ವಿಶ್ವ ಕೊಂಕಣಿ ಕೇಂದ್ರ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಉಡುಪಿ: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ಸ್ಥಾಪಿಸಲಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ - 2013ನೇ ಸಾಲಿನ ಎಂಜಿನಿಯರಿಂಗ್‌ ಮತ್ತು ಎಂಬಿಬಿಎಸ್‌ ಅಧ್ಯಯನ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಕಂಡ ಅರ್ಹತೆಗಳಿರುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.
      ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೇರಿರುವ ಕೊಂಕಣಿ ಮಾತೃಭಾಷೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಮಾತೃಭಾಷೆ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. 2013ನೇ ಇಸವಿಯಲ್ಲಿ ಎಂಜಿನಿಯರಿಂಗ್‌ ಅಥವಾ ಎಂಬಿಬಿಎಸ್‌ ಕೋರ್ಸಿನ ಮೊದಲ ವರ್ಷಕ್ಕೆ ಪ್ರವೇಶವನ್ನು ಪಡೆದುಕೊಳ್ಳುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ, ಎಸ್‌ಎಸ್‌ಎಲ್‌ಸಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯ ಮುಖ್ಯ ವಿಷಯಗಳಲ್ಲಿ (ಕೋರ್‌ ಸಬೆjಕ್ಟ್) ಶೇ. 70ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿರಬೇಕು ಮತ್ತು ಸಿಇಟಿ ಅಥವಾ ಇತರ ಪ್ರವೇಶ ಪರೀಕ್ಷೆಗಳಲ್ಲಿ 20,000ಕ್ಕಿಂತ ಒಳಗಿನ ಶ್ರೇಣಿಯನ್ನು (ರ್‍ಯಾಂಕ್‌) ಗಳಿಸಿರಬೇಕು.
       ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ರೂ.ಗಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು. ಕುಟುಂಬದಲ್ಲಿ ದೈಹಿಕ ಅಸಾಮರ್ಥ್ಯವಿರುವ ವ್ಯಕ್ತಿಗಳು/ ಹಿರಿಯ ನಾಗರಿಕರು/ ಹಾಗೂ ಒಂದಕ್ಕಿಂತ ಹೆಚ್ಚು ಕಲಿಯುತ್ತಿರುವ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ವರಮಾನದ ಮಿತಿಯನ್ನು 4.5 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಎರಡು ಧೃಡೀಕರಣಗಳನ್ನು ಕುಟುಂಬದ ವೈದ್ಯರಿಂದ ಮತ್ತು ಕುಟುಂಬದ ಸ್ಥಿತಿಗತಿಯನ್ನು ಬಲ್ಲ ಚಾರ್ಟರ್ಡ್‌ ಅಕೌಂಟಂಟ್‌ ಓರ್ವರಿಂದ ಪಡೆದು ಸಲ್ಲಿಸಬೇಕು.
         ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಲ್ಲಿ ಅಭ್ಯರ್ಥಿಯು ತನ್ನ ವಿದ್ಯಾಭ್ಯಾಸವನ್ನು ಹೊಂದಿ ಉದ್ಯೋಗವನ್ನು ಗಳಿಸಿದ ಬಳಿಕ ಇಬ್ಬರು ಅಭ್ಯರ್ಥಿಗಳನ್ನು ಪೋಷಿಸಲು ನೈತಿಕನಾಗಿ ಬದ್ಧರಾಗಬೇಕು ಹಾಗೂ 2013ನೇ ವರ್ಷದಲ್ಲಿ ಒಟ್ಟು 20 ದಿನಗಳನ್ನು ಸಮುದಾಯ ಸೇವೆಗೆ ಮೀಸಲಿಡಲು ಬದ್ಧರಾಗಿರಬೇಕು.
       ಮೇಲ್ಕಂಡ ಅರ್ಹತೆಗಳಿರುವ ಅತೀ ಅರ್ಹ ಅಭ್ಯರ್ಥಿಗಳನ್ನು ಒಂದು ಸ್ವತಂತ್ರ ಪರಿಶೀಲನಾ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುವುದು. ಹಾಗೆ ಆಯ್ಕೆಯಾದ ಪ್ರತಿ ಎಂಜಿನಿಯರಿಂಗ್‌ ಮತ್ತು ಎಂಬಿಬಿಎಸ್‌ ಆಕಾಂಕ್ಷಿ ವಿದ್ಯಾರ್ಥಿಗಳು ಅನುಕ್ರಮವಾಗಿ 30,000 ರೂ. ಮತ್ತು 40,000 ರೂ. ವಿದ್ಯಾರ್ಥಿ ವೇತನವನ್ನು 2013ರಲ್ಲಿ ಪಡೆಯುವರು.
     ಅಭ್ಯರ್ಥಿಗಳು ಇಂಟರ್‌ನೆಟ್‌ ಮುಖಾಂತರ ವಿಶ್ವ ಕೊಂಕಣಿ ಕೇಂದ್ರದ ವೆಬ್‌ಸೈಟ್‌ http://www.vishwakonkani.org/ ನಲ್ಲಿ ಸ್ಥಾಪಿಸಲಾಗಿರುವ ಆನ್‌ಲೈನ್‌ ಅರ್ಜಿ ವಿಧಾನದಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆ ದಿನ ಜು. 10. ಪತ್ರ ಮುಖೇನ ಅಥವಾ ಇನ್ನಾವುದೇ ವಿಧಾನಗಳಿಂದ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹಾಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಇನ್ನಿತರ ನಿಯಮ ನಿಬಂಧನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿಶ್ವ ಕೊಂಕಣಿ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.
     ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯು ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ನಂತಹ ಉನ್ನತ ಶಿಕ್ಷಣಗಳ ಆಕಾಂಕ್ಷಿಯಾಗಿರುವ, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಕೊಂಕಣಿ ಭಾಷಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕಲ್ಪಿಸುತ್ತದೆ. ಈ ನಿಧಿಯು ಚಿಂತಕ ಮತ್ತು ದಾನಿ ಟಿ.ವಿ. ಮೋಹನದಾಸ ಪೈಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿದ್ದು, ಇದರ ಮೂಲಕ 2010ನೇ ಇಸವಿಯಲ್ಲಿ 160 ಅರ್ಹ ವಿದ್ಯಾರ್ಥಿಗಳಿಗೆ 50 ಲಕ್ಷ ರೂ. 2011ನೇ ಇಸವಿಯಲ್ಲಿ 285 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಹಾಗೂ 2012ನೇ ಇಸವಿಯಲ್ಲಿ ಸುಮಾರು 1300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ 2. ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತಗಳನ್ನು ನೀಡಲಾಗಿತ್ತು. 2013ರಲ್ಲಿ 2.5 ಕೋ.ರೂ. ವಿದ್ಯಾರ್ಥಿವೇತನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷ ರಾಮದಾಸ ಕಾಮತ್‌ ಯು. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com