ಕಬ್ಬಿಣದ ಗೇಟು ಮೈಮೇಲೆ ಬಿದ್ದು ಆಘಾತ: ನಿಶ್ಚೇತನ ಯುವಕನ ಚಿಕಿತ್ಸೆಗೆ ನೆರವಾಗುವಿರಾ ?

ಕುಂದಾಪ್ರ ಡಾಟ್ ಕಾಂ: ಈತ ಕೃಷ್ಣ ಮಂಜುನಾಥ ಪೂಜಾರಿ. ಶಿರಸಿ ತಾಲೂಕಿನ ಇಳಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಪ್ಪನಳ್ಳಿ ನಿವಾಸಿ ಮಂಜುನಾಥ ಮಾಚ ಪೂಜಾರಿ ಅವರ ಪುತ್ರ. ಈತ ಹನ್ನೊಂದನೇ ವಯಸ್ಸಿನವನಾಗಿರುವಾಗ ದನ ಮೇಯಿಸುವ ಸಂದರ್ಭದಲ್ಲಿ ದನವು ಬೇರೆಯವರ ಗೇಟು ಹೊಕ್ಕಿದ್ದನ್ನು ತಡೆಯಲೆಂದು ಓಡಿದಾಗ ಕಬ್ಬಿಣದ ಗೇಟಿನ ಕಂಬ ಮುರಿದು ಮೈಮೇಲೆ ಬಿದ್ದ ಪರಿಣಾಮವಾಗಿ ಈತನ ಸೊಂಟದ ಕೆಳಭಾಗ ಸಂಪೂರ್ಣವಾಗಿ ನಿಶ್ಚೇಶ್ಟಿತವಾಗಿದೆ. ಹಲವಾರು ಕಡೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿಲ್ಲ. ಈಗ ಇವರಿಗೆ 24 ವರ್ಷ ವಯಸ್ಸಾಗಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಇವರ ಆರೈಕೆ ಮಾಡುತ್ತಿರುವ ತಂದೆ-ತಾಯಿ ಮಗನ ಸ್ಥಿತಿಯಿಂದ ಕಂಗಾಲಾಗಿದ್ದು, ಸಹೃದಯೀ ದಾನಿಗಳು ಹಾಗೂ ಸಾರ್ವಜನಿಕರ ಮಾನವೀಯ ನೆರವಿಗಾಗಿ ಯಾಚಿಸಿದ್ದಾರೆ.
   ಆರ್ಥಿಕವಾಗಿ ತೀರಾ ಬಡವರಾಗಿದ್ದು, ಜೀವನಕ್ಕಾಗಿ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸುವ ಮಂಜುನಾಥ ಮಾಚ ಪೂಜಾರಿ ಕುಟುಂಬಕ್ಕೆ ಯುವಕ ಕೃಷ್ಣನಿಗೆ ಒದಗಿದ ದಯನೀಯ ಸ್ಥಿತಿಯಿಂದ ಜಂಘಾಬಲವೇ ಉಡುಗಿದೆ. 6ನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿದ್ದ ಕೃಷ್ಣ ಅವರ ವಿದ್ಯಾಭ್ಯಾಸವೂ ನಿಂತಿದೆ. ಇದೀಗ ದಿನಾಲೂ ಆತನ ಎಲ್ಲಾ ಚಾಕರಿಗಳನ್ನು ಹೆತ್ತವರೇ ನೋಡಿಕೊಳ್ಳುವುದರ ಜೊತೆಗೆ ಆಚೀಚೆ ಸುತ್ತಾಡಿಸಲು ಗಾಲಿಕುರ್ಚಿಯ ನೆರವನ್ನು ಆಶ್ರಯಿಸುವಂತಾಗಿದೆ. 
   ಕೃಷ್ಣ ಅವರ ಚಿಕಿತ್ಸೆಗಾಗಿ ಇದುವರೆಗೆ 3 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಿದ್ದು, ಹುಬ್ಬಳ್ಳಿಯ ಕಲಮಧಾನಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳು ದಾಖಲಿಸಿ ಚಿಕಿತ್ಸೆ ಮತ್ತು ಅಪರೇಶನ್ ಸೇರಿದಂತೆ 1.50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಯಲ್ಲಿ ದೇಹದ ಕಬ್ಬಿಣದ ರಾಡ್ ತೆಗೆಸಿ ಚಿಕಿತ್ಸೆ ನೀಡಲಾಗಿದ್ದು, ಅಂದಾಜು 75 ಸಾವಿರ  ರೂಪಾಯಿ ಖರ್ಚಾಗಿದೆ. ಮಂಗಳೂರಿನ ಡಾ.ಕೆ. ಎಸ್. ಹೆಗಡೆ ಆಸ್ಪತ್ರೆಯಲ್ಲಿ ಮಂಜುನಾಥ ಅವರನ್ನು ತಪಾಸಣೆ ನಡೆಸಿದ ವೈದ್ಯರು ಇನ್ನು ಮುಂದೆ ಚಿಕಿತ್ಸೆಯ ಆವಶ್ಯಕತೆ ಇರುವುದಿಲ್ಲ. ಈತನಿಗೆ ಯೋಗ, ವ್ಯಾಯಾಮ ಮಾಡಿಸಿ ಮತ್ತು ದೇವರನ್ನು ನಂಬಿ ಔಷಧೋಪಚಾರ ಮುಂದುವರಿಸಿ ಎಂದಿದ್ದಾರೆ. ಇದಲ್ಲದೇ ಅಲೋಪಥಿ ಔಷಧಿ, ಗಿಡಮೂಲಿಕೆ ಔಷಧಿಯನ್ನು ಉಪಯೋಗಿಸಿ ನೋಡಿದ್ದಾರೆ. ಮಗನ ಆರೋಗ್ಯ ಸುಧಾರಣೆ ಆಗಲಿ ಎಂದು ದೈವ-ದೇವರಿಗೆ ಪೂಜೆ-ಪುನಸ್ಕಾರ, ಹರಕೆ ಹೊತ್ತುಕೊಂಡು ಬೇಡಿದ್ದಾರೆ.   
   ಏನೇ ಪ್ರಯತ್ನ ನಡೆಸಿದ್ದರೂ ಕೃಷ್ಣ ಮಂಜುನಾಥ ಪೂಜಾರಿ ಅವರ ಆರೋಗ್ಯಸ್ಥಿತಿಯಲ್ಲಿ ಸುಧಾರಣೆ ಕಂಡಿಲ್ಲ. ಹಣ ಮಾತ್ರ ಖಾಲಿ ಆಗಿದೆ. ಇದರಿಂದ ಅವರ ಹೆತ್ತವರಲ್ಲಿ ಭಾರೀ ಚಿಂತೆ ಮೂಡಿದ್ದು, ತಮ್ಮ ಮಗನಿಗೆ ಚಿಕಿತ್ಸೆಯನ್ನು ಮುಂದುವರಿಸಬೇಕೋ ಬೇಡವೋ ಎಂಬ ಗೊಂದಲವೂ ಉಂಟಾಗಿದೆ. ಆದ್ದರಿಂದ ಕೃಷ್ಣ ಮಂಜುನಾಥ ಪೂಜಾರಿ ಅವರಿಗೆ ಎಲ್ಲಿ, ಯಾವ ರೀತಿಯ ಚಿಕಿತ್ಸೆ ನೀಡಿದರೆ ಆತ ಗುಣಮುಖನಾಗಬಹುದು ಎಂಬ ಬಗ್ಗೆ ಅಮೂಲ್ಯವಾದ ಸಲಹೆ ನೀಡುವುದರೊಂದಿಗೆ ಅವರ ಚಿಕಿತ್ಸೆಗಾಗಿ ಮಾನವೀಯ ನೆರವಿನ ಸಹಾಯವನ್ನು ನೀಡಿ ಉಪಕರಿಸುವಂತೆ ಕೃಷ್ಣ ಅವರ ತಂದೆ ಮಂಜುನಾಥ ಮಾಚ ಪೂಜಾರಿ ಮನವಿ ಅವರು ಮಾಡಿಕೊಂಡಿದ್ದಾರೆ. 
 ವಿಳಾಸ: ಮಂಜುನಾಥ ಮಾಚ ಪೂಜಾರಿ, ಅಂಚೆ: ಬೊಪ್ಪನಳ್ಳಿ, ಇಳಸೂರು ಗ್ರಾಮ, ಶಿರಸಿ ತಾಲೂಕು, ಉತ್ತರಕನ್ನಡ ಜಿಲ್ಲೆ- 581358. ಮೊಬೈಲ್- 9449452870, 9481734991.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com