಸು ವುದರಲ್ಲಿಯೇ ಅವರು ಮಗ್ನರಾಗಿದ್ದರು. ಕಳೆದ ಬಾರಿ ಸಾತ್ವಿಕ್‌ನ ಅಣ್ಣ ಕಾರ್ತಿಕ್ ಸ್ಪರ್ಧೆ ಗೆಲ್ಲುವುದರಲ್ಲಿ ಕೊಂಚ ಎಡವಿದ್ದ. ಊರಿಗೆ ಬಂದಿದ್ದ ಕಾರ್ತಿಕ್ ಲ್ಯಾಪ್‌ಟಾಪ್‌ನಲ್ಲಿ ಸ್ಪರ್ಧೆಯ ವಿವರ ತಿಳಿಸಿ ಅತ್ತಿದ್ದ. ಸ್ಪರ್ಧೆಯಲ್ಲಿ ಎಡವಿದ ಬೇಜಾರು ಅವನಲ್ಲಿತ್ತು. ಇದನ್ನು ಸಾತ್ವಿಕ್ ಕೂಡ ಕಂಡಿದ್ದ. ಅಣ್ಣನ ನೋವು ತಗ್ಗಿಸುವ ಕೆಚ್ಚು ತಮ್ಮನಲ್ಲಿತ್ತು. ಸಹಜವಾಗಿ ಆತ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾನೆ. ನಮಗೆ ಬಹಳ ಖುಷಿಯಾಗಿದೆ. ದೇಶಕ್ಕೆ ಹೆಮ್ಮೆ ತಂದಿದ್ದಾನೆ ಎಂದರು. 
       ನಾಗಪ್ಪಯ್ಯ ಕಾರ್ಣಿಕರ ಎರಡನೆ ಮಗ ವಿಶ್ವನಾಥ್ ಕುಂದಾಪುರದ ಭಂಡಾರ್ಸ್‌ಕಾರ್ಸ್‌ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು ಬಳಿಕ ಎಂಎಸ್‌ಸಿ, ಎಂಸಿಎ ಪದವಿ ಗಳಿಸಿದ್ದ. ಕಾಸರಗೋಡು ಕುಂಬಳೆ ಸರಳೆಮೂಲೆಯ ರತ್ನಾವತಿ ವಿಶ್ವನಾಥ್‌ನ ಮಡದಿ. ಸಾತ್ವಿಕ್‌ನ ಸಾಧನೆಯ ಹಿಂದೆ ಸೊಸೆ ರತ್ನಾವತಿಯ ಪಾತ್ರ ದೊಡ್ಡದು. ಅವರು ಬೆಳೆದುಬಂದ ಪರಿಸರವು ಜಿಯೋಗ್ರಾಫಿಕ್ ಸಬ್ಜೆಕ್ಟ್‌ಗೆ ಹತ್ತಿರವಾಗಿದೆ. ಹಾಗಾಗಿ ಆ ಸ್ಪರ್ಧೆಯಲ್ಲಿ ಗೆಲ್ಲಲು ಸಾತ್ವಿಕ್‌ಗೆ ಸಹಕಾರಿಯಾಗಿ ರಬಹುದು. ವಿಶ್ವನಾಥ್ ಕುಟುಂಬ ಸಿಂಗಾಪುರ, ಲಂಡನ್‌ನಲ್ಲಿದ್ದು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದೆ. ವಿಶ್ವನಾಥ್‌ನ ಪರಿವಾರ ಪ್ರತಿ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಬಂದು ಹೋಗಿದ್ದಾರೆ. ಸ್ಪರ್ಧೆಯಲ್ಲಿ ವಿಜಯಿಯಾದ ತಕ್ಷಣ ಮೊಮ್ಮಗ, ಮಗ ಎಲ್ಲರೂ ಕರೆ ಮಾಡಿದ್ದಾರೆ ಎಂದು ದಂಪತಿ ತಿಳಿಸಿದೆ. 

ಲೆಕ್ಕದಲ್ಲಿ ಕಾರ್ಣಿಕರು ಮುಂದೆ: 
    ಕರ್ಣಿಕ್ ವಂಶವಾಹಿನಿ ಲೆಕ್ಕದಲ್ಲಿ ಬಹಳ ಮುಂದೆ. ಇದು ಐತಿಹಾಸಿಕವಾಗಿ ಶ್ರುತಪಟ್ಟಿದೆ. ಹೊಸನಗರದಿಂದ ಮೊದಲ್ಗೊಂಡು ಕುಂದಾಪುರದ ಹಲ್ಸನಾಡು ತನಕ ಕರಣಿಕ (ಕರ್ಣಿಕ್) ಕುಟುಂಬಗಳು ನೆಲೆಸಿವೆ. ರಾಜಮಹಾರಾಜರು ಕಾಲದಿಂದಲೂ ಲೆಕ್ಕಾಚಾರ ವಿಭಾಗದಲ್ಲಿ ಖ್ಯಾತಿವೆತ್ತವರು. ಗ್ರಾಮಕರಣಿಕರು ಎಂಬ ಪದ ಕರಣಿಕ ವಂಶಸ್ಥರಿಂದಲೇ ಬಂದಿದೆ. ಈ ವಂಶವಾಹಿನಿಯ ಪ್ರಭಾವ ಮೊಮ್ಮಗನಲ್ಲಿಯೂ ಬಂದಿರಬಹುದು. ಇಷ್ಟೊಂದು ದೊಡ್ಡ ಸಾಧನೆ ಮಾಡಿರುವ ಆತ ಮುಂದೆ ಇನ್ನಷ್ಟು ಸಾಧನೆ ಮಾಡಲಿ ಎಂಬುವುದೇ ನಮ್ಮ ಹಾರೈಕೆ ಆಗಿದೆ ಎಂದು ನಾಗಪ್ಪಯ್ಯ ತಿಳಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com