ಕುಂದಾಪುರ ತಾಲೂಕು ಪ್ರಗತಿ ಪರಿಶೀಲನಾ ಸಭೆ

ಕುಂದಾಪುರ: ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ವಾರಾಹಿ ಯೋಜನೆ ಪೂರ್ತಿಯಾಗಿ ಗುತ್ತಿಗೆದಾರರ ಹಿಡಿತಕ್ಕೆ ಒಳಗಾಗಿದೆ. ಅದನ್ನು ಪೂರ್ತಿ ಮಾಡುವ ಕೆಲಸ ಶೀಘ್ರದಲ್ಲಿ ಆಗಬೇಕಾಗಿದೆ. ಈ ಯೋಜನೆ ಅಡೆ - ತಡೆಗಳನ್ನು ನಿವಾರಿಸಿ ಅನುಷ್ಠಾನದಲ್ಲಿ ಇಲಾಖೆಗಳು ಕಾರ್ಯೋನ್ಮುಖವಾಗಬೇಕಾಗಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.
      ಅವರು ಕುಂದಾಪುರ ತಾ. ಪಂ. ಸಭಾಂಗಣದಲ್ಲಿ ಕುಂದಾಪುರ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
     ವಾರಾಹಿ ಯೋಜನೆಯ ಕಾರ್ಯ ಯೋಜನೆಯ ಬಗ್ಗೆ ಅಸಮಾಧಾನಗೊಂಡ ಸಚಿವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು, ಈ ಯೋಜನೆ ಬಹಳಷ್ಟು ದೂರಗಾಮಿ ಯೋಜನೆಯಾಗಿದ್ದು, ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡಿದ ಯೋಜನೆಯಾಗಿದೆ. ಆದರೆ ಈಗ ಈ ಯೋಜನೆಯ ಬಗ್ಗೆ ಇದ್ದ ಆಕಾಂಕ್ಷೆಗಳು ಕಳೆದು ಹೋಗಿದೆ. ವಾರಾಹಿ ಯೋಜನೆ ಕುಂದಾಪುರಕ್ಕೆ ಶಾಶ್ವತವಾಗಿ ಅಂಟಿಕೊಳ್ಳದೇ ಶೀಘ್ರದಲ್ಲಿ ಅನುಷ್ಠಾನವಾಗಬೇಕಾಗಿದೆ. ಮುಂದಿನ ಪ್ರಗತಿ ಪರಿಶೀಲನಾ ಸಭೆ ಒಳಗಡೆ ಅಡೆತಡೆಗಳನ್ನು ನಿವಾರಿಸಿ ಯೋಜನೆ ಕಾರ್ಯಾರಂಭವಾಗುವಲ್ಲಿ ಅಧಿಕಾರಿಗಳು ಹಾಗೂ ಇಲಾಖೆ ನಿಷ್ಠೆಯಿಂದ ಕಾರ್ಯೋನ್ಮಖವಾಗಬೇಕಾಗಿದೆ ಎಂದು ಅವರು ಹೇಳಿದರು.
     ವಾರಾಹಿ ಯೋಜನೆಯ ಕಾಲುವೆ ಕಾಮಗಾರಿಗೆ ಡೀಮ್ಡ್ ಪಾರೆಸ್ಟ್‌ ಸಮಸ್ಯೆ ತೊಡಕಾಗಿದೆ ಎಂದ ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ವಿಧಾನಪರಿಷತ್‌ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಈ ಡೀಮ್ಡ್ ಪಾರೆಸ್ಟ್‌ ಪದವನ್ನು ತಾನು ವಾರಾಹಿ ಯೋಜನೆಯಲ್ಲಿ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಈ ಹಿಂದೆ ವಾರಾಹಿ ಯೋಜನೆಯ ಯಾವುದೇ ಕಡತದಲ್ಲಿ ಅಥವಾ ಪತ್ರದಲ್ಲಿ ಕಂಡಿಲ್ಲ ಎಂದರು.
       ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಡೀಮ್ಡ್ ಫಾರೆಸ್ಟ್‌ ಎನ್ನುವ ಪ್ರದೇಶದಲ್ಲಿ ಈಗಾಗಲೇ ಕಾಮಗಾರಿ ನಡೆದಿವೆ. ಮಾತ್ರವಲ್ಲ ಕಾಮಗಾರಿ ಬಗ್ಗೆ ಹಣಪಾವತಿ ಕೂಡ ಆಗಿದೆ. ಈ ನಿಟ್ಟಿನಲ್ಲಿ ಡೀಮ್ಡ್ ಫಾರೆಸ್ಟ್‌ ಹೇಗೆ ಬಂತು ಎಂದು ಪ್ರಶ್ನಿಸಿದರು.
      ಸಚಿವರು ವಿವಿಧ ಇಲಾಖೆಗಳ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು.

ಕಂದಾಯ ಇಲಾಖೆಯಡಿಯಲ್ಲಿ ಅಕ್ರಮ-ಸಕ್ರಮದಲ್ಲಿ ಇರುವ ಕಡತಗಳ ಬಾಕಿ ಹಾಗೂ ಅದರ ವಿಲೇವಾರಿ ಮಾಹಿತಿ ಪಡೆದ ಸಚಿವರು ಭೂ ನ್ಯಾಯ ಮಂಡಳಿಯ ಅರ್ಜಿಗಳ ವಿಲೇವಾರಿ, ತಿರಸ್ಕೃತವಾದ ಅರ್ಜಿಗಳು, ಇದಕ್ಕೆ ಕಾರಣಗಳನ್ನು ಅಧಿಕಾರಿಗಳಿಂದ ಪಡೆದರು. ರಾಜೀವಗಾಂಧಿ ವಸತಿ ಯೋಜನೆ, ಬಸವ ಕಲ್ಯಾಣ ವಸತಿ ಯೋಜನೆ, ಇಂದಿರಾ ಅವಾಜ್‌ ಯೋಜನೆಗಳಲ್ಲಿ ಮನೆ ಹಂಚಿಕೆಯಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ತಂದುಕೊಳ್ಳುವುದರ ಮೂಲಕ ಬಡವರಿಗೆ ಅತೀ ಶೀಘ್ರದಲ್ಲಿ ನಿವೇಶನ ಹಂಚಿಕೆಯಾಗಬೇಕಾಗಿದೆ. ಗೊಂದಲಗಳನ್ನು ಸರಿಪಡಿಸಿಕೊಂಡು ಮನೆ ನಿವೇಶನ ಹಂಚಿಕೆಯಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎಂದು ಅವರು ಹೇಳಿದರು.

ಕಳೆದ 1 - 2 ವರ್ಷಗಳಲ್ಲಿ ಅಕ್ರಮ ಸಕ್ರಮ ಕಡತಗಳ ವಿಲೇವಾರಿ ಸ್ಥಗಿತಗೊಂಡಿದೆ. ಅರ್ಜಿಗಳು ತಿರಸ್ಕೃತವಾದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕಾಗಿದೆ. ಅವರಲ್ಲಿ ಪುನರಪಿ ಆತ್ಮವಿಶ್ವಾಸ ಮೂಡಿಸಬೇಕಾಗಿದೆ. ಕಂದಾಯ ಇಲಾಖೆ ಜನಸಾಮಾನ್ಯರ ಪರವಾಗಿ ಇದೆ ಎನ್ನುವುದನ್ನು ತಿಳಿಸಬೇಕಾಗಿದೆ. ಮುಂದಿನ ಒಂದು ತಿಂಗಳ ಒಳಗೆ ಸುಮಾರು ಒಂದು ಸಾವಿರ ಜನರಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಕಂದಾಯ ಇಲಾಖೆ ಮಾಡಬೇಕಾಗಿದೆ ಎಂದರು.

ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಈ ಬಗ್ಗೆ ಪ್ರತಿಕ್ರಿಯಿಸಿ ಕಡತಗಳ ವಿಲೇವಾರಿಯ ಹಾದಿ ಸುಗಮಗೊಳಿಸಿ ಫಲಾನುಭವಿಗಳಿಗೆ ಅತಿ ಶೀಘ್ರದಲ್ಲಿ ನಿವೇಶನ ನೀಡುವ ಪ್ರಕ್ರಿಯೆ ನಡೆಯಬೇಕು ಎಂದರು.

ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳ ಅರ್ಜಿದಾರರಿಗೆ ಅರ್ಜಿ ತಿರಸ್ಕೃತವಾದ ಬಗ್ಗೆ ಮಾಹಿತಿ ಹಾಗೂ ಅದಕ್ಕೆ ಕಾರಣಗಳನ್ನು ಅಧಿಕಾರಿಗಳು ತಿಳಿಸಬೇಕಾಗಿದೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರೆ ಅದಕ್ಕೆ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಧ್ವನಿಗೂಡಿಸಿದರು.

ಅನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಡಾ| ಟಿ.ಎಂ. ರೇಜು, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಎ. ಪ್ರಭಾಕರ ಶರ್ಮಾ, ತಾ. ಪಂ. ಅಧ್ಯಕ್ಷ ದೀಪಿಕಾ ಶೆಟ್ಟಿ, ಉಪವಿಭಾಗಾಧಿಕಾರಿ ಯೋಗೀಶ್ವರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಸ್ವಾಗತಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com