ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವ್ಯಾಪಕ ಖಂಡನೆ. ಬೀದಿಗಿಳಿದ ವಿಧ್ಯಾರ್ಥಿಗಳು-ಸಂಘ ಸಂಸ್ಥೆಗಳು, ಪೋಲಿಸರಿಂದ ತಂಡ ರಚನೆ, ಮೂವರು ವಶಕ್ಕೆ. ಗೃಹ ಸಚಿವರ ಭೇಟಿ

ಉಡುಪಿ/ಮಣಿಪಾಲ/ಮಂಗಳೂರು/ಕುಂದಾಪುರ: ಮಣಿಪಾಲದಲ್ಲಿ ಗುರುವಾರ ರಾತ್ರಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಉಡುಪಿ ಕುಂದಾಪುರ ಮಣಿಪಾಲದ ಹಲವಾರು ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಫಟನೆಗಳು, ನಗರದ ನಾಗರಿಕರು ಬೀದಿಗಳಿದು ಪ್ರತಿಭಟಿಸಿದರು. 

      ಉಡುಪಿಯಲ್ಲಿ ತರಗತಿಗಳನ್ನು ಬಹಿಷ್ಕರಿಸಿದ ಶಾಲೆ-ಕಾಲೇಜು ವಿದ್ಯಾರ್ಥಿಗಳು ನಗರದೊಳಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್, ಎಸ್ಪಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 
      ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುವ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಪೊಲೀಸ್ ಇಲಾಖೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮುಂತಾದ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು. 
     ಉಡುಪಿ ಬನ್ನಂಜೆಯಲ್ಲಿರುವ ತಹಸೀಲ್ದಾರ್ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗಳ ಮುಂದೆ ಬೆಳಗ್ಗಿನಿಂದಲೇ ಪ್ರತಿಭಟನೆಯ ಮೋಡ ಆವರಿಸಿತ್ತು. ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಬಳಿಯ ಕ್ಲಾಕ್ ಟವರ್ ಎದುರು ಹಲವಾರು ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆ ಸಂದರ್ಭ ಸರ್ವಿಸ್ ಬಸ್ ನಿಲ್ದಾಣ ಎದುರು ವಾಹನ ಸಂಚಾರ ಅಸ್ತವ್ಯಸ್ತವಾಯಿತು. 

*ಎಬಿವಿಪಿ: ಈ ಪ್ರಕರಣ ಇಡಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ನಡೆಸಬೇಕು. ಅತ್ಯಾಚಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಮಾನ ಹಾಗೂ ಪ್ರಾಣ ರಕ್ಷಣೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಸಂಘಟಕ ಶಿವಕುಮಾರ್, ನಗರ ಕಾರ್ಯದರ್ಶಿ ಅಭಿಷೇಕ್ ಜೈನ್, ವಿಷ್ಣು, ಅಭಿಷೇಕ್, ದೀಪಕ್, ರಕ್ಷಿತಾ, ಅಕ್ಷತಾ, ಪ್ರಮೀಳಾ ವಹಿಸಿದ್ದರು. ನಂತರ ಎಸ್ಪಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಎಸ್ಪಿ ಡಾ. ಎಂ.ಬಿ. ಬೋರಲಿಂಗಯ್ಯರಿಗೆ ಮನವಿ ಸಲ್ಲಿಸಿದರು. 

*ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ: ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಮಣಿಪಾಲದಲ್ಲಿ ನಡೆದ ಈ ಘಟನೆ ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಅತ್ಯಾಚಾರ ಎಸಗಿದ ಪಾತಕಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಘಟಕ ಒತ್ತಾಯಿಸಿತು. ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ಆಶಿಖ್ ಮೂಳೂರು, ಪದಾಧಿಕಾರಿಗಳಾದ ಫರ್ಹಾನ್ ಹೊನ್ನಾಳ, ಶಫೀಕ್ ಉಡುಪಿ, ರಾಜೇಶ್ ಉಪಸ್ಥಿತರಿದ್ದರು. 

*ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಕರ್ನಾಟಕ ಉಡುಪಿ ಜಿಲ್ಲಾ ಘಟಕ: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿತು. ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ ತ್ವರಿತ ನ್ಯಾಯ ದಾನದ ವ್ಯವಸ್ಥೆಗೆ ಒತ್ತಾಯಿಸಿತು. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾಧ್ಯಕ್ಷೆ ಫರ್ಹಾತ್ ದಾವೂದ್, ಕಾರ್ಯಕ್ರಮ ಸಂಯೋಜಕಿ ನವೇದಾ ಅಸಾದಿ, ಖುಲ್ಸೂಂ ಅಬೂಬಕ್ಕರ್, ಸಮೀನಾ ಶುಕೂರ್ ಮೊಹಮ್ಮದ್ ಮರಕಡ, ಇದ್ರಿಸ್ ಹೂಡೆ, ಅನ್ವರ್ ಅಲಿ ಕಾಪು, ಮಹಮ್ಮದ್ ವೌಲ, ಯಾಸೀನ್ ಕಾಪು ಉಪಸ್ಥಿತರಿದ್ದರು. 

*ಸೈಂಟ್ ಸಿಸಿಲಿ ವಿದ್ಯಾಸಂಸ್ಥೆ: ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳು ಉಡುಪಿ ತಹಸೀಲ್ದಾರ್ ಕಚೇರಿ ತನಕ ಮೆರವಣಿಗೆ ನಡೆಸಿ ಪ್ರಕರಣಕ್ಕೆ ಸಂಬಂಸಿ ಶೀಘ್ರ ನ್ಯಾಯಕ್ಕೆ ಆಗ್ರಹಿಸಿದರು. ಅತ್ಯಾಚಾರಿಗಳನ್ನು ಕೂಡಲೇ ಬಂಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಹಗಲು-ರಾತ್ರಿ ನಿರ್ಭೀತರಾಗಿ ಸಂಚರಿಸುವಂತಾಗಲು ಪೊಲೀಸ್ ಇಲಾಖೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕು ಎಂದು ತಹಸೀಲ್ದಾರ್ ಮೂಲಕ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳ ಬೇಡಿಕೆಯನ್ನು ಸಂಸ್ಥೆಯ ಪ್ರಿನ್ಸಿಪಾಲ್ ಸಿ. ರೋಜಿ ಮೆಂಡೋನ್ಸಾ ತಹಸೀಲ್ದಾರ್ ಅಭಿಜಿನ್ ಅವರಿಗೆ ಸಲ್ಲಿಸಿದರು. ಈ ಸಂದರ್ಭ ರೆ.ಫಾ. ವಿಲಿಯಂ ಮಾರ್ಟಿಸ್, ವಿದ್ಯಾರ್ಥಿ ಶಿಕ್ಷಕ ರಕ್ಷಕ ಸಂಘದ ಯು. ನಜೀರ್, ಗೋಪಾಲ ಶೆಟ್ಟಿ, ಉಡುಪಿಯ ವುಮನ್ಸ್ ಫಾರಂನ ಗಾಯತ್ರಿ ಉಪಾಧ್ಯಾಯ ಹಾಗೂ ಕಲ್ಪನಾ ಉಪಸ್ಥಿತರಿದ್ದರು. 

*ದ.ಕ. ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘ: ಅತ್ಯಾಚಾರ ಪ್ರಕರಣವನ್ನು ದ.ಕ. ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘ ಖಂಡಿಸಿದೆ. ಕೃತ್ಯ ಎಸಗಿದ ಆರೋಪಿಗಳನ್ನು ತತ್‌ಕ್ಷಣವೇ ಬಂಧಿಸಬೇಕು ಮತ್ತು ವಿದ್ಯಾರ್ಥಿಗಳ ರಕ್ಷಣೆಗೆ ರಕ್ಷಣಾ ಪಡೆ ರಚಿಸಬೇಕೆಂದು ದ.ಕ. ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ನಿಯೋಗದಲ್ಲಿ ಪ್ರಮುಖರಾದ ದಿನಕರ ಶೆಟ್ಟಿ, ಉತ್ತಮ್‌ ಆಳ್ವ, ಶಿಫಾಲ್‌ರಾಜ್‌, ಅಕ್ಷತಾ ಕೆ, ನಿತಿನ್‌, ರಕ್ಷಿತ್‌, ಶ್ರವಣ್‌, ಲಿಖೀತ್‌, ಕಾರ್ತಿಕ್‌ ಮುಂತಾದವರು ಉಪಸ್ಥಿತರಿದ್ದರು.

*ಧರ್ಮಾಧ್ಯಕ್ಷರ ಖಂಡನೆ: ಮಣಿಪಾಲದಲ್ಲಿ ವೈದ್ಯಕಿಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ‌ ಘಟನೆಯ ಬಗ್ಗೆ ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂದನೀಯ ಅಲೋಶಿಯಸ್‌ ಪಾವ್‌ ಡಿ'ಸೋಜಾ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಉತ್ತಮ ಶೈಕ್ಷಣಿಕ ವಾತಾವರಣ ಇರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾರ್ಜನೆಗಾಗಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಮಣಿಪಾಲದಲ್ಲಿ ಜೂ. 20ರಂದು ರಾತ್ರಿ ಸಂಭವಿಸಿದ ಘಟನೆ ವಿದ್ಯಾರ್ಥಿ - ವಿದ್ಯಾರ್ಥಿನಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದವರು ತಿಳಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು ರಾಜ್ಯ ಸರಕಾರ ಮತ್ತು ಪೊಲೀಸ್‌ ಇಲಾಖೆ ನಮ್ಮ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಸಾಮೂಹಿಕ ಅತ್ಯಾಚಾರ ಎಸಗಿದವರನ್ನು ಪತ್ತೆಹಚ್ಚಿ ಅವರ ಮೇಲೆ ಕಠಿನ ಕ್ರಮ ಜರಗಿಸ ಬೇಕು ಹಾಗೂ ಇಂತಹ ಘಟನೆ ಮರುಕಳಿಸಲು ಅವಕಾಶ ಮಾಡಿಕೊಡ ಬಾರದು ಎಂದು ಆಗ್ರಹಿಸಿದ್ದಾರೆ.

*ಕುಂದಾಪುರ ಕಾಂಗ್ರೆಸ್‌ ಖಂಡನೆ: ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಕುರಿತು ಕೂಡಲೇ ಕಾನೂನು ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಿ ಅವರನ್ನು ನೇಣಿಗೇರಿಸುವ ಮೂಲಕ ಇಂತಹ ದುಷ್ಕೃತ್ಯಗಳು ಪುನರಾವರ್ತನೆಯಾಗದಂತೆ ಮಾಡಬೇಕು ಎಂದು ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದೆ.
     ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ವಿಕಾಸ್‌ ಹೆಗ್ಡೆ, ಪುರಸಭೆ ಮಾಜಿ ಅಧ್ಯಕ್ಷೆ ದೇವಕಿ ಪಿ. ಸಣ್ಣಯ್ಯ, ಮಾಜಿ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ಜಿ.ಪಂ. ಮಾಜಿ ಸದಸ್ಯೆ ರೇವತಿ ಎಸ್‌. ಶೆಟ್ಟಿ, ಪುರಸಭಾ ಸದಸ್ಯರಾದ ಪುಷ್ಪಾ ಶೇಟ್‌, ವಸಂತಿ ಸಾರಂಗ, ರವಿಕಲಾ ಗಣೇಶ್‌, ಪ್ರಭಾಕರ ಕೋಡಿ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ, ಶಕುಂತಲಾ ಗುಲ್ವಾಡಿ, ಸಂದೀಪ ಪೂಜಾರಿ, ಜ್ಯೋತಿ ಮತ್ತಿತರ ನಾಯಕರು ಘಟನೆಯನ್ನು ಖಂಡಿಸಿದ್ದಾರೆ ಮತ್ತು ಪುಂಡುಪೋಕರಿಗಳಿಂದ ಉಡುಪಿ ಜಿಲ್ಲೆಯ ಮಹಿಳೆಯರ ಮಾನ ಮತ್ತು ಪ್ರಾಣವನ್ನು ಉಳಿಸಬೇಕು ಎಂದು ಪೊಲೀಸ್‌ ಇಲಾಖೆಯನ್ನು ಒತ್ತಾಯಿಸಿದ್ದಾರೆ.

*ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ: ಅತ್ಯಾಚಾರ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ನೇತೃತ್ವದಲ್ಲಿ ಎಸ್ಪಿಯವರಿಗೆ ಮನವಿ ಸಲ್ಲಿಸಿತು.  ಘಟನೆ ಪುನರಾವರ್ತನೆಯಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ನಗರಸಭೆ ಸದಸ್ಯರಾದ ಅಮೃತಾ ಕೃಷ್ಣ ಮೂರ್ತಿ, ಮೀನಾಕ್ಷಿ ಮಾಧವ, ಸೆಲಿನಾ ಕರ್ಕಡ, ಸಂಧ್ಯಾ, ತಾ.ಪಂ. ಸದಸ್ಯೆಡಾ. ಸುನೀತಾ ಶೆಟ್ಟಿ, ಶಾಸಕ ಪ್ರಮೋದ್ ಮಧ್ವರಾಜ್ ಅವರ ಪತ್ನಿ ಸುಪ್ರಿಯಾ, ಸಂಘಟನೆಯ ಪದಾಧಿಕಾರಿಗಳಾದ ಮಮತಾ ಶೆಟ್ಟಿ, ಇಂದಿರಾ, ಪ್ರೆಸಿಲ್ಲಾ ಡಿಮೆಲ್ಲೊ, ಜ್ಯೋತಿ ಹೆಬ್ಬಾರ್, ಸಪ್ತಮಿ, ನಳಿನಾಕ್ಷಿ, ಗೀತಾ, ಆಗ್ನೇಸಾ ಡೇಸಾ, ಜೆಸಿಂತಾ ಪಿಂಟೋ, ಸುಲೋಚನಾ ದಾಮೋದರ, ಐರಿನ್ ಅಂದ್ರಾದೆ ಉಪಸ್ಥಿತರಿದ್ದರು.

*ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ: ಮಣಿಪಾಲದ ಘಟನೆಯನ್ನು ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಖಂಡಿಸಿದ್ದು ಮಣಿಪಾಲಕ್ಕೆ ಆಗಮಿಸಿದ ಗೃಹ ಸಚಿವರಿಗೆ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್‌ ಮತ್ತು ಪ್ರಧಾನ ಕಾರ್ಯದರ್ಶಿ ವಸಂತಿ ರಾವ್‌ ಕೊರಡ್ಕಲ್‌ ಇದ್ದರು. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಅಮೃತ್‌ ಶೆಣೈ ಆಗ್ರಹಿಸಿದ್ದಾರೆ.

*ರಿಕ್ಷಾ ಚಾಲಕ-ಮಾಲಕರ ಸಂಘ: ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ತನಿಖೆಗೆ ಮಣಿಪಾಲ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಎಲ್ಲ ಸದಸ್ಯರು ಸಹಕಾರ ನೀಡುತ್ತಾರೆಂದು ಸಂಘದ ಗೌರವಾಧ್ಯಕ್ಷ ರಮೇಶ ಕಾಂಚನ್‌, ಅಧ್ಯಕ್ಷ ವಿಜಯ ಪುತ್ರನ್‌ ತಿಳಿಸಿದ್ದಾರೆ

*ವಿಹಿಂಪ, ಬಜರಂಗದಳ: ಘಟನೆಯಿಂದ ಜಿಲ್ಲೆಗೆ ಅಗೌರವ ಆಗಿದ್ದು ಇಂತಹ ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಇಂತಹ ಕ್ರಿಮಿನಲ್‌ ಶಕ್ತಿಗಳಿಗೆ ಕಡಿವಾಣ ಹಾಕಬೇಕು. ಹೀಗೆ ಮಾಡದೆ ಇದ್ದರೆ ವಿಶ್ವ ಹಿಂದೂ ಪರಿಷದ್‌, ಬಜರಂಗದಳ ಬೃಹತ್‌ ಪ್ರತಿಭಟನೆ ನಡೆಸಲಿದೆ ಎಂದು ಎಸ್ಪಿಯವರಿಗೆ ಸಲ್ಲಿಸಿದ ಪ್ರತಿಭಟನಾ ಮನವಿಯಲ್ಲಿ ವಿಹಿಂಪ, ಬಜರಂಗದಳ ತಿಳಿಸಿವೆ.
      ಪ್ರತಿಭಟನೆಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ಕಾರ್ಯದರ್ಶಿ ಮಟ್ಟಾರ್‌ ಗಣೇಶ್‌ ಕಿಣಿ, ಬಜರಂಗದಳದ ಸುನಿಲ್‌ ಕುಮಾರ್‌, ಸುಮಿತ್‌ ಬೈಲೂರು, ದಿನೇಶ ಮೆಂಡನ್‌, ಅನಿಲ್‌ ಕುಮಾರ್‌, ವಿಲಾಸ ನಾಯಕ್‌, ಉದಯ ಕುಮಾರ್‌, ರಾಜೇಶ ಪೆರಾಲ್ಕೆ, ಗಿರೀಶ ಅಂಚನ್‌ ಮೊದಲಾದವರು ಉಪಸ್ಥಿತರಿದ್ದರು.

* ಸ್ಥಾಪಿತ ಹಿತಾಸಕ್ತಿಗಳ ಕೈವಾಡ: ಯಶಪಾಲ್‌
     ಪೊಲೀಸರಿಗೆ ಸುಳಿವು ಸಿಕ್ಕಿದ್ದರೂ ಅಲ್ಪಸಂಖ್ಯಾಕರು ಎಂಬ ಕಾರಣಕ್ಕೆ ಅವರನ್ನು ರಕ್ಷಿಸುವ ಸ್ಥಾಪಿತ ಹಿತಾಸಕ್ತಿಗಳು ಕೈವಾಡ ನಡೆಸುತ್ತಿವೆ ಎಂದು ದ.ಕ. ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ಆರೋಪಿಸಿದ್ದಾರೆ.
     ಕೆಲವು ದಿನಗಳ ಹಿಂದೆ ಉದ್ಯಾವರ ಸಮೀಪ ಅಜಾಗರೂಕತೆಯಿಂದ ಮಿತಿ ಮೀರಿದ ವೇಗದಲ್ಲಿ ಬಸ್‌ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಲ್ಲಿಸಿ ವಿಚಾರಿಸಿದ ಸಂದರ್ಭ ಕೆಲವು ಕಾಂಗ್ರೆಸ್‌ ಕಾರ್ಯಕರ್ತರನ್ನು ನಮ್ಮ ವಿರುದ್ಧ ಎತ್ತಿಕಟ್ಟಿ ಉಡುಪಿಯಲ್ಲಿ ದಿಢೀರ್‌ ಬಸ್‌ ಮುಷ್ಕರಕ್ಕೆ ಕಾರಣರಾದವರೇ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ನಿಂತಿರುವುದನ್ನು ಸಹಿಸಲಾಗದು. ಇನ್ನಾದರೂ ಯುವತಿಯರು ಎಚ್ಚರದಿಂದ ಇರಬೇಕು ಎಂದು ಸುವರ್ಣ ವಿನಂತಿಸಿದ್ದಾರೆ.

*ತಪ್ಪಿತಸ್ಥರ ರಕ್ಷಣೆಗೆ ಒತ್ತಡ: ಹಿಂಯುಸೇ ಆರೋಪ
       ಪೊಲೀಸರಿಗೆ ತಪ್ಪಿತಸ್ಥರ ಮಾಹಿತಿ ಇದ್ದರೂ ರಾಜಕೀಯ ಒತ್ತಡದಿಂದ ಅವರನ್ನು ಬಚಾವ್‌ ಮಾಡುವ ಯತ್ನ ನಡೆಯುತ್ತಿರುವ ಬಗ್ಗೆ ಜಿಲ್ಲಾ ಹಿಂದೂ ಯುವಸೇನೆ ಶಂಕೆ ವ್ಯಕ್ತಪಡಿಸಿದೆ.
ಆರೋಪಿಗಳ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿರುವ ವದಂತಿ ಇದೆ. ಅದರ ಜೊತೆಗೆ ವೋಟ್‌ಬ್ಯಾಂಕ್‌ ರಾಜಕೀಯಕ್ಕಾಗಿ ಪ್ರಬಲ ಶಕ್ತಿಗಳಿಂದ ಅವರನ್ನು ರಕ್ಷಿಸುವ ಯತ್ನಗಳ ಬಗ್ಗೆ ಗುಲ್ಲು ಹಬ್ಬಿದೆ. ಪೊಲೀಸ್‌ ಇಲಾಖೆ ಇದಾವುದಕ್ಕೂ ಆಸ್ಪದ ನೀಡದೆ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಯುವಸೇನೆ ಅಧ್ಯಕ್ಷ ವಾಸುದೇವ ಭಟ್‌ ಮತ್ತು ಕಾರ್ಯದರ್ಶಿ ಕರ್ಜೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

*ಕಾಪು ಜೆಡಿಎಸ್‌ನ ಮುಖಂಡ ಸಾಲ್ಯಾನ್‌ ಖಂಡನೆ
ಮಣಿಪಾಲದ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಮಾಜಿ ಸಚಿವ, ಜೆಡಿಎಸ್‌ನ ಮುಖಂಡ ವಸಂತ ವಿ. ಸಾಲ್ಯಾನ್‌ ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸ್‌ ವೈಫಲ್ಯವೇ ಈ ಘಟನೆಗೆ ಮುಖ್ಯ ಕಾರಣವಾಗಿದ್ದು ಆರೋಪಿಗಳನ್ನು ಪೊಲೀಸರು ಕೂಡಲೇ ಬಂದಿಸ ಬೇಕು. ರಾಜ್ಯದ ಮುಖ್ಯಮಂತ್ರಿಗಳು ನೇರವಾದ ಕ್ರಮ ಜರಗಿಸಬೇಕು ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಸಾಲ್ಯಾನ್‌ ಆಗ್ರಹಿಸಿದ್ದಾರೆ.

*ಸರಕಾರದ ಆಡಳಿತ ವೈಫಲ್ಯ: ಶ್ರೀಕರ ಪ್ರಭು
    ಕಾಂಗ್ರೆಸ್‌ ಆಡಳಿತ ಸೂತ್ರ ಕೈಗೆತ್ತಿಕೊಂಡು ಒಂದೆರಡು ತಿಂಗಳು ಕಳೆಯುವಷ್ಟರಲ್ಲೇ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿರುವುದು ಆಡಳಿತ ವೈಫಲ್ಯದ ಪ್ರಾರಂಭ ಎಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ಆರ್‌. ಶ್ರೀಕರ ಪ್ರಭು ಟೀಕಿಸಿದ್ದಾರೆ.
       ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ಜನಸಾಮಾನ್ಯರ ಮೇಲೆ ಬಸ್‌ ದರ ಏರಿಕೆ ಬರೆ ಎಳೆದ ಕಾಂಗ್ರೆಸ್‌ ಇದೀಗ ನಗರ ಪ್ರದೇಶಗಳಲ್ಲೇ ಮಹಿಳೆಯರಿಗೆ ರಕ್ಷಣೆ ನೀಡದ ಸ್ಥಿತಿಯತ್ತ ಸಾಗುತ್ತಿದೆ. ಹಗಲಲ್ಲೇ ಅಲ್ಲಲ್ಲಿ ಮಹಿಳೆಯರ ಮಾಂಗಲ್ಯ ಕಸಿಯುವ, ವಿದ್ಯಾರ್ಥಿನಿಯರನ್ನು ಚುಡಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳನ್ನು ತಹಬಂದಿಗೆ ತರುವುದರ ಬದಲು, 2008ರ ಚರ್ಚ್‌ ದಾಳಿ ಪ್ರಕರಣದ ಮರು ತನಿಖೆಯತ್ತ ಚಿತ್ತ ಹರಿದುದು ಆಡಳಿತಾರೂಢರ ರಾಜಕೀಯ ದುರುದ್ದೇಶ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

*ಜೆಡಿಯು ದ.ಕ. ಖಂಡನೆ
 ಮಣಿಪಾಲದಲ್ಲಿ ನಡೆದ ವಿದ್ಯಾರ್ಥಿನಿಯೊರ್ವರ ಅತ್ಯಾಚಾರ ಪ್ರಕರಣದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದು ಸಾಬೀತಾಗಿದೆ ಎಂದು ಸಂಯುಕ್ತ ಜನತಾದಳದ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.ತತ್‌ಕ್ಷಣವೇ ನೈಜ ಆರೋಪಿಗಳನ್ನು ಬಂಧಿಸುವಂತೆ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಶಾಂತ್‌ ಡಿ'ಸೋಜಾ ಆಗ್ರಹಿಸಿದ್ದಾರೆ.

*ಸಚಿವ ಚಿಂಚನಸೂರು ಖಂಡನೆ
      ಉಚ್ಚಿಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಬಾಬುರಾವ್‌ ಚಿಂಚನಸೂರು ಅವರು ಸುದ್ದಿಗಾರರ ಜತೆ ಮಾತನಾಡಿ ಅತ್ಯಾಚಾರ ಪ್ರಕರಣ ಹೀನ ಕೃತ್ಯ, ಖಂಡನೀಯ ಎಂದರು.

* ಆರೋಪಿಗಳ ಬಂಧನಕ್ಕೆ 48 ಗಂಟೆ ಗಡುವು: ನಳಿನ್ ಕುಮಾರ್
  ಮಣಿಪಾಲ ವಿವಿ ವೈದ್ಯಕೀಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಮುಂದಿನ 48 ಗಂಟೆಗಳೊಳಗೆ ಬಂಧಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಿರಲು ಪೊಲೀಸ್ ಇಲಾಖೆ ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನೈಜ ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸಬೇಕು. ತಪ್ಪಿದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದ ಅವರು ವಿದ್ಯಾರ್ಥಿನಿ, ಕುಟುಂಬಕ್ಕೆ ಸಾಂತ್ವನ ಹೇಳಲು ಆಸ್ಪತ್ರೆಗೆ ತೆರಳುವುದಾಗಿ ತಿಳಿಸಿದರು. 

*ಪೊಲೀಸರ ನಿರ್ಲಕ್ಷ್ಯ: ಮಾಜಿ ಶಾಸಕ ಕೆ. ರಘುಪತಿ ಭಟ್
 ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ ರಾತ್ರಿ 11.20ರ ಸಮಯದಲ್ಲಿ ವಿದ್ಯಾರ್ಥಿ ನಿಯನ್ನು ಅಪಹರಿಸಿದ ಕಾಮುಕರು ರಾತ್ರಿ 2.30ಕ್ಕೆ ಮಣಿಪಾಲದ ಮಾಂಡವಿ ಪ್ಯಾರಡೈಸ್ ಬಳಿ ತಂದು ಬಿಟ್ಟಿದ್ದಾರೆ. ಪೊಲೀಸ್ ಇಲಾಖೆ ಈ 3 ಗಂಟೆಯಲ್ಲಿ ಅಲರ್ಟ್ ಆಗಿದ್ದರೆ ಆರೋಪಿಗಳು ವಿದ್ಯಾರ್ಥಿನಿಯನ್ನು ಮರಳಿ ತಂದು ಬಿಡುವಾಗ ಹಿಡಿಯಬಹುದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೂ. 24ರಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು. 


ಪೊಲೀಸರ ಎಂಟು ತಂಡ ರಚನೆ,  ಮೂವರು ವಶಕ್ಕೆ

ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಪೊಲೀಸರ ಎಂಟು ತಂಡ ರಚಿಸಲಾಗಿದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. 
 ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ಜೀವಕ್ಕೆ ಯಾವುದೇ ಅಪಾಯವಿಲ್ಲ, ಆಕೆಯ ಹೇಳಿಕೆ ಇನ್ನೂ ಪಡೆದಿಲ್ಲಎಂದರು.  
   ನೊಂದ ವಿದ್ಯಾರ್ಥಿನಿಯ ಗೌಪ್ಯತೆ, ತನಿಖೆಯಿಂದ ತೊಂದರೆಯಾಗದಂತೆ ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಮಾನಸಿಕ ತಜ್ಞರ ಮೂಲಕ ತನಿಖೆ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಆಟೋ ರಿಕ್ಷಾ ಹಾಗೂ ಆರೋಪಿಗಳ ಬಗ್ಗೆ ಕೆಲವು ಸುಳಿವು ದೊರೆತಿದೆ. ಅತ್ಯಾಚಾರ ನಡೆದ ಜಾಗವನ್ನೂ ಗುರುತಿಸಲಾಗಿದೆ. ಸ್ಥಳೀಯವಾಗಿ ಮಾಹಿತಿ ಇದ್ದ ರಿಕ್ಷಾ ಚಾಲಕ ಮತ್ತು ಇನ್ನಿಬ್ಬರು ಘಟನೆಗೆ ಕಾರಣರಾಗಿದ್ದಾರೆ. 
     ಅತ್ಯಾಚಾರದ ಬಳಿಕ ವಿದ್ಯಾರ್ಥಿನಿ ತಾನಾಗಿಯೇ ಫ್ಲ್ಯಾಟ್‌ಗೆ ಬಂದಳೇ, ಆರೋ ಪಿಗಳು ಬಿಟ್ಟು ಹೋದರೇ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋ ಪಿಗಳ ಬಂಧನಕ್ಕೆ ಕಾಲ ಮಿತಿ ಹೇಳುವಂತಿಲ್ಲ. ಮಣಿಪಾಲ ವಿವಿ ವ್ಯಾಪ್ತಿಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಮಣಿಪಾಲ ವಿವಿ ಭದ್ರತಾ ವಿಭಾಗದ ಜತೆಗೆ ಚರ್ಚಿಸಿ ರಕ್ಷಣಾ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳು ಹೊರ ರಾಜ್ಯಕ್ಕೆ ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ. 
    ಒಂದೂವರೆ ವರ್ಷದಿಂದ ಪೊಲೀಸ್ ಇಲಾಖೆ ಮಣಿಪಾಲ ವಿವಿ ಜತೆ ವಿದ್ಯಾರ್ಥಿ ಸ್ನೇಹಿಯಾಗಿ ಅಪರಾಧ ಚಟುವಟಿಕೆ ತಡೆ ನಿಟ್ಟಿನಲ್ಲಿ ತೊಡಗಿದೆ. 2012ರ ಆಗಸ್ಟ್‌ನಲ್ಲಿ ಮಣಿಪಾಲ ವಿವಿ ಅಧೀನದ 27 ಕಾಲೇಜುಗಳಲ್ಲಿ ಭದ್ರತೆ, ರಕ್ಷಣೆ, ವಿದ್ಯಾರ್ಥಿಗಳ ಸುರಕ್ಷತೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಂ.ಬಿ. ಬೋರಲಿಂಗಯ್ಯ ಉಪಸ್ಥಿತರಿದ್ದರು. 
 ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಬಂದಿದ್ದು, ಅವರು ಅತ್ರಾಡಿ, ಹಿರಿಯಡ್ಕ ಕಡೆಯವರು ಎನ್ನಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಗುರುತಿಸಿದಲ್ಲಿ ಆರೋಪಿಗಳ ಪತ್ತೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಕಾಲಿಗೆ ಶಸ್ತ್ರಚಿಕಿತ್ಸೆ: ಪರೀಕ್ಷೆಗಾಗಿ ತಡರಾತ್ರಿ ತನಕವೂ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಶುಕ್ರವಾರ ಪರೀಕ್ಷೆ ಎದುರಿಸಬೇಕಾಗಿದ್ದು ಅನಪೇಕ್ಷಿತ ಘಟನೆಯಿಂದಾಗಿ ಕಾಲಿಗೆ ಶಸ್ತ್ರಚಿಕಿತ್ಸೆ ನಡೆದಿದೆ. 


ಮಣಿಪಾಲಕ್ಕೆ ಭೇಟಿ ನೀಡಿದ ಗೃಹ ಸಚಿವ
     ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವ ಕೆ.ಜೆ.ಜಾರ್ಜೆ ಅವರು  ಇಂದು ಬೆಳಿಗ್ಗೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ದೌರ್ಜನ್ಯಕ್ಕೊಳಗಾಗಿರುವ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿ ಸಾಂತ್ವನ ಸೂಚಿಸಿದರು. ಮಗಳು ಆರೋಗ್ಯದಲ್ಲಿ ಇದ್ದಾಳೆ ಎಂದು ದೌರ್ಜನ್ಯಕ್ಕೊಳಗಾಗಿರುವ ವಿದ್ಯಾರ್ಥಿನಿಯ ತಾಯಿ ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Anonymous said...

Black dot for society...

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com