ಉದ್ಯೋಗ ಮಾರ್ಗದರ್ಶನ ಸಲಹಾ ಕೇಂದ್ರ ಸ್ಥಾಪನೆಗೆ ಒತ್ತಾಯ

ಉಡುಪಿ: ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಮಾರ್ಗದರ್ಶನ ನೀಡುವ ಸಲಹಾ ಕೇಂದ್ರಗಳನ್ನು ಪ್ರತಿಯೊಂದು ವಿವಿಯಲ್ಲೂ ಸ್ಥಾಪಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಇಂದು ದೇಶದಲ್ಲಿ ಸುಮಾರು 36 ಲಕ್ಷ ನಿರುದ್ಯೋಗಿ ಯುವಕರಿದ್ದು, ಅದರಲ್ಲಿ 24 ಲಕ್ಷ ಯುವಕರು ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶದವರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದ ಯುವಜನತೆಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಅವರ ನಿಪುಣತೆಗೆ ತಕ್ಕ ತರಬೇತಿ ಸಿಗದೆ ಇರುವುದೇ ಆಗಿದೆ. ಈ ಯುವಜನರಿಗೂ ಮಾಹಿತಿ ಹಾಗೂ ತರಬೇತಿ ಸಿಕ್ಕಿದರೆ ಅವರು ಕೂಡ ಉದ್ಯೋಗಿಗಳಾಗಿರುತ್ತಿದ್ದರು ಎಂದು ಮನವಿಯಲ್ಲಿ ಅಭಿಪ್ರಾಯಪಡಲಾಗಿದೆ.
ಕೆಲವು ಕಡೆಗಳಲ್ಲಿ ಶೈಕ್ಷಣಿಕ ಮಾಹಿತಿ ಕೇಂದ್ರಗಳಿದ್ದರೂ ಅವು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸೂಕ್ತ ಶೈಕ್ಷಣಿಕ ಮಾರ್ಗದರ್ಶನವಿಲ್ಲದೆ 10ನೇ ತರಗತಿಯ ಬಳಿಕ ಏನು ಮಾಡಬೇಕು, ಯಾವ ಕೋರ್ಸ್ ಮಾಡಬೇಕು ಎಂಬ ಮಾಹಿತಿ ಸಿಗದೆ, ಗೊಂದಲದಿಂದಾಗಿ ತಮ್ಮ ಆಸಕ್ತಿಯ ವಿಷಯಗಳ ಬಗ್ಗೆ ಅಧ್ಯಯನಕ್ಕೆ ಸಾಧ್ಯವಾಗುತ್ತಿಲ್ಲ. ಅನೇಕ ಮಂದಿ ಅರ್ಧದಲ್ಲಿಯೇ ಶಿಕ್ಷಣವನ್ನು ಕೈಬಿಡುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಘಟಕ ಪದಾಧಿಕಾರಿಗಳು, ಉಡುಪಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ಫರ್ಹಾನ್ ಹೊನ್ನಾಳ, ಕಾರ್ಯದರ್ಶಿ ಆಶಿಕ್ ಮುಳೂರು, ಶಫಿಕ್ ಉಡುಪಿ, ಸಕಿಫ್ ಮತ್ತಿತರರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com