ವಿದ್ಯಾರ್ಥಿನಿಯರಿಗೆ ಉಚಿತ ಬಿ.ಇ ಶಿಕ್ಷಣ!

ಸುದ್ದಿ ಜಾಲ: ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆ 35 ಕೋರ್ಸ್‌ಗಳಲ್ಲಿ ಶಿಕ್ಷಣ ನೀಡಲು ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ವಾರ್ಷಿಕರೂ 6 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಯಾವುದೇ ವರ್ಗದ ವಿದ್ಯಾರ್ಥಿನಿಯರಿಗೆ ಎಲ್ಲ ಕೋರ್ಸ್‌ಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
    ಈ ಬಗ್ಗೆ  ಕೇಂದ್ರೀಯ ವಿ.ವಿ ಸಹಾಯಕ ರಿಜಿಸ್ಟ್ರಾರ್ ವೀರಣ್ಣ ಕಮ್ಮಾರ ಈ ಮಾಹಿತಿ ನೀಡಿದರು. ಈ ವರ್ಷದಿಂದ ಐದು ವರ್ಷಗಳ ಎಂಜಿನಿಯರಿಂಗ್ ಪದವಿ ಕೋರ್ಸ್ ಸಹ ಆರಂಭಿಸಲಾಗಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆರೂ 25,000 ಪ್ರವೇಶ ಶುಲ್ಕ ಪಡೆಯಲಾಗುತ್ತದೆ. ಆದರೆ, ಬಡ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಜತೆಗೆ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದರು.
          ದಂಪತಿಗೆ ಏಕೈಕ ಮಗಳಿದ್ದರೆ ಅವರ ಆದಾಯವನ್ನು ಗಮನಿಸದೆ ಆ ವಿದ್ಯಾರ್ಥಿನಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ. ಇದು ಸಹ ಕೇಂದ್ರದ ನಿರ್ಧಾರವಾಗಿದ್ದು, ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು. ಸಿ‌ಇಟಿಗೆ ಹಾಜರಾದ ವಿದ್ಯಾರ್ಥಿಗಳು ಕೇಂದ್ರೀಯ ವಿ.ವಿಗೆ ಪ್ರತ್ಯೇಕವಾಗಿ ಅರ್ಜಿ ಹಾಕಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ರ‌್ಯಾಂಕ್ ಪಟ್ಟಿ ಪಡೆದುಕೊಂಡು, ಬಂದ ಅರ್ಜಿಗಳ ಆಧಾರದ ಮೇಲೆ ಕಾಲೇಜು ಮತ್ತೊಂದು ಶ್ರೇಯಾಂಕ ಪಟ್ಟಿ ತಯಾರು ಮಾಡಲಿದೆ. ಅದರಂತೆ ಮೊದಲ 70 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.
     ಭೌತ ವಿಜ್ಞಾನ, ರಾಸಾಯನ ವಿಜ್ಞಾನ ಮತ್ತು ಗಣಿತ ವಿಜ್ಞಾನದಲ್ಲಿ ಐದು ವರ್ಷಗಳ ಪದವಿ ಕೋರ್ಸ್‌ಗಳನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಜಿಯೊ ಇನ್ಫರ್ಮ್ಯಾಟಿಕ್ಸ್ ವಿಷಯದಲ್ಲಿ ಎಂಎಸ್ಸಿ ಕೋರ್ಸ್ ಶುರು ಮಾಡಲಾಗಿದ್ದು, ದೇಶದ ಬೇರೆ ಯಾವ ವಿ.ವಿಯಲ್ಲೂ ಇಂತಹ ಕೋರ್ಸ್ ಇಲ್ಲ ಎಂದು ವಿ.ವಿಯ ಸಹಾಯಕ ಪ್ರಾಧ್ಯಾಪಕಿ ಪ್ರಿಯಾನಾರಾಯಣನ್ ಹೇಳಿದರು.
       ಭೂಕಂಪ, ಸುನಾಮಿ, ಜಾಗತಿಕ ತಾಪಮಾನ ಮೊದಲಾದ ಸಂಗತಿಗಳು ಈಚಿನ ದಿನಗಳಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಜಿಯೊ ಇನ್ಫರ್ಮ್ಯಾಟಿಕ್ಸ್ ಅವುಗಳೊಂದಿಗೆ ನೇರವಾಗಿ ವ್ಯವಹರಿಸುತ್ತದೆ ಎಂದು ಕೋರ್ಸ್ ಮಹತ್ವ ತೆರೆದಿಟ್ಟರು. ಭೂಮಿ, ನೀರು ಮತ್ತು ಕೃಷಿ ನಿರ್ವಹಣೆಯಲ್ಲಿ ಈ ತಂತ್ರಜ್ಞಾನದ ಪಾತ್ರ ಬಹು ಮುಖ್ಯವಾಗಿದೆ ಎಂದರು.
          ಉದ್ಯೋಗಾವಕಾಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಈ ಕೋರ್ಸ್ ಆರಂಭಿಸಲಾಗಿದ್ದು, ಭವಿಷ್ಯದಲ್ಲಿ ಭಾರಿ ಬೇಡಿಕೆ ಗಿಟ್ಟಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭೂಗೋಳ ವಿಜ್ಞಾನ, ಭೂಗರ್ಭ ವಿಜ್ಞಾನ, ಮನೊವಿಜ್ಞಾನ, ಶಾಸ್ತ್ರೀಯ ಕನ್ನಡ, ಭಾಷಾಶಾಸ್ತ್ರ ಕೋರ್ಸ್‌ಗಳು ವಿ.ವಿಯಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಲಭ್ಯವಿರುವ ವಿಶಿಷ್ಟ ವಿಷಯಗಳಾಗಿವೆ ಎಂದು ವಿವರಿಸಿದರು.
      ವಿ.ವಿಯಲ್ಲಿ ಜೂನ್ 8ರಂದು ಪದವಿ ಪ್ರವೇಶ ಪರೀಕ್ಷೆ ಮತ್ತು ಜುಲೈ 13ರಂದು ಸ್ನಾತಕ ಪದವಿ ಪ್ರವೇಶ ಪರೀಕ್ಷೆ ನಡೆಸಲಿದೆ. ಅರ್ಜಿ ಸಲ್ಲಿಕೆಗೆ ಮೇ 30 ಕಡೆಯ ದಿನವಾಗಿದೆ.
        ಗುಲ್ಬರ್ಗದ ಹೊರ ವಲಯದಲ್ಲಿರುವ ಕಡಗಂಚಿ ಗ್ರಾಮದಲ್ಲಿ 650 ಎಕರೆ ವಿಸ್ತೀರ್ಣದಲ್ಲಿ ನಾಲ್ಕು ವರ್ಷಗಳ ಹಿಂದೆ (2009) ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯ ತಲೆ ಎತ್ತಿದೆ. 28 ಕಟ್ಟಡಗಳು ಈಗಾಗಲೇ ಸಿದ್ಧಗೊಂಡಿವೆ. ವಿ.ವಿಗೆ ಅಗತ್ಯವಾದ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗಿದೆ.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com