ಅಂತರಾಷ್ಟ್ರೀಯ ಖ್ಯಾತಿಯ ಸಿನೇಮಾ ಸಂಗೀತ ನಿರ್ದೇಶಕ ಇಳಯರಾಜ ಹುಟ್ಟುಹಬ್ಬ

ಕೊಲ್ಲೂರು: ಸಂಗೀತ ಎನ್ನುವುದು ಲೋಕಭಾಷೆ ಎಂದು ಒಪ್ಪುವುದಾದರೆ ಅದಕ್ಕೆ ಯಾವುದೇ ಭಾಷಾ ಸೀಮಾರೇಖೆಯ ಅಗತ್ಯವಿಲ್ಲ. ಸಂಗೀತ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಇರುವವರು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಅಂತರಾಷ್ಟ್ರೀಯ ಖ್ಯಾತಿಯ ಸಿನೇಮಾ ಸಂಗೀತ ನಿರ್ದೇಶಕ ಇಳಯರಾಜ ಹೇಳಿದರು.
     ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಜೂ. 8ರಂದು 70ನೇ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಕುಟುಂಬ ಸದಸ್ಯರೊಡನೆ ಆಚರಿಸಿ ಮಾತನಾಡಿದರು.
      ಚೆಂಬೈ ವೈದ್ಯನಾಥ್‌ ಭಾಗವತರ್‌ ಸಂಗೀತದಿಂದ ಮಳೆ ಹರಿಸಿದರು. ಡಾ| ಕೆ.ಜೆ. ಜೇಸುದಾಸ್‌ ಸಂಗೀತ ಸಾಮ್ರಾಟರಾದರು. ಇದಕ್ಕೆಲ್ಲ ಕಾರಣ ಅವರಲ್ಲಿರುವ ಶ್ರದ್ದೆ, ಏಕಾಗ್ರತೆ, ಇಚ್ಛೆ ಹಾಗೂ ಗುರುಹಿರಿಯರ ಮೇಲಿರುವ ಭಕ್ತಿ. ಸಂಗೀತೊಪಾಸನೆಯಿಂದ ಸಂಸ್ಕಾರಯುತ ಜೀವನ ನಡೆಸಲು ಸಾಧ್ಯ ಎಂದು ಇಳಯರಾಜ ಅಭಿಪ್ರಾಯಪಟ್ಟರು.
       ಕಳೆದ 35 ವರುಷಗಳಿಂದ ನಿರಂತರವಾಗಿ ಪ್ರತಿ ವರುಷ ಕೊಲ್ಲೂರು ಕ್ಷೇತ್ರ ಸಂದರ್ಶಿಸುವ ಪರಿಪಾಠ ಹೊಂದಿರುವ ಇಳಯರಾಜ ತನ್ನ ಜೀವನಕ್ಕೊಂದು ಹೊಸ ತಿರುವು ನೀಡಿರುವುದು ತಾಯಿ ಮೂಕಾಂಬಿಕೆ ಎನ್ನುತ್ತಾರೆ. ಸಂಗೀತದಲ್ಲಿ ಹೊಸ ಹೊಸ ಆವಿಷ್ಕಾರಗಳೊಡನೆ ಶಾಸ್ತ್ರೀಯ ಹಾಗೂ ಆಧುನಿಕ ಸಂಗೀತವನ್ನು ಮೇಳೈಸಿ ವಿಶೇಷ ಸಾಧಕರಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳ ಸರಮಾಲೆ ಹೊಂದಿರುವ ಅವರು ಸರಳ ಸ್ವಭಾವದವರು. ಕನ್ನಡವನ್ನು ನಿರರ್ಗಳವಾಗಿ ಮಾತನಾಡುವ ಇಳಯರಾಜ ಪಂಚಭಾಷಾ ಸಂಗೀತ ನಿದೇರ್ಶಕರಾಗಿ ಹಿಂದಿ ಸಿನೇಮಾಗಳಲ್ಲಿ ಸಂಗೀತ ನೀಡುವುದರ ಮೂಲಕ ಉತ್ತರ ಭಾರತದ ಸಂಗೀತಾಸಕ್ತರ ಮನ ಗೆದ್ದವರು.
   ಕೊಲ್ಲೂರು ದೇವಳದಲ್ಲಿ ನವಗ್ರಹ ಹೋಮದಲ್ಲಿ ಪಾಲ್ಗೊಂಡ ಇಳಯರಾಜ ಶುಕ್ರವಾರ ಹಾಗೂ ಶನಿವಾರ ಮೂಕಾಂಬಿಕೆಯ ಉಪಾಸನೆಯಲ್ಲಿ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡಿದರು. ಈ ಹಿಂದೆ ಅವರು ಕೊಲ್ಲೂರು ದೇವಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಸಮರ್ಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com