ಅಭಿವೃದ್ಧಿಗೆ ಮೊದಲ ಆಧ್ಯತೆ: ಶಾಸಕ ಗೋಪಾಲ ಪೂಜಾರಿ

ಕುಂದಾಪುರ: ಪ್ರತಿಯೊಬ್ಬ ಜನಪ್ರತಿನಿಧಿಯೂ ತನ್ನ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು. ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಕ್ಷೇತ್ರದ ಜನತೆಗೆ ಮಾಹಿತಿ ನೀಡುವ ಜೊತೆಯಲ್ಲಿ ಸರ್ಕಾರದ ಅನುದಾನಗಳನ್ನು ಜೋಡಿಸಿ ಕಾರ್ಯಕ್ರಮವನ್ನು ರೂಪಿಸಿ ಮತದಾರರ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
    ಅವರು ಹೆಮ್ಮಾಡಿ ಸಮೀಪದ ಸುಳ್ಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಭಿನಂದನಾ ಹಾಗೂ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
       ಮೂರು ಅವಧಿಯ ಶಾಸಕನಾಗಿ ಸೇವೆ ಸಲ್ಲಿಸಿದ್ದ ನನ್ನ ಮೇಲೆ ವಿಶ್ವಾಸವಿಟ್ಟು ಮತದಾರರು 4ನೇ ಬಾರಿ ದಾಖಲೆಯ ಮತಗಳ ಅಂತರದಿಂದ ಆಶೀರ್ವಾದ ಮಾಡಿದ್ದಾರೆ. ಪಕ್ಷ ವಹಿಸಿದ್ದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಕುರಿತು ಸಂತೃಪ್ತಿ ಇದೆ. ಈ ಬಾರಿಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಗಳಿತ್ತು. ಆದರೆ ದೊರಕದೆ ಇರುವ ಕುರಿತು ಯಾವುದೆ ಬೇಸರಗಳಿಲ್ಲ. ಕ್ಷೇತ್ರದ ಜನರ ಸೇವೆ ಮಾಡಲು ಇನ್ನಷ್ಟು ಹೆಚ್ಚಿನ ಅವಕಾಶಗಳು ದೊರೆಕಿದೆ ಎಂದು ನುಡಿದ ಅವರು ಕ್ಷೇತ್ರದ ಜನತೆಯ ಪ್ರೀತಿ ಅಭಿಮಾನಗಳು ಎಲ್ಲ ಅಧಿಕಾರ ಸ್ಥಾನಕ್ಕಿಂತ ದೊಡ್ಡದು ಎಂದು ಹೇಳಿದರು.
        ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯ ತಜ್ಞ ರಾಜೇಶ್ ಕೆ.ಸಿ ಅವರು ಪ್ರತಿಯೊಬ್ಬನಿಗೂ ಯೋಗ್ಯ ಶಿಕ್ಷಣ ದೊರಕುವುದರಿಂದ ಸಮಾಜಮುಖಿಯಾಗಿ ಬದುಕಲು ಸಾಧ್ಯ. ಶಿಕ್ಷಣದಿಂದ ಸಂತೃಪ್ತಿ ಎನ್ನುವ ಭಾವನೆ ಸಮಾಜದ ಎಲ್ಲ ವರ್ಗದ ಜನರಲ್ಲಿಯೂ ಮೂಡಬೇಕು. ಯಾರಿಂದಲೂ ಕಳವು ಮಾಡಲು ಸಾಧ್ಯವಾಗದ ಶಾಶ್ವತವಾದ ಆಸ್ತಿಯಾದ ಶಿಕ್ಷಣವನ್ನು ನಮ್ಮದಾಗಿಸಿಕೊಳ್ಳುವ ಛಲ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದರು.
      ಮುಂಬಯಿಯ ಉದ್ಯಮಿ ಗೋಪಾಲ ಎಸ್ ಪುತ್ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಕೆ. ಗೋಪಾಲ ಪೂಜಾರಿಯನ್ನು ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಅಭಿನಂದನಾ ಭಾಷಣ ಮಾಡಿದರು.
       ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜು ಕೆ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಜಿ. ಪುತ್ರನ್, ಹೆಮ್ಮಾಡಿ ಮೀನುಗಾರರ ಸಂಘದ ಅಧ್ಯಕ್ಷ ಚಂದ್ರ ನಾಯಕ್, ಉದ್ಯಮಿ ಎಂ.ಎಂ ಸುವರ್ಣ, ತಾ.ಪಂ ಸದಸ್ಯೆ ಜಯಲಕ್ಷ್ಮೀ ಎಸ್. ರಾವ್, ಉದ್ಯಮಿ ನಾಗರಾಜ ಪುತ್ರನ್ ಮುಂಬಯಿ, ಶಿಕ್ಷಣ ಸಂಯೋಜಕ ಚಂದ್ರ ನಾಯ್ಕ್, ಗ್ರಾ.ಪಂ. ಸದಸ್ಯೆ ಅನ್ನಪೂರ್ಣ, ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಆಡಳಿಯ ಮಂಡಳಿಯ ಅಧ್ಯಕ್ಷ ಆನಂದ ಶೆಟ್ಟಿ, ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಂದಿ ದೇವಾಡಿಗ, ನಾಗಾ ನಾಯ್ಕ್, ಸುರೇಶ್ ಪುತ್ರನ್ ಅತಿಥಿಗಳಾಗಿಋದ್ದರು.
ದಾನಿಗಳ ನೆರವಿನಿಂದ ಸುಳ್ಸೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
       ಶಾಲೆಯ ಮುಖ್ಯೋಪಾಧ್ಯಾಯಿನಿ ಶಾರದಾ ದೇವಾಡಿಗ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಎನ್ ಬಿಲ್ಲವ ಸನ್ಮಾನ ಪತ್ರ ಓದಿದರು. ಶ್ರೀಕಾಂತ ಆಚಾರ್ ಹರೆಗೋಡು ನಿರೂಪಿಸಿದರು. ಶಿಕ್ಷಕಿ ಸುಜಾತ ಬನವಾಳಿಕಾರ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com