ಕೋಟೇಶ್ವರ: ಎಡೆಬಿಡದೆ ಸುರಿದ ಬಿರುಸಿನ ಮಳೆಗೆ ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಮನೆಬೆಟ್ಟು ಎಂಬಲ್ಲಿ ಬುಧವಾರ ನೀರು ಹರಿಯುವ ತೋಡಿನ ಕಟ್ಟೆ ಒಡೆದು 300 ಎಕರೆಗೂ ಮಿಕ್ಕಿ ಕೃಷಿಭೂಮಿ ಜಲಾವೃತಗೊಂಡಿದ್ದು ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರತಿ ಮಳೆ ಗಾಲದಲ್ಲೂ ಈ ಸಂಕಷ್ಟ ಎದುರಿಸುತ್ತಾ ಬಂದಿರುವ ಇಲ್ಲಿನ ಕಷಿಕರು ಈ ಬಾರಿ ಹಿಂದೆಂದೂ ಕಂಡರಿಯದಷ್ಟು ನಷ್ಟ ಅನುಭವಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಒಂದೇ ಸವನೆ ಸುರಿಯುತ್ತಿರುವ ಮಳೆ ಯಿಂದಾಗಿ ನೀರು ಹರಿಯುವ ತೋಡಿನಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿದ್ದು ಮಣ್ಣಿನ ಕಟ್ಟೆ ಒಡೆದು ಹೋದುದರಿಂದ ಕೊಳಚೆ ನೀರು ಕಷಿಭೂಮಿ, ಮನೆಗಳಿಗೆ ನುಗ್ಗಿದೆ.
ಕೋಟೇಶ್ವರ ಮುಖ್ಯಪೇಟೆಯಿಂದ ದೊಡ್ಮನೆಬೆಟ್ಟು ಸಂಧಿಸುವ ಈ ನೀರಿನ ತೋಡು ಮುಂದೆ ಬೀಜಾಡಿ ಮೂಡು ಮತ್ತು ಪಡುಕೊಳದ ಮೂಲಕ ಸಮುದ್ರ ಸೇರುತ್ತದೆ. ಕೋಟೇಶ್ವರ, ಕಾಳಾವರ, ಕಟ್ಕೇರೆ, ಮಾರ್ಕೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮಳೆ ನೀರು ಈ ತೋಡಿನ ಮೂಲಕವೇ ಸಾಗುತ್ತದೆ.
ಬಿತ್ತನೆ ಬೀಜ ನೀರುಪಾಲು: ಮುಂಗಾರು ಕೃಷಿಗಾಗಿ ಈಗಾಗಲೇ ಗದ್ದೆಗೆ ಬಿತ್ತಿರುವ ಬೀಜಗಳು ನೀರಿನಲ್ಲಿ ಕೊಚ್ಚಿಹೋಗಿವೆೆ. ಮರಳು, ಮಣ್ಣು ಕೃಷಿಭೂಮಿಯನ್ನು ಸೇರಿವೆ. ಇದಲ್ಲದೆ ಪೇಟೆ ಭಾಗದ ತ್ಯಾಜ್ಯ, ಪ್ಲಾಸ್ಟಿಕ್ ಇನ್ನಿತರ ವಸ್ತುಗಳು ಗದ್ದೆ ಸೇರಿವೆ. ದೊಡ್ಮನೆ ಬೆಟ್ಟು ಪ್ರದೇಶದ ಕೃಷಿಭೂಮಿ ಜಲಾವೃತಗೊಂಡಿರುವುದಲ್ಲದೆ ಇಲ್ಲಿನ ಮನೆಗಳಿಗೆ, ಶಾಲೆ, ಅಂಗನವಾಡಿಗಳಿಗೆ ನೀರು ನುಗ್ಗಿದ್ದು ಪ್ರವಾಹದ ಭೀತಿ ಎದು ರಾಗಿದೆ.
*ಕಳೆದ 5 ವರ್ಷಗಳಿಂದ ಈ ಸಂಕಷ್ಟ ಎದುರಿಸುತ್ತಿದ್ದೇವೆ. ಪ್ರತಿ ಮಳೆಗಾಲದಲ್ಲಿಯೂ ತೋಡಿನ ಕಟ್ಟೆ ಒಡೆದು ಕೃಷಿಭೂಮಿ ನಾಶ ಆಗುತ್ತಲಿದೆ. ಕಳೆದ ಮಳೆಗಾಲದಲ್ಲಿಯೂ ಇದೇ ಅವಸ್ಥೆ ಸೃಷ್ಟಿಯಾಗಿತ್ತು. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ನೀರಿನ ತೋಡಿಗೆ ರಿವಿಟ್ಮೆಂಟ್ ನಿರ್ಮಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದನ ದೊರೆತ್ತಿಲ್ಲ. ಸ್ಥಳೀಯಾಡಳಿತ ನಿರ್ಲಕ್ಷ ವಹಿಸಿದೆ. ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು. -ನಾಗರಾಜ್ ಹತ್ವಾರ್, ಸ್ಥಳೀಯ ಕೃಷಿಕ *ಬೇಸಿಗೆಯಲ್ಲಿ ನೀರಿನ ತೋಡಿನ ಹೂಳು ಮೇಲೆತ್ತಲಾಗಿದೆ. ತೋಡಿನ ಇಕ್ಕೆಲಗಳಲ್ಲಿ ಮಣ್ಣಿನ ಕಟ್ಟೆಯನ್ನು ಪಂಚಾಯಿತಿ ವತಿಯಿಂದ ನಿರ್ಮಿಸಿದ್ದೇವೆ. ಬಹಳ ಉದ್ದದ ತೋಡಾಗಿರುವುದರಿಂದ ಅನುದಾನದ ಕೊರತೆ ಇದೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ.
-ರವೀಂದ್ರ ದೊಡ್ಮನೆ, ಸ್ಥಳೀಯ ಗ್ರಾ.ಪಂ.ಸದಸ್ಯರು
0 comments:
Post a Comment