ತ್ರಾಸಿ: ಕಾಂಗ್ರೆಸ್ ಕಾರ್‍ಯಕರ್ತರ ಅಭಿನಂದನಾ ಸಭೆ

ಬೈಂದೂರು: ಸೈದ್ಧಾಂತಿಕ ಹೋರಾಟದ ಹಿನ್ನೆಲೆಯಿಂದ ಬಂದ ಶಾಸಕನು ತನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ  ಚಿಂತಿಸುತ್ತಿರುತ್ತಾನೆ. ಶಾಸಕನಾದವನು ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜೊತೆ ಜೊತೆಗೆ ಸದನದ ಒಳಗೆ ರಾಜ್ಯದ ಹಿತದ ಬಗ್ಗೆ ಚರ್ಚಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಜಯಪ್ರಕಾಶ ಹೆಗ್ಡೆ ಹೇಳಿದರು.
   ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್‍ಯಕರ್ತರ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
   ರಾಜ್ಯದಲ್ಲಿ ಆಶ್ರಯ ಮನೆ, ರೇಷನ್ ಕಾರ್ಡು ವಿತರಣೆ ಸ್ಥಗಿತಗೊಂಡಿದೆ, ಶಾಸಕರು ಇದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಇಗಾಗಲೇ ಪ್ರಣಾಳಿಕೆಯಲ್ಲಿ ಘೋಷಿಸಿದ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಕಾಂಗ್ರೆಸ್ ಕಾರ್‍ಯಕರ್ತರು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಮೂಲಕ ನಿಮ್ಮ ಪ್ರಸ್ತಾವನೆಗಳನ್ನು ಶಾಸಕರ ಮೂಲಕ ಕಾರ್‍ಯಗತಗೊಳಿಸಿಕೊಂಡು ಅಭಿವೃದ್ಧಿಗೆ ಪೂರಕ ಸಲಹೆ ನೀಡಿ ಎಂದರು.
        ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ವಿಯಾಗಿ ಪಕ್ಷ ಸಂಘಟಿಸಿದ ಹಿನ್ನೆಲೆಯಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬೈಂದೂರು ಕ್ಷೇತ್ರದಲ್ಲಿನ ಗೆಲುವು ಸಾಮೂಹಿಕ ನಾಯಕತ್ವಕ್ಕೆ ಸಂದ ಜಯವಾಗಿದ್ದು, ಇಲ್ಲಿ ಜಾತಿಕ್ಕಿಂತ ಪಕ್ಷ ಮೇಲು ಎಂದು ಜನತೆ ತೋರಿಸಿಕೊಟ್ಟಿದಾರೆ.  ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಬೈಂದೂರು ತಾಲೂಕು ರಚನೆ ಮತ್ತು ವಂಡ್ಸೆ ಹೋಬಳಿಯಲ್ಲಿ ವಿಶೇಷ ತಹಶೀಲ್ದಾರ ಕಛೇರಿ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
      ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಗಾಣಿಗ, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ರಘುರಾಮ ಶೆಟ್ಟಿ, ಮಾಣಿ ಗೋಪಾಲ, ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ,  ಮಹಿಳಾ ಕಾಂಗ್ರಸ್‌ನ ಸಾಧು ಬಿಲ್ಲವ, ಶಾರದಾ ಬಿಜೂರು, ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್‍ಯಕರ್ತರ ಪರವಾಗಿ ಮದನ ಕುಮಾರ ಹಾಗೂ ವಡಂಬಳ್ಳಿ ಜಯರಾಮ ಶೆಟ್ಟಿ ಮಾತನಾಡಿದರು, ಸಂಜೀವ ಶೆಟ್ಟಿ ಸ್ವಾಗತಿಸಿ, ವಾಸುದೇವ ಯಡಿಯಾಳ್ ನಿರ್ವಹಿಸಿದರು.    

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com