8ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

 ಬದುಕನ್ನು ಕಟ್ಟುವ ಭಾಷೆಯಾಗಿ ಕನ್ನಡವನ್ನು ಉಳಿಸುವ ಕೆಲಸವಾಗಬೇಕಿದೆ- ಪುಂಡಲೀಕ ಹಾಲಂಬಿ

ಹೆಬ್ರಿ: ಜಗತ್ತಿನ ೩೦ ಅಗ್ರಮಾನ್ಯ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆ ಸಾಹಿತ್ಯಿಕವಾಗಿ ಗಟ್ಟಿಯಾಗಿದ್ದರೂ,ಇಂದು ತನ್ನ ನೆಲೆ ಉಳಿಸಿಕೊಳ್ಳುವಲ್ಲಿ ಹೋರಾಟ ನಡೆಸುತ್ತಿದೆ ಎಂದರೆ ನಮ್ಮ ನಾಡಿನ ಬಹುದೊಡ್ಡ ದುರಂತ.ಈ ನಿಟ್ಟಿನಲ್ಲಿ ಕನ್ನಡವನ್ನು ಬದುಕನ್ನು ಕಟ್ಟುವ ಭಾಷೆಯಾಗಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಕ.ಸಾ.ಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ಅವರು ಹೆಬ್ರಿಯಲ್ಲಿ ನಡೆಯುತ್ತಿರುವ  ೮ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

       ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯನ್ನು ಕರ್ನಾಟಕದಲ್ಲಿ ಹುಡುಕುವ ಪರಿಸ್ಥಿತಿ ಎದುರಾಗಿರುವುದು ನಮ್ಮ ನಾಡಿನ ದುರಂತವಾಗಿದೆ ಎಂದು ಹಾಲಂಬಿಯವರು ವಿಷಾದ ವ್ಯಕ್ತಪಡಿಸಿದರು.ನೂರರ ಸಂಭ್ರಮವನ್ನು ಆಚರಿಸಿದ ಕನ್ನಡ ಮಾಧ್ಯಮ ಶಾಲೆಗಳು ಇಂದು ಮಕ್ಕಳಿಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ.ಇಂತಹ ಪರಿಸ್ಥಿತಿಯಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರಗಳು ಹಾಗೂ ಸಾಹಿತಿಗಳು ಗಂಬೀರ ಚಿಂತನೆ ನಡೆಸಬೇಕಾಗಿದೆ ಎಂದರು.
      ಖ್ಯಾತ ಸಾಹಿತಿ ಡಾ.ಸರೋಜಿನಿ ಮಹಿಷಿಯವರು ಕರ್ನಾಟಕದಲ್ಲಿ ಕನ್ನಡ ಮಾಧ್ಯಮದವರಿಗೆ ಉದ್ಯೋಗದಲ್ಲಿ ಅವಕಾಶ ಮಾಡಿಕೊಡಬೇಕೆನ್ನುವ ಸಮಗ್ರ ವರದಿಯನ್ನು ೨೦ವರ್ಷಗಳ ಹಿಂದೆ ಸರಕಾರಕ್ಕೆ ಸಲ್ಲಿಸಿದ್ದರು.ಆದರೆ ೨೦ವರ್ಷಗಳಿಂದ ಆ ವರದಿ ಸರಕಾರದ ಕಪಾಟಿನೊಳಗೆ ಕೊಳೆಯುತ್ತಿದೆ.ಈ ನಿಟ್ಟಿನಲ್ಲಿ ಸರಕಾರ ಡಾ.ಮಹಿಷಿಯವರ ವರದಿಯನ್ನು ಜಾರಿಗೊಳಿಸಿ ಆಮೂಲಕ ಕನ್ನಡಕ್ಕೆ ಗೌರವಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂದರು.

     ತಾಂತ್ರಿಕ ಹಾಗೂ ವೈದ್ಯಕೀಯ ಸೀಟುಗಳಿಗೆ ನಡೆಯುವ ಸಾಮಾನ್ಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದವರಿಗೆ ಶೇ೫೦ರಷ್ಟು ಮೀಸಲಾತಿ ನೀಡಬೇಕು,ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡಬೇಕೆಂದು ಹಾಲಂಬಿಯವರು ಆಗ್ರಹಿಸಿದರು.ಅಲ್ಲದೇ ರಾಜ್ಯದ ಕಾವೇರಿ,ಕೃಷ್ಣಾ ನೀರಿನ ಸಮಸ್ಯೆ,ಗಡಿ ಸಮಸ್ಯೆಯ ವಿಷಯಗಳು ಬಂದಾಗ ನನ್ನ ಹುಟ್ಟೂರಾದ ದ.ಕ ಜಿಲ್ಲೆಯವರು(ಉಡುಪಿ ಮಂಗಳೂರು)ಧ್ವನಿ ಎತ್ತದಿರುವುದು ವಿಷಾದನೀಯ.ಇನ್ನಾದರೂ ಕನ್ನಡಾಂಬೆಯ ಮಾನ ಉಳಿಸುವಲ್ಲಿ ನಾವೆಲ್ಲ ಕನ್ನಡ ಸೇವೆ ಮಾಡೋಣವೆಂದರು.
    ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ,ಕನ್ನಡಕ್ಕೆ ಕನ್ನಡವೇ ಶತ್ರು,ಯಾಕೆಂದರೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡಕ್ಕೆ ಚಿಕ್ಕಾಸು ಬೆಲೆಯಿಲ್ಲ.ಪೋಷಕರಿಗೆ ಮಕ್ಕಳ ಭವಿಷ್ಯವೇ ಮುಖ್ಯ ಹೊರತು,ಕನ್ನಡ ಭಾಷೆಯಲ್ಲ.ಬದುಕು ಕಟ್ಟಲು ಕನ್ನಡ ಭಾಷೆಯನ್ನೇ ಅಡಿಪಾಯವಾಗಬೇಕೆಂದು ಹಾಲಂಬಿಯವರ ಆಶಯಕ್ಕೆ ಅಡಿಗರು ದನಿಗೂಡಿಸಿದರು.

     ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಹೆಬ್ರಿ ಗ್ರಾ.ಪಂ ಅಧ್ಯಕ್ಷೆ ಸುಮಾ ಅಡ್ಯಂತಾಯ, ಜಿ.ಪಂ ಸದಸ್ಯ ಮಂಜುನಾಥ ಪೂಜಾರಿ,ತಾ.ಪಂ ಸದಸ್ಯೆ ಮಮತಾ ನಾಯ್ಕ್,ಸಾಹಿತಿಗಳಾದ ಎ.ಎಸ್ ಎನ್ ಹೆಬ್ಬಾರ್, ಪ್ರದೀಪ್‌ಕುಮಾರ್ ಕಲ್ಕೂರ್,ರಮೇಶ್ ರಾವ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,ವಾರ್ತಾಧಿಕಾರಿ ಜುಂಜಣ್ಣ,ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್,ಸೀತಾನದಿ ವಿಠಲ ಶೆಟ್ಟಿ,ಸ್ವಾಗತ ಸಮಿತಿ ಅಧ್ಯಕ್ಷ ಯೋಗೀಶ್ ಭಟ್,ಸಂಚಾಲಕ ಬಿ.ಸಿ ರಾವ್ ಶಿವಪುರ ಮುಂತಾದವರಿದ್ದರು.
      ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಾಹಿತಿಗಳ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಯೋಗೀಶ್ ಭಟ್ ಸ್ವಾಗತಿಸಿ,ಕಾರ್ಯದರ್ಶಿ ರಂಗಪ್ಪಯ್ಯ ಹೊಳ್ಳ ವಂದಿಸಿದರು.ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ: ಕೃಷ್ಣ ಅಜೆಕಾರ್
ಪೋಟೋ: ಶೇಖರ್ ಅಜೆಕಾರ್
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com