ವರ್ಷಾಂತ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಜಾಗತಿಕ ಧರ್ಮ, ಶಾಂತಿ ಸಮ್ಮೇಳನ: ಪುತ್ತಿಗೆ ಶ್ರೀ


ಉಡುಪಿ: ಅಮೆರಿಕದ ನ್ಯೂಯಾರ್ಕ್‌ನಲ್ಲಿ ವರ್ಷಾಂತ್ಯಕ್ಕೆ ಜಾಗತಿಕ ಧರ್ಮ, ಶಾಂತಿ ಸಮ್ಮೇಳನ ಆಯೋಜಿಸಲಾಗುವುದು ಎಂದು ಅಂತಾರಾಷ್ಟ್ರೀಯ ಧರ್ಮ, ಶಾಂತಿ ಸಂಸ್ಥೆಯ ಅಧ್ಯಕ್ಷ ಉಡುಪಿ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ವಿಜಯ ಕರ್ನಾಟಕಕ್ಕೆ ಶುಕ್ರವಾರ ತಿಳಿಸಿದ್ದಾರೆ.
      2008ರಿಂದ ಅಂತಾರಾಷ್ಟ್ರೀಯ ಧರ್ಮ, ಶಾಂತಿ ಸಂಸ್ಥೆಯ ಅಧ್ಯಕ್ಷತೆ ವಹಿಸಿ, ಜೋರ್ಡಾನ್ ಸಹಿತ ಹಲವು ರಾಷ್ಟ್ರಗಳಲ್ಲಿ ಜಾಗತಿಕ ಸಮ್ಮೇಳನ, ಸಮಾವೇಶ ನಡೆಸಿರುವ ಉಡುಪಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಅಧಿಕಾರ ಅವಧಿ 2013ರ ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಜಾಗತಿಕ ಧರ್ಮ, ಶಾಂತಿ ಸಮ್ಮೇಳನ ಆಯೋಜಿಸಲಾಗುವುದು ಎಂದರು.
     ವಿಶ್ವಸಂಸ್ಥೆಯಲ್ಲಿ ನಿರ್ಣಯ ಕೈಗೊಳ್ಳಲು 100 ಕೋಟಿ ಸಹಿ ಸಂಗ್ರಹದ ಗುರಿಯಿದ್ದು, ಈಗಾಗಲೇ ಒಂದು ಕೋಟಿ ಸಹಿ ಸಂಗ್ರಹಿಸಲಾಗಿದೆ. ಆರು ಮಂದಿ ಧಾರ್ಮಿಕ ನಾಯಕರು ಜಗತ್ತಿನಾದ್ಯಂತ ಸುತ್ತಿ ಆಂದೋಲನ ನಡೆಸಲಿದ್ದಾರೆ. ದೇಶ-ದೇಶಗಳ ನಡುವೆ ವೌನವಾಗಿ ನಡೆಯುತ್ತಿರುವ ಶಸ್ತ್ರಾಸ್ತ್ರ ಪೈಪೋಟಿ ಮತ್ತು ಬಡತನ ಜಗತ್ತಿನ ಎರಡು ಪ್ರಮುಖ ಸಮಸ್ಯೆ. ಬಡತನ ಮಾನವ ಸೃಷ್ಟಿಯೇ ಹೊರತು ದೇವರ ಸೃಷ್ಟಿಯಲ್ಲ. ಸೃಷ್ಟಿಯ ಸಂಪನ್ಮೂಲದ ದುರುಪಯೋಗ ಮಾನವನಿಂದ ಹೆಚ್ಚಿದೆ.
     ನೆರೆ ದೇಶಗಳಿಂದ ಅಪಾಯದ ನೆಪದಲ್ಲಿ ರಾಷ್ಟ್ರಗಳ ರಕ್ಷಣಾ ಬಜೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮೂಲ ಸೌಲಭ್ಯಗಳಿಗೆ ವಿನಿಯೋಗ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಹೆಚ್ಚುತ್ತಿರುವ ಬಡತನ ನಿವಾರಣೆ ಸರಕಾರವೊಂದರಿಂದಲೇ ಅಸಾಧ್ಯ.
     ಜಾಗತಿಕ ಸಂಸ್ಥೆಗಳು ವಿಶ್ವಸಂಸ್ಥೆ ಮೂಲಕ ಅನಿವಾರ್ಯ ಪರಿಹಾರ ಕಂಡುಕೊಳ್ಳಬೇಕು. ಜಗತ್ತಿನ ಜನತೆ ಬಡತನದ ಹಾಹಾಕಾರದಿಂದ ಸಾಯುವ ಪರಿಸ್ಥಿತಿ ತಡೆಯಬೇಕು. ಆರ್ಮ್ಸ್ ಡೌನ್(ಶಸ್ತ್ರ ಕೆಳಗಿಡಿ) ಆಂದೋಲನ ಯಶಸ್ವಿಯಾದರೆ ಅಭಿವೃದ್ಧಿ, ಶಾಂತಿ ಸ್ಥಾಪನೆ ಮಾತ್ರವಲ್ಲ ದ್ವೇಷಾಸೂಯೆಯೂ ತಪ್ಪುವುದು ಸಾಧ್ಯ ಎಂದು ಪುತ್ತಿಗೆ ಶ್ರೀಪಾದರು ಹೇಳಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com