ತ್ರಾಸಿಯಲ್ಲಿ ಮುಂದುವರಿದ ಕಡಲ್ಕೊರೆತ

ಕುಂದಾಪುರ: ಪ್ರವಾಸಿ ತಾಣ ತ್ರಾಸಿಯಲ್ಲಿ ಕಡಲ ಅಬ್ಬರ ಹೆಚ್ಚಾಗಿದ್ದು, ಅಲ್ಲಿನ ಹೆದ್ದಾರಿಯ ಅಂಚಿನಲ್ಲಿ ಸಮುದ್ರ ದಂಡೆಗೆ ಹೊಂದಿಕೊಂಡು ನಿರ್ಮಿಸಲಾಗಿರುವ ಪ್ರವಾಸಿ ತಾಣ ಭಾಗಶಃ ಕಡಲು ಪಾಲಾಗಿದೆ.
     ಸಮುದ್ರದ ಉಬ್ಬರದ ಅಲೆಗಳು ಒಂದೇ ಸವನೆ ಪ್ರವಾಸಿ ತಾಣದ 250 ಮೀಟರ್‌ ಉದ್ದದ ನಡೆದಾರಿಗೆ ಅಪ್ಪಳಿಸುತ್ತಿರುವುದರಿಂದ ಅದರ ತಳಪಾಯದ ಅಡಿಯ ಮರಳು ಕೊರೆತಕ್ಕೊಳಗಾಗಿ ಪ್ರವಾಸಿ ತಾಣದ ಪ್ರಮುಖ ಆಕರ್ಷಣೆಯಾದ ನಡೆದಾರಿ ಉದ್ದಕ್ಕೂ ಕಡಲು ಸೇರುವ ಅಪಾಯ ಸೃಷ್ಟಿಯಾಗಿದೆ. ಒಂದು ಸ್ಥಳದಲ್ಲಿ ಕಡಲು ಮುಂದೆ ಬಂದ ಪರಿಣಾಮ ದಂಡೆ ಕುಸಿದು, ಅದರ ಮೇಲಿನ ಸೀಟು ಮತ್ತು ಒಂದು ತೆಂಗಿನ ಮರ ಕಡಲಿನ ಒಡಲು ಸೇರಿದೆ.
     ಕಳೆದ ನಾಲ್ಕು ದಿನಗಳಿಂದ ಇಲ್ಲಿ ಕಡಲಿನ ಅಲೆಗಳು ರೌದ್ರಾವತಾರ ತಾಳಿವೆ. ಭರತದ ಸಮಯದಲ್ಲಿ ಅಲೆಗಳು ಪ್ರವಾಸಿ ತಾಣದ ಎತ್ತರದ ದಂಡೆಗೆ ಬಡಿದು ಅಲ್ಲಿನ ರಕ್ಷಣೆಗೆ ಕಟ್ಟಿದ್ದ ಕಲ್ಲು ಮತ್ತು ನಡೆದಾರಿಯನ್ನು ಕೊರೆಯುತ್ತಿದೆ. ಮಂಗಳವಾರ ಸಂಜೆ ದಂಡೆಯುದ್ದಕ್ಕೂ ಕುಸಿತ ಉಂಟಾಗಿದೆ. ಇದೇ ಸ್ಥಿತಿ ಇನ್ನೂ ಒಂದೆರಡು ದಿನ ಮುಂದುವರಿದರೆ ಪ್ರವಾಸಿ ತಾಣದ ಬಹುಭಾಗ ಕಡಲು ಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ.
    ಮಂಗಳವಾರ ರಾತ್ರಿ ಶಾಸಕ ಕೆ. ಗೋಪಾಲ ಪೂಜಾರಿ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ನಿರ್ದೇಶನದಂತೆ ಬುಧವಾರ ನಿರ್ಮಿತಿ ಕೇಂದ್ರದ ಅಧಿಕಾರಿ ದಿನೇಶ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಥೋಡ್‌ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮದ ಬಗ್ಗೆ ಚರ್ಚಿಸಿದರು. ಕಡಲತೀರ ರಕ್ಷಣಾ ಪೊಲೀಸ್‌ ನಿರೀಕ್ಷಕ ಕೆ. ತಾರಾನಾಥ, ಗಂಗೊಳ್ಳಿ ಠಾಣಾಧಿಕಾರಿ ಎಸ್‌. ಸಂಪತ್‌ ಕುಮಾರ್‌ ಮತ್ತು ಸಿಬ್ಬಂದಿ, ಗಂಗೊಳ್ಳಿಯ 24x7 ಹೆಲ್ಪ್ಲೈನ್‌ನ ಮಹಮದ್‌ ಇಬ್ರಾಹಿಂ ಸ್ಥಳದಲ್ಲಿದ್ದು ಇಲ್ಲಿಗೆ ಬರುವ ಪ್ರವಾಸಿಗಳು ಯಾವುದೆೇ ಅಪಾಯಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ.

    ಜಿ. ಪಂ. ಸದಸ್ಯ ಅನಂತ ಮೊವಾಡಿ, ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸದಸ್ಯ ಎಸ್‌. ಜನಾರ್ದನ, ತ್ರಾಸಿ ಗ್ರಾ. ಪಂ. ಅಧ್ಯಕ್ಷೆ ವನಿತಾ ನಾಯಕ್‌, ವಂಡ್ಸೆ ಕಂದಾಯ ನಿರೀಕ್ಷಕ ಶಂಕರ ಶೆಟ್ಟಿ, ಬೈಂದೂರು ಕಂದಾಯ ನಿರೀಕ್ಷಕ ರವಿ, ಗ್ರಾಮ ಕರಣಿಕ ಗೌಡಪ್ಪ ಗೌಡ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com