ಮಂಗಳೂರು ರೈಲ್ವೇ ವಿಭಾಗ ತೆರೆಯುವಂತೆ ಸಂಸದ ಜ. ಹೆಗ್ಡೆಗೆ ಮನವಿ

ಕುಂದಾಪುರ: ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಆರಂಭವಾದ ಕೊಂಕಣ ರೈಲ್ವೇ ಕಾರ್ಪೋರೇಷನ್‌ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿದೆ. ಆರ್ಥಿಕ ದುಸ್ಥಿತಿಯಲ್ಲಿ ಇರುವ ಕೊಂಕಣ ರೈಲ್ವೇಯ ಸಶಕ್ತೀಕರಣಕ್ಕೆ ಮಂಗಳೂರು ರೈಲ್ವೇಯನ್ನು ಸಶಕ್ತೀಕರಣಗೊಳಿಸಲು ಮಂಗಳೂರು ರೈಲ್ವೇ ವಿಭಾಗ ತೆರೆಯುವಂತೆ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು.
     ಕೊಂಕಣ ರೈಲ್ವೇ ವ್ಯಾಪ್ತಿಯನ್ನು ಮಹಾರಾಷ್ಟ್ರದ ರೋಹದಿಂದ ಮಂಗಳೂರಿನ ತೋಕುರಿನ ತನಕ ಮಾತ್ರ ಸೀಮಿತಗೊಳಿಸಿರುವುದೇ ಅಭಿವೃದ್ಧಿಯಲ್ಲಿ ಕುಂಠಿತವಾಗಲು ಕಾರಣ. ಲಾಭವಿರುವ ಎನ್‌ಎಂಪಿಟಿ, ಮಂಗಳೂರು ಜಂಕ್ಷನ್‌, ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ಕೇರಳದ ದಕ್ಷಿಣ ರೈಲ್ವೇಗೆ ಅಳವಡಿಸಿ ಕರ್ನಾಟಕ ಮತ್ತು ಗೋವಾಕ್ಕೆ ಮತ್ತು ಕೊಂಕಣ ರೈಲ್ವೇಗೆ ಅನ್ಯಾಯ ಮಾಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
      ಸುಮಾರು ಕೋಟಿ ರೂಪಾಯಿಗೂ ಹೆಚ್ಚು ವಾರ್ಷಿಕ ಆದಾಯ ತರುವ ಎನ್‌ಎಂಪಿಟಿ ಬಂದರು, ಮಂಗಳೂರು ಬಂದರು ಯಾರ್ಡ್‌ ಪಾಲಾಗಿ ಕೊಂಕಣ ರೈಲ್ವೇಗೆ ಯಾವುದೇ ಆದಾಯವಿಲ್ಲದೇ ಸೊರಗಿದೆ. ಈಗಾಗಲೇ ನಷ್ಟದಲ್ಲಿರುವ ಕೊಂಕಣ ರೈಲ್ವೇ ಯಾವುದೇ ಹೊಸ ರೈಲುಗಳನ್ನು ಓಡಿಸಲು, ಸಂಚಾರ ಪಥ ದ್ವಿಮಾರ್ಗಗೊಳಿಸಲು, ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲು ವಿಫಲವಾಗಿದೆ. ಈ ಪರಿಸ್ಥಿತಿಯಲ್ಲಿ ಕೊಂಕಣ ರೈಲ್ವೇ ವ್ಯಾಪ್ತಿಯನ್ನು ಉಳ್ಳಾಲದ ತನಕ ವಿಸ್ತರಿಸಲು ಕೊಂಕಣ ರೈಲ್ವೇ ವಿಭಾಗೀಯ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸುವಂತೆ ಒತ್ತಾಯಿಸಲಾಯಿತು.
   ಮನವಿಗೆ ಸ್ಪಂದಿಸಿದ ಸಂಸದರು ರೈಲ್ವೇ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಭರವಸೆ ನೀಡಿದರು.
      ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ, ಮೂಕಾಂಬಿಕಾ ರೈಲು ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ, ಕಾರ್ಯದರ್ಶಿ ಜಗದೀಶ್‌ ಪಟ್ಟಾಲ, ಎಚ್‌.ಎಸ್‌. ಹತ್ವಾರ್‌, ವಿವೇಕ್‌ ನಾಯಕ್‌, ರಾಧಾಕೃಷ್ಣ ಶೆಣೈ, ಉದಯ ಭಂಡಾರ್‌ಕರ್‌, ಪದ್ಮನಾಭ ಶೆಣೈ, ಚಂದ್ರಶೇಖರ್‌ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com