ದೈಹಿಕ ಸಂಪರ್ಕವಾದರೆ ಸತಿಪತಿಗಳಾದಂತೆ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಹೊಸದಿಲ್ಲಿ: ಮದ್ರಾಸ್ ಹೈಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ, ಗಂಡು ಹಾಗೂ ಹೆಣ್ಣು ಪ್ರಾಪ್ತ ವಯಸ್ಸಿನಲ್ಲಿ ಪರಸ್ಪರ ಲೈಂಗಿಕ ಸಂಪರ್ಕವನ್ನು ಹೊಂದಿದಲ್ಲಿ ಅದನ್ನು ವಿವಾಹವೆಂದು ಪರಿಗಣಿಸಬಹುದು ಹಾಗೂ ಅವರನ್ನು ಪತಿ ಹಾಗೂ ಪತ್ನಿಯೆಂದು ಮಾನ್ಯ ಮಾಡಬಹುದೆಂದು ಹೇಳಿದೆ.‘‘ಅವಿವಾಹಿತನಿಗೆ 21 ವರ್ಷ ವಯಸ್ಸಾಗಿದ್ದರೆ ಹಾಗೂ ಅವಿವಾಹಿತೆಗೆ 19 ವರ್ಷ ವಯಸ್ಸಾಗಿದ್ದರೆ, ಅವರಿಗೆ ಸಂವಿಧಾನವು ಖಾತರಿಪಡಿಸಿರುವ ಆಯ್ಕೆಯ ಸ್ವಾತಂತ್ರ ದೊರೆಯುತ್ತದೆ. ಅವರು ತಮ್ಮ ಲೈಂಗಿಕ ಆಕಾಂಕ್ಷೆಯನ್ನು ಪರಸ್ಪರ ಈಡೇರಿಸಿಕೊಂಡಲ್ಲಿ ಈ ಕೃತ್ಯವು ಮುಂದೆ ಆಗಬಹುದಾದ ಪರಿಣಾಮಗಳಿಗೆ ಜವಾಬ್ದಾರಿ ಹೊರಲು ಪೂರ್ಣವಾಗಿ ಬದ್ಧರಾಗಬೇಕಾಗುತ್ತದೆ’’ ಎಂದು ಮುಖ್ಯ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
       ವಿವಾಹದ ವೇಳೆ ಮಂಗಳಸೂತ್ರ, ಹಾರವಿನಿಮಯ ಹಾಗೂ ಉಂಗುರ ತೊಡಿಸುವಂತಹ ಕ್ರಮಗಳು ಕೇವಲ ಸಾಮಾಜಿಕ ತೋರಿಕೆಗಷ್ಟೇ ಆಗಿವೆಯೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆತಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕವಾಗಿರುವ ಬಗ್ಗೆ ಇಬ್ಬರಲ್ಲಿ ಯಾರಾದರೂ ಒಬ್ಬರು ಸಮರ್ಪಕವಾದ ಪುರಾವೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿ, ತಮ್ಮ ವೈವಾಹಿಕ ಸಂಬಂಧವನ್ನು ಘೋಷಿಸಿಕೊಳ್ಳಬಹುದೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ. ಒಮ್ಮೆ ಈ ಘೋಷಣೆಗೆ ನ್ಯಾಯಾಲಯದ ಮಾನ್ಯತೆ ದೊರೆತಲ್ಲಿ, ಈ ಜೋಡಿಯನ್ನು ಸರಕಾರಿ ದಾಖಲೆಗಳಲ್ಲಿ ತಮ್ಮನ್ನು ಸತಿಪತಿಯರೆಂದು ತಾವಾಗಿಯೇ ದೃಢಪಡಿಸಿ ಕೊಳ್ಳಬಹುದೆಂದು ಅವರು ಹೇಳಿದ್ದಾರೆ.
         2006ರಲ್ಲಿ ಮಹಿಳೆಯೊಬ್ಬಳಿಗೆ ಜೀವನಾಂಶ ನೀಡಿಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನೀಡಿದ ತೀರ್ಪನ್ನು ಪರಿಷ್ಕರಿಸಿದ ಹೈಕೋರ್ಟ್ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಆಕೆಯ ಇಬ್ಬರು ಮಕ್ಕಳಿಗೆ ಮಾಸಿಕವಾಗಿ 500 ರೂ.ಗಳ ಜೀವನಾಂಶ ಹಾಗೂ 1 ಸಾವಿರ ರೂ. ಮೊಕದ್ದಮೆ ವೆಚ್ಚವನ್ನು ನೀಡುವಂತೆ ಕೌಟುಂಬಿಕ ನ್ಯಾಯಾಲಯ ಮಕ್ಕಳ ತಂದೆಗೆ ಆದೇಶಿಸಿತ್ತು.ಆದರೆ ಆತನ ಮಡದಿಯೆಂದು ಹೇಳಿಕೊಳ್ಳುವ ಮಹಿಳೆಗೆ ಆತನೊಂದಿಗೆ ಮದುವೆಯಾಗಿರುವುಕ್ಕೆ ಯಾವುದೇ ಪುರಾವೆಯಿಲ್ಲದಿರುವುದರಿಂದ ಆಕೆ ಜೀವನಾಂಶವನ್ನು ಪಡೆಯಲು ಅರ್ಹಳಲ್ಲವೆಂದು ಕೆಳನ್ಯಾಯಾಲಯ ಅಭಿಪ್ರಾಯಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಮಹಿಳೆಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ತಾವಿಬ್ಬರೂ ಕಾನೂನುಬದ್ಧ ವಾಗಿ ವಿವಾಹವಾಗಿರುವುದಾಗಿ ಆಕೆ ಅರ್ಜಿಯಲ್ಲಿ ತಿಳಿಸಿದ್ದರು. ತನ್ನ ಎರಡನೆ ಮಗುವಿನ ಜನನ ಪತ್ರಕ್ಕೆ ಆತ ಸಹಿ ಹಾಕಿದ್ದನು ಹಾಗೂ ತನ್ನ ಸಿಸೇರಿಯನ್ ಹೆರಿಗೆಗೆ ಒಪ್ಪಿಗೆ ಸೂಚಿಸಿದ್ದನು. ಆ ಮೂಲಕ ಆತನು ತನ್ನನ್ನು ಪತ್ನಿಯೆಂದೇ ಪರಿಗಣಿಸಿರುವುದಾಗಿ ಅರ್ಜಿದಾರ ಮಹಿಳೆಯು ನ್ಯಾಯಾಲಯಕ್ಕೆ ನಿವೇದಿಸಿದ್ದಳು. ಹೀಗಾಗಿ ತಾವಿಬ್ಬರೂ ಸತಿಪತಿಯರೆಂದು ಆಕೆ ಅರ್ಜಿಯಲ್ಲಿ ವಾದಿಸಿದ್ದಳು.
        ಅರ್ಜಿದಾರಳ ವಾದವನ್ನು ಸಮರ್ಥಿಸಿದ ಮದ್ರಾಸ್ ಹೈಕೋರ್ಟ್, ದೂರು ಅರ್ಜಿ ಸಲ್ಲಿಸಿದ 2000ನೆ ಇಸವಿಯ ಸೆಪ್ಟಂಬರ್‌ನಿಂದ ಮೊದಲ್ಗೊಂಡು ಪ್ರತಿ ತಿಂಗಳೂ 500 ರೂ. ಮಾಸಾಶನ ನೀಡುವಂತೆ ಮಹಿಳೆಯ ಪತಿಗೆ ಆದೇಶಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com