ರೈಲ್ವೇ ಸಮಸ್ಯೆ: ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಸಂಸದರಿಗೆ ಮನವಿ

ಕುಂದಾಪುರ: ರೈಲ್ವೇ ಬಜೆಟ್‌ನಲ್ಲಿ ಘೋಷಣೆಯಾದ ರೈಲುಗಳ ಶೀಘ್ರ ಅನುಷ್ಠಾನ ಮತ್ತು ಕರಾವಳಿ ಭಾಗದ ಜನರಿಗೆ ಉಪಯೋಗವಾಗುವಂತೆ ಕೆಲವು ಮಾರ್ಪಾಡು ಮಾಡುವಂತೆ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಮನವಿ ಸಲ್ಲಿಸಿತು.
      ಕುಂದಾಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು, ಬಜೆಟ್‌ನಲ್ಲಿ ಘೋಷಣೆಯಾದ ಭಟ್ಕಳ - ತೋಕೂರು ಡಿ.ಎಂ.ಯು. ರೈಲನ್ನು ಮಂಗಳೂರು ಸೆಂಟ್ರಲ್‌ ತನಕ ವಿಸ್ತರಿಸಲು ಮತ್ತು ಮಂಗಳೂರು- ಬೆಂಗಳೂರು ನಡುವೆ ವಾರಕ್ಕೊಮ್ಮೆ ಘೋಷಣೆ ಮಾಡುವ ರೈಲನ್ನು ಹಾಸನ ಮಾರ್ಗವಾಗಿ ಓಡಿಸಲು ಆಗ್ರಹಿಸಲಾಯಿತು.
       ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್ ಮತ್ತು ಬೇಸಗೆಯಲ್ಲಿ ಓಡಾಡುವ ಅಹಮದಾಬಾದ್‌ - ಮಂಗಳೂರು ರೈಲನ್ನು ಶಾಶ್ವತವಾಗಿ ಓಡಿಸಲು ಮತ್ತು ಯಶವಂತಪುರ - ಕಾರವಾರ ರೈಲಿನ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲು ಸಹ ಈ ಸಂದರ್ಭದಲ್ಲಿ ಮನವಿ ಸಲ್ಲಸಲಾಯಿತು.
      ಈ ಸಂದರ್ಭದಲ್ಲಿ ಹೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ. ಸೋಮಶೇಖರ ಶೆಟ್ಟಿ, ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ, ಕಿಶನ್‌ ಕುಮಾರ್‌ ಕೆಂಚನೂರ್‌, ಗಣೇಶ್‌ ಶೆಟ್ಟಿ ಮೊಳಹಳ್ಳಿ, ಗಣೇಶ್‌ ಪುತ್ರನ್‌, ಚಂದ್ರಶೇಖರ ತಲ್ಲೂರು, ಆವರ್ಸೆ ಸುಧಾಕರ ಶೆಟ್ಟಿ,ಎಚ್‌.ಎಸ್‌. ಹತ್ವಾರ್‌, ವಿವೇಕ್‌ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.
       ಕುಂದಾಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು ಮತ್ತು ಕುಂದಾಪುರದಲ್ಲಿ ರೈಲುಗಳ ನಿಲುಗಡೆಗೆ ಮತ್ತು ಭಟ್ಕಳ - ತೋಕೂರು ರೈಲನ್ನು ಮಂಗಳೂರು ಕೇಂದ್ರದವರೆಗೆ ವಿಸ್ತರಿಸಲು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com