ರಾಜ್ಯ ಕಾಂಗ್ರೆಸ್‌ ಸರಕಾರದಿಂದ ಗೊಂದಲ ಸೃಷ್ಟಿ : ಶ್ರೀನಿವಾಸ ಪೂಜಾರಿ


ಕುಂದಾಪುರ: ರಾಜ್ಯದಲ್ಲಿ ದಿಢೀರನೇ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರ ತನ್ನ ಕೆಲವು ದಿಢೀರ್‌ ನಿರ್ಧಾರಗಳಿಂದ ಗೊಂದಲ ಸೃಷ್ಟಿಸುತ್ತಿದ್ದು, ಇಂತಹ ಗೊಂದಲದ ನಿರ್ಧಾರಗಳು ಹಾಗೂ ಹೇಳಿಕೆಗಳ‌ನ್ನು ಬಿಜೆಪಿ ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
      ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸರಕಾರ ಆಡಳಿತಕ್ಕೆ ಬಂದ ಎರಡೇ ವಾರದಲ್ಲಿ ಜನರಿಗೆ ನಿರಾಶೆ ಮೂಡಿಸಿದೆ. ಕಾಂಗ್ರೆಸ್‌ ಸರಕಾರ ಕೆಲವು ವಿಷಯಗಳ ಬಗ್ಗೆ ಈಗಾಗಲೇ ತಳೆದ ನಿರ್ಧಾರಗಳ ಬಗ್ಗೆ ಪುನರ್‌ ವಿಮರ್ಶೆ ಮಾಡಿಕೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.
         ರಾಜ್ಯದಲ್ಲಿ ಬಿಜೆಪಿ ಸರಕಾರ 43 ಹೊಸ ತಾಲೂಕುಗಳನ್ನು ರಚಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಬಹಳಷ್ಟು ವರ್ಷಗಳ ಬೇಡಿಕೆಗೆ ಒಂದು ಸ್ವರೂಪ ನೀಡಿತ್ತು. ಆದರೆ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೊದಲಲ್ಲೇ ತಾಲೂಕು ರಚನೆ ಪ್ರಸ್ತಾವವನ್ನು ರದ್ದುಗೊಳಿಸಲು ಮುಂದಾಗಿರುವುದು ಹಿಂದಿನ ಸರಕಾರದ ಭಾವನೆಗಳಿಗೆ ಹಾಗೂ ಜನರ ಆಶಯಗಳಿಗೆ ನೀಡಿದ ಕೊಡಲಿ ಏಟಾಗಿದೆ. ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ನಡೆಸಲಿದೆ ಎಂದರು.
        ಬಡ - ಕೂಲಿಕಾರ್ಮಿಕರು ಪ್ಯಾಕೆಟ್‌ ಮದ್ಯದ ಗುಂಗಿನಿಂದ ಹೊರಬರಬೇಕು ಎನ್ನುವ ದೃಷ್ಟಿಯಿಂದ, ಮಹಿಳೆಯರ ಬೇಡಿಕೆಗೆ ಪೂರಕವಾಗಿ ಪ್ಯಾಕೆಟ್‌ ಮದ್ಯ ಮಾರಾಟವನ್ನು ಬಿಜೆಪಿ ಸರಕಾರ ನಿಲ್ಲಿಸಿತ್ತು. ಆದರೆ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ದಿನವೇ ಬಡವರಿಗೆ ಕಡಿಮೆ ದರದಲ್ಲಿ ಮದ್ಯ ಮಾರಾಟದ ಬಗ್ಗೆ ಚಿಂತನೆ ನಡೆಸಿರುವುದು ಜನವಿರೋಧಿ ನಿರ್ಧಾರವಾಗಿದ್ದು, ಈ ಬಗ್ಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
        ಉಡುಪಿ ಮಠ ಹಾಗೂ ಗೋಕರ್ಣ ದೇವಸ್ಥಾನವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಹೊಸ ಸರಕಾರ ಇಂಗಿತ ವ್ಯಕ್ತಪಡಿಸಿದ್ದು, ಈ ನಿರ್ಧಾರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇನ್ನೊಂದು ಅಂಶವಾಗಿ ಮೂಡಿಬರಲಿದೆ. ಇದರ ಸಾಧಕ -ಬಾಧಕಗಳ ಬಗ್ಗೆ ಸಂಪೂರ್ಣ ಚರ್ಚೆಗೆ ಒಳಪಡಿಸಿ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
     ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸುವ ಬಗ್ಗೆ ಹೊಸ ಸರಕಾರ ನಿರ್ಧಾರವನ್ನು ಕೈಗೊಂಡಿರುವುದು ಕಳವಳಕಾರಿಯಾಗಿದೆ. ಈಗಾಲೇ ಅನೇಕ ಮುಖಂಡರು ಈ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಎಂದರು.
       ಪತ್ರಿಕಾಗೋಷ್ಠಿಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಕೆ. ಮೋಹನದಾಸ ಶೆಣೈ, ಕುಂದಾಪುರ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕಾವೇರಿ, ಯುವಮೋರ್ಚಾ ಅಧ್ಯಕ್ಷ ಶ‌ಂಕರ ಅಂಕದಕಟ್ಟೆ, ಕೋಟೇಶ್ವರ ಶಕ್ತಿ ಕೇಂದ್ರದ ರವೀಂದ್ರ ದೊಡ್ಮನೆ, ಪುರಸಭೆಯ ಸದಸ್ಯರಾದ ಸತೀಶ್‌ ಶೆಟ್ಟಿ, ರವಿರಾಜ ಖಾರ್ವಿ, ಸುರೇಶ್‌ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಪಕ್ಷವಿರೋಧಿ ಚಟುವಟಿಕೆ: ಕ್ರಮ
  ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ವಿರುದ್ಧ ಸ್ಥಳೀಯ ಜನಪ್ರತಿನಿಧಿಗಳು ಮಾಡಿದ ಪಕ್ಷವಿರೋಧಿ ಚಟುವಟಿಕೆಗಳ ಬಗ್ಗೆ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿ, ಈ ಬಗ್ಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಗ್ಗೆ ಏನೂ ಹೇಳುವಂತಿಲ್ಲ. ಅವರು ತಾನು ಆಯ್ಕೆಯಾದ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಅವರ ಬೆಂಬಲಿಗ ಜನಪ್ರತಿನಿಧಿಗಳು ಹಾಲಾಡಿಯವರನ್ನೇ ಅನುಸರಿಸಿ ಅವರ ಗೌರವವನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವುದು ಪಕ್ಷದ ಕಲ್ಪನೆಯಾಗಿತ್ತು. ಹಾಗೆ ನಡೆಯದ ಬಗ್ಗೆ ಕಾರಣವನ್ನು ಬೆಂಬಲಿಗ ಜನಪ್ರತಿನಿಧಿಗಳೇ ತಿಳಿಸಬೇಕು. ಆದರೆ ಕುಂದಾಪುರ ಬಿಜೆಪಿ ನೀಡಿದ ವರದಿಯಂತೆ ರಾಜ್ಯ ಬಿಜೆಪಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಈಗಾಗಲೇ ತಿಳಿಸಿದೆ ಎಂದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com