ತಾಯಿ ಪ್ರಪಂಚದ ಅದ್ಭುತ ಪೋಷಣಾ ಶಕ್ತಿ: ಚಂದ್ರಶೇಖರ ಹೊಳ್ಳ

ಬೈಂದೂರು: ಈ ಜಗತ್ತಿನ ಎಲ್ಲ  ಜೀವಿಗಳಿಗೆ ತಾಯಿ ಎನ್ನುವುದು ಅದ್ಭುತ ಪೋಷಣಾ ಶಕ್ತಿ. ಆಕೆ ಹುಟ್ಟಿನಿಂದ ಕೊನೆಯ ತನಕವೂ ಧೈರ್ಯ, ಸ್ಪೂರ್ತಿ, ಸಮಾಧಾನ ಮತ್ತು ಆಸರೆ ನೀಡಲು ಸದಾ ಸಿದ್ದವಾಗಿರುತ್ತಾಳೆ ಎಂದು ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
      ಅವರು ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ನಡೆದ ಅಮ್ಮನಮಟ್ಟೆ ಸಂಪ್ರದಾಯ ಹಾಡುಗಳ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ಈ ಕೃತಿಯಲ್ಲಿ ಸಂಪ್ರದಾಯದ  ಗೀತೆಗಳ ಸಂಕಲನದಲ್ಲಿ ನಿರಂತರ ಆಸರೆ-ಮಾರ್ಗದರ್ಶನ ನೀಡುವ ಹಾಡುಗಳ ಸೆಲೆಯನ್ನು ಕಾಣಬಹುದು. ತಾಯಿ-ಮಕ್ಕಳ ಮತ್ತು ಸೋದರತ್ವ-ಬಂಧುತ್ವದ ಸ್ನೇಹ ವಲಯವೇ ಬದುಕಿನಲ್ಲಿ ಸಿಗಬಹುದಾದ ಸಾರ್ಥಕ ಕ್ಷಣಗಳಾಗಿರುತ್ತದೆ ಎಂದರು.
     ಕೃತಿ ಬಿಡುಗಡೆ ಮಾಡಿದ ಖ್ಯಾತ ಚಲನಚಿತ್ರ ನಟ ರಮೇಶಭಟ್ ಮಾತನಾಡಿ, ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ಸೋದರತ್ತೆ ದಿನನಿತ್ಯ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು ಮಾಡುತ್ತಿದ್ದ ಮೋಡಿಯನ್ನು ನೆನಪಿಸಿಕೊಂಡು ಅಂದಿನ ಸಹಜ ಜೀವನದ ಸೊಗಸು ಇಂದಿನ ಕೃತಕ, ನಾಟಕೀಯ ಬದುಕಿನಲ್ಲಿ ಸಿಗುತ್ತಿಲ್ಲ ಹಿಂದಿನ ದಿನಗಳಲ್ಲಿನ ಸಂಬಂಧಗಳ ನವಿರು ಭಾವಗಳು ಅವಿಸ್ಮರಣೀಯವಾಗಿರುತ್ತವೆ ಎಂದರು.
       ಸೂರ್ಯನಾರಾಯಣ ಅಡಿಗ ಕೃತಿ ಪರಿಚಯ ಮಾಡಿ ಇಲ್ಲಿನ ಸಂಪ್ರದಾಯದ ಹಾಡುಗಳು ಕೇವಲ ಮನೋರಂಜನೆಗೆ ಆಗಿರದೆ ಅನೇಕ ಪೌರಾಣಿಕ ಕತೆಗಳ ಕಥಾನಕಗಳಾಗಿದ್ದು ಜೀವನ ಮೌಲ್ಯ, ಪರಂಪರೆಗಳನ್ನು ಪರಿಚಯಿಸುತ್ತವೆ ಎಂದರು.
       ಕೃತಿಯ ಹಾಡುಗಾರ್ತಿ ಶಾರದಾ ಶ್ರೀನಿವಾಸ ಉಡುಪರನ್ನು ಮತ್ತು ಅದನ್ನು ಲಿಖಿತ ರೂಪಕ್ಕಿಳಿಸಿ ಪ್ರಕಟಿಸಿದ ಶ್ರೀಮತಿ ರಮಾ ಆಚಾರ್ಯರನ್ನು ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳ ಸನ್ಮಾನಿಸಿದರು. 
    ಕಾವೇರಿ ಸ್ವಾಗತಿಸಿದರು, ಸದಾಶಿವ ಉಡುಪ, ರಮಾ ಆಚಾರ್ಯ, ಮಾಲತಿ ಉಡುಪ, ಅತಿಥಿಗಳನ್ನ ಪರಿಚಯಿಸಿದರು. ಡಾ.ಚಂದ್ರಶೇಖರ ಅಡಿಗ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಉಡುಪ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com