ಮೃತ ವಿಂಗ್‌ ಕಮಾಂಡರ್‌ ಡೆರಿಲ್‌ ಕ್ಯಾಸ್ತಲಿನೋ ಅವರ ಪತ್ನಿಯ ತವರು ಕುಂದಾಪುರ

ಕುಂದಾಪುರ: ಉತ್ತರಾಖಂಡದಲ್ಲಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಕಿನ್ನಿಗೋಳಿ ಮೂಲದ ವಿಂಗ್‌ ಕಮಾಂಡರ್‌ ಡೆರಿಲ್‌ ಕ್ಯಾಸ್ತಲಿನೋ ಅವರ ಪತ್ನಿಯ ತವರು ಮನೆ ಕುಂದಾಪುರ ಸಮೀಪದ ಬಂಟ್ವಾಡಿಯಾಗಿದ್ದು ಕಳೆದ ವರ್ಷವಷ್ಟೇ ಡೆರಿಲ್‌ ಅವರು ಬಂಟ್ವಾಡಿಗೆ ಬಂದು ಹೋಗಿದ್ದರು.
     ಮೂಲತಃ ಕಿನ್ನಿಗೋಳಿಯವರಾದರೂ ಮುಂಬಯಿನಲ್ಲಿ ವಾಸ್ತವ್ಯವಿದ್ದು, ಸದ್ಯ ಕೆಲಸದ ನಿಮಿತ್ತ ಕೋಲ್ಕತಾದಲ್ಲಿ ವಾಸವಾಗಿದ್ದ ಇವರು 2003ರಲ್ಲಿ ಜ್ಯೋತಿ ಒಲಿವೆರಾ ಕ್ಯಾಸ್ತಲಿನೋ ಅವರನ್ನು ವಿವಾಹವಾಗಿದ್ದರು. ಅವರು ಪ್ರತಿ ವರ್ಷಕ್ಕೊಮ್ಮೆ ಕುಟುಂಬ ಸಹಿತರಾಗಿ ಕುಂದಾಪುರದ ಬಂಟ್ವಾಡಿಗೆ ಬರುತ್ತಿದ್ದರು.
    ಈ ಬಾರಿಯೂ ನವೆಂಬರ್‌ನಲ್ಲಿ ಬರುವವರಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪಡುಕೋಣೆ(ಬಂಟ್ವಾಡಿ)ಯಲ್ಲಿ ವಾಸವಾಗಿದ್ದ ಮೃತರ ಮಾವ ಕ್ಲೆಮೆಂಟ್‌ ಒಲಿವೆರಾ ಹಾಗೂ ಪತ್ನಿ, ರೋನಿ ಒಲಿವೆರಾ ಅವರು ಕೋಲ್ಕತಾಕ್ಕೆ ತೆರಳಿದ್ದಾರೆ.
      ಡೆರಿಲ್‌ ಅವರ ಮೃತದೇಹವನ್ನು ಗುರುವಾರ ಉತ್ತರಾಖಂಡದ ಗೌರಿಕುಂಡ್‌ನಿಂದ ಡೆಹರಾಡೂನ್‌ಗೆ ತಂದು ಅಲ್ಲಿ ಸಕಲ ಮಿಲಿಟರಿ ಗೌರವ ಸಲ್ಲಿಸಿದ ಬಳಿಕ ಅದನ್ನು ಮುಂಬಯಿಗೆ ಕೊಂಡೊಯ್ದು ಸಾಂತಾಕ್ರೂಜ್‌ ಸೈಂಟ್‌ ಆ್ಯಂಟನಿ ಚರ್ಚ್‌ನಲ್ಲಿ ಬಲಿ ಪೂಜೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಅಂತ್ಯಕ್ರಿಯೆಯನ್ನು ವಕೋಲದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.     ಡೆರಿಲ್‌ ಅವರ ಮುತ್ತಾತ (ತಂದೆಯ ತಂದೆ) ಮಂಗಳೂರಿನ ಕದ್ರಿಯ ನಿವಾಸಿಯಾಗಿದ್ದರು. ಬಳಿಕ ಮುಂಬಯಿಗೆ ತೆರಳಿದ ಅವರು ಅಲ್ಲಿಯೇ ವಾಸ್ತವ್ಯ ಮಾಡಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com