ಜಿಲ್ಲೆಯಲ್ಲಿ 2.50 ಲಕ್ಷ ವಾಹನಗಳು, 8 ಅಧಿಕಾರಿಗಳು- ಕುಂದಾಪುರದಲ್ಲಿ ಉಪಕಚೇರಿ ತೆರೆಯಲಿ

ಉಡುಪಿ: ಜಿಲ್ಲೆಗೆ ಸಂಬಂಧಿಸಿ 1984ರಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಆದಾಯ 3 ಕೋಟಿ ರೂ., 2013ರಲ್ಲಿ ಅದು 90 ಕೋಟಿ ರೂ.ಗಳಿಗೇರಿದೆ. ಆದರೆ ಕರ್ತವ್ಯದಲ್ಲಿರುವುದು ಕೇವಲ 8 ಅಧಿಕಾರಿಗಳು! 
    ಹೌದು... ಇದು ಉಡುಪಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆ (ಸಾರಿಗೆ ಸೌಧ)ಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. 1984ರಲ್ಲಿದ್ದ ಆ ಸಿಬ್ಬಂದಿಗಳ ನಿಯೋಜನೆ ಹೆಚ್ಚು ಕಮ್ಮಿ 30 ವರ್ಷ ಕಳೆದರೂ ಬದಲಾಗಿಲ್ಲ.  ಹೋಗಲಿ..ಆಗಿನ ನಿಯಮದಂತೆ ಸಿಬ್ಬಂದಿಗಳಾದರೂ ಸೇವೆಯಲ್ಲಿದ್ದಾರಾ ಅಂದ್ರೆ ಅದೂ ಇಲ್ಲ. ಇಲಾಖೆಗೆ ಸಾರಥಿಯಂತಿರಬೇಕಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯೇ ಇಲ್ಲಿ ಖಾಲಿ ಬಿದ್ದಿದೆ. 1984ರಲ್ಲಿ ಇಲಾಖೆಯ ಆದಾಯ ಸುಮಾರು 3-5 ಕೋಟಿ ರೂ.ಗಳಿದ್ದರೆ, ಈ ಆದಾಯ ಪ್ರಮಾಣ ಪ್ರಸ್ತುತ ಶೇ. 60ರಷ್ಟು (2013ರಲ್ಲಿ 89.26 ಕೋಟಿ ರೂ.) ಹೆಚ್ಚಾದರೂ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಸರಕಾರ ಆಸಕ್ತಿಯನ್ನೇ ತೋರಿಸಿಲ್ಲ. ಪರಿಣಾಮವಾಗಿ ಜಿಲ್ಲೆಯ ಲ್ಲಿರುವ ಸುಮಾರು 2.50 ಲಕ್ಷದಷ್ಟು ವಾಹನಗಳ ನೋಂದಣಿ, 
ಲೈಸನ್ಸ್ ನವೀಕರಣ, ಹೊಸ ಪರವಾನಗಿ...ಹೀಗೆ ನಾನಾ ವಿಧದ ಕೆಲಸಗಳ ಒತ್ತಡದಲ್ಲಿ ಇಲಾಖೆ ಅಧಿಕಾರಿಗಳು ಬಸವಳಿದು ಹೋಗಿದ್ದಾರೆ. 

ಎಷ್ಟೆಷ್ಟು ಹುದ್ದೆಗಳು ಖಾಲಿ:
    ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮಣಿಪಾಲದ ರಜತಾದ್ರಿಯಲ್ಲಿ ಸುಸಜ್ಜಿತ ಕಟ್ಟಡ ಸಿಕ್ಕಿರುವುದು ಸಮಾಧಾನಕರ ಅಂಶವಾದರೂ ಇದಕ್ಕೆ ತಕ್ಕಂತೆ ಸಿಬ್ಬಂದಿ ನೇಮಕಾತಿ ನಡೆದಿದ್ದರೆ ಅನೂಕೂಲವಾಗುತ್ತಿತ್ತು. ಇಲಾಖೆಯ ಸಾರಥಿ ಅಸಿಸ್ಟೆಂಟ್ ಆರ್‌ಟಿಓ ನೇಮಕ ತುರ್ತಾಗಬೇಕು. ಉಳಿದಂತೆ ರೀಜನಲ್ ಟ್ರಾನ್ಸ್‌ಪೋರ್ಟ್ ಆಫೀಸರ್ ಒಬ್ಬರಿದ್ದಾರೆ. ಸೀನಿಯರ್ ಇನ್ಸ್‌ಪೆಕ್ಟರ್ ಆಫ್ ಮೋಟಾರ್ ವೆಹಿಕಲ್ 3 ಹುದ್ದೆಗಳಿದ್ದು, ಒಬ್ಬರು ಕರ್ತವ್ಯದಲ್ಲಿದ್ದಾರೆ. 2 ಹುದ್ದೆ ಖಾಲಿ ಬಿದ್ದಿದೆ. ಆಫೀಸ್ ಸೂಪರಿಂಟೆಂಡೆಂಟ್ 3 ಹುದ್ದೆಗಳಲ್ಲಿ 2 ಖಾಲಿ ಇವೆ. 5 ಮಂದಿ ಇನ್ಸ್‌ಪೆಕ್ಟರ್‌ಗಳು ( ಮೋಟಾರ್ ವೆಹಿಕಲ್), ಫಸ್ಟ್ ಡಿವಿಜನ್ ಅಸಿಸ್ಟೆಂಟ್ ಕ್ಲಾರ್ಕ್ 6 ಹುದ್ದೆ ಭರ್ತಿಯಾಗಿದೆ. ಸೆಕೆಂಡ್ ಡಿವಿಜನ್ ಅಸಿಸ್ಟೆಂಟ್ ಕ್ಲಾರ್ಕ್ 8 ಹುದ್ದೆಗಳಲ್ಲಿ 2 ಖಾಲಿ ಬಿದ್ದಿವೆ. 
 ತಲಾ ಒಂದೊಂದು ಸ್ಟೆನೋ ಗ್ರಾಫರ್ ಹಾಗೂ ಟೈಪಿಸ್ಟ್ ಹುದ್ದೆಗಳೂ ಭರ್ತಿಯಾಗಿದ್ದು, 3 ಚಾಲಕ ಹುದ್ದೆಯಲ್ಲಿ 1 ಖಾಲಿ ಇದೆ. 

ವಾಹನಗಳು ಎಷ್ಟು?: 
    ಇಲಾಖಾಧಿಕಾರಿಗಳ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 2,48,875 ವಾಹನಗಳು ನೋಂದಣಿಯಾಗಿವೆ. ದಿನಕ್ಕೆ ಏನಿಲ್ಲವೆಂದರೂ 50-60 ದ್ವಿಚಕ್ರ ವಾಹನಗಳು ಉಡುಪಿಯಲ್ಲಿ ರಿಜಿಸ್ಟ್ರೇಶನ್‌ಗೆ ಬರುತ್ತವೆ. ಅಷ್ಟೇ ಪ್ರಮಾಣದಲ್ಲಿ ಇತರ ವಾಹನ ನೋಂದಣಿ, ಪರವಾನಗಿ ನವೀಕರಣ, ಹೊಸ ಲೈಸನ್ಸ್‌ಗೆ ಅರ್ಜಿಗಳು...ಹೀಗೆ ನಾನಾ ರೀತಿಯ ವಾಹನ ಪರವಾನಗಿ ಸಂಬಂಧದ ಕೆಲಸಗಳು ರಾಶಿ ಬೀಳುತ್ತಿವೆ.  ಈ ಕೆಲಸದ ಒತ್ತಡದಲ್ಲೂ ಪ್ರತಿ ಮಂಗಳವಾರ ಕುಂದಾಪುರದಲ್ಲಿ, ಪ್ರತಿ ಗುರುವಾರ ಕಾರ್ಕಳದಲ್ಲಿ ಅಧಿಕಾರಿಗಳ ಕ್ಯಾಂಪ್ ನಡೆಯುತ್ತದೆ. ಪಡುಬಿದ್ರಿಯಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಈ ಕಾರ್ಯಕ್ಕಾಗಿ ಇಲಾಖೆ ಅಧಿಕಾರಿಗಳು ತೆರಳ ಬೇಕಾಗುತ್ತದೆ. ಉಡುಪಿಯಲ್ಲಿ ಪ್ರತಿದಿನ 250-300 ಹೊಸ ಪರವಾನಗಿ ಪಡೆಯಲು ಟೆಸ್ಟ್‌ಗೆ ಬರುತ್ತಾರೆ. ಅವರನ್ನು ವಾಹನ ಚಾಲನೆಗೆ ಸಂಬಂಧಪಟ್ಟ ಪರೀಕ್ಷೆಗಳಿಗೆ ಒಡ್ಡಬೇಕು. ಹೀಗಾಗಿ 3 ಮಂದಿ ಇನ್ಸ್‌ಪೆಕ್ಟರ್‌ಗಳು ದಿನಪೂರ್ತಿ ಉಡುಪಿಯಲ್ಲಿಯೇ ಇರಬೇಕಾಗುತ್ತದೆ. ದಿನಕ್ಕೆ 16 ಗಂಟೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. 

ಕುಂದಾಪುರದಲ್ಲಿ ಕಚೇರಿ ಆರಂಭವಾಗಲಿ:
     ಇಲಾಖೆಯ ಆದಾಯದಲ್ಲಿ ಶೇ. 60ರಷ್ಟು ಕುಂದಾಪುರ ತಾಲೂಕಿನಿಂದ ಬರುತ್ತಿದೆ. ಆದರೆ ಇಲ್ಲಿ ಆರ್‌ಟಿಓ ಅಧಿಕಾರಿಗಳು ಪ್ರತಿ ಮಂಗಳವಾರ ಮಾತ್ರ ಹಾಜರಾಗುತ್ತಾರೆ. ಹಾಗಾಗಿ ಹೆಚ್ಚಿನ ಕೆಲಸಕ್ಕಾಗಿ ಉಡುಪಿಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ದೂರದ ಬೈಂದೂರು, ಕೊಲ್ಲೂರು ಮತ್ತಿತರ ಕಡೆಯ ಜನರಿಗೆ ಅನೂಕೂಲವಾಗಲು ಕುಂದಾಪುರದಲ್ಲಿ ಇಲಾಖೆಯ ಉಪಕಚೇರಿ ತೆರೆಯಬೇಕು ಎನ್ನುವುದು ಸಾರ್ವಜನಿಕ ಬೇಡಿಕೆ. 

ಇಲಾಖೆಯ ಈ ಸಮಸ್ಯೆ ಸರಕಾರಕ್ಕೆ ಅರಿವಿಲ್ಲ ಎಂದಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ವಿರುವಾಗಲೇ ಸಂಸದ ರಾಘವೇಂದ್ರ ಅವರ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿತ್ತು. ಆದರೆ ಹೊಸ ಕಚೇರಿ ಸಿಕ್ಕಿದ್ದೊಂದೇ ಸಮಾಧಾನ, ಇದರ ಹೊರತು ಸಿಬ್ಬಂದಿ ನೇಮಕಕ್ಕೆ ಸರಕಾರ ಆಸಕ್ತಿ ತೋರಿಸಿಲ್ಲ. 

ಇಲಾಖೆಯಲ್ಲಿ ಈಗಿರುವ ಹುದ್ದೆಗಳ ವಿವರ:
ರೀಜನಲ್ ಟ್ರಾನ್ಸ್‌ಪೋರ್ಟ್ ಆಫೀಸರ್-1 ಹುದ್ದೆ (ಖಾಲಿ ಇಲ್ಲ), ಅಸಿಸ್ಟೆಂಟ್ ಆರ್‌ಟಿಓ-1 ಹುದ್ದೆ (ಖಾಲಿಯಾಗಿದೆ) ಸೀನಿಯರ್ ಇನ್ಸ್‌ಪೆಕ್ಟರ್ ಆಫ್ ಮೋಟಾರ್ ವೆಹಿಕಲ್: 3 ಹುದ್ದೆ (2 ಖಾಲಿ), ಆಫೀಸ್ ಸುಪರಿಟೆಂಡೆಂಟ್: 3 ಹುದ್ದೆ ( 2 ಖಾಲಿ), ಇನ್ಸ್‌ಪೆಕ್ಟರ್ ಆಫ್ ಮೋಟಾರ್ ವೆಹಿಕಲ್: 5 ಹುದ್ದೆ (ಖಾಲಿ ಇಲ್ಲ), ಫಸ್ಟ್ ಡಿವಿಜನ್ ಅಸಿಸ್ಟೆಂಟ್ ಕ್ಲಾರ್ಕ್: 6 ಹುದ್ದೆ (ಖಾಲಿ ಇಲ್ಲ), ಸೆಕೆಂಡ್ ಡಿವಿಜನ್ ಅಸಿಸ್ಟೆಂಟ್ ಕ್ಲಾರ್ಕ್: 8 ಹುದ್ದೆ (2 ಖಾಲಿ), ಸ್ಟೆನೋಗ್ರಾಫರ್: 1 ಹುದ್ದೆ ( ಖಾಲಿ ಇಲ್ಲ), ಟೈಪಿಸ್ಟ್: 1 ಹುದ್ದೆ ( ಖಾಲಿ ಇಲ್ಲ), ಡ್ರೈವರ್: 3 ಹುದ್ದೆ ( 1 ಖಾಲಿ), ಗ್ರೂಪ್ ಡಿ: 4 ಹುದ್ದೆ (ಖಾಲಿ ಇಲ್ಲ) 
  • ಇಲಾಖೆಯಲ್ಲಿ ಹಲವಾರು ಪ್ರಮುಖ ಹುದ್ದೆಗಳು ಖಾಲಿ ಬಿದ್ದಿರುವ ಕಾರಣ ಕೆಲಸದ ಒತ್ತಡ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2,48,875 ವಾಹನಗಳು ನೋಂದಣಿಯಾಗಿವೆ. ದಿನಕ್ಕೆ ಏನಿಲ್ಲವೆಂದರೂ 50-60 ದ್ವಿಚಕ್ರ ವಾಹನಗಳು ಉಡುಪಿಯಲ್ಲಿ ರಿಜಿಸ್ಟ್ರೇಶನ್‌ಗೆ ಬರುತ್ತವೆ. ಜಿಲ್ಲೆಗೆ ಸಂಬಂಧಪಟ್ಟಂತೆ ನೂರಾರು ವಾಹನ ನೋಂದಣಿ, ಪರವಾನಗಿ ನವೀಕರಣ, ಹೊಸ ಲೈಸನ್ಸ್‌ಗೆ ಅರ್ಜಿಗಳು ಬರುತ್ತವೆ. 84ರಲ್ಲಿದ್ದ ಆದಾಯ ಶೇ.60ರಷ್ಟು ಹೆಚ್ಚಾಗಿದೆ. ಅದೇ ರೀತಿ ವಾಹನಗಳ ಪ್ರಮಾಣವೂ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕಾತಿ ನಡೆದಲ್ಲಿ ಸಾರ್ವಜನಿಕರಿಗೆ ಅನೂಕೂಲವಾಗುತ್ತಿತ್ತು.               -ಹರೀಶ್ ಕುಮಾರ್, ಪ್ರಭಾರ ಎಆರ್‌ಟಿಓ, ಉಡುಪಿ

ವರದಿ: ಉಮೇಶ್ ಕುಕ್ಕುಪಲ್ಕೆ ಉಡುಪಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com