ಕೋಟೆಕೆರೆ ವೇಸ್ಟ್‌ವಿಯರ್ ದಂಡೆ ಕುಸಿತ, ಭೀತಿಯಲ್ಲಿ ಗ್ರಾಮಸ್ಥರು

ಕುಂದಾಪುರ: ತಾಲೂಕಿನ ಅತ್ಯಂತ ವಿಸ್ತಾರವಾಗಿರುವ ಕೋಟೆಕೆರೆ ಅಭಿವೃದ್ಧಿ ಕಾಮಗಾರಿ 2011-12ರಿಂದ ಆರಂಭಗೊಂಡಿದ್ದು, ಆರಂಭಿಕ ಹಂತದಲ್ಲಿ ಕಾಮಗಾರಿ ಮೇಲೆ ಕರಿಛಾಯೆ ಮೂಡಿಸಿದೆ. 
  ಕೆರೆಯಲ್ಲಿ ನೀರು ತುಂಬಿ ಹೆಚ್ಚುವರಿ ನೀರು ಹೊರಹೋಗಲು ರಚಿಸಲಾದ ವೇಸ್ಟ್‌ವಿಯರ್‌ನ ಎಡಪಾರ್ಶ್ವದ ದಂಡೆ ಗುರುವಾರ ಬೆಳಗ್ಗೆ ಒಡೆದು ಹೋಗಿದ್ದು, ಉಳಿದ ಭಾಗ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಏಕಾಏಕಿ ವೇಸ್ಟ್‌ವಿಯರ್‌ನ ದಂಡೆ ಒಡೆದು ಅಪಾರ ಪ್ರಮಾಣದಲ್ಲಿ ನೀರು ಹೊರಹೋಗುತ್ತಿರುವುದರಿಂದ ಕೆರೆಯ ಸುತ್ತಲಿನ ತಗ್ಗುಪ್ರದೇಶದ ಜನರು ಆತಂಕಿತರಾಗಿದ್ದಾರೆ. 
      ತಾಲೂಕಿನ ಹೊಸಂಗಡಿ ಗ್ರಾಮದ ಕೋಟೆಕೆರೆ ಐತಿಹಾಸಿಕ ಮಹತ್ವ ಹೊಂದಿರುವ ಕೆರೆ. ನಗರ ಸಂಸ್ಥಾನದ ಶಿವಪ್ಪ ನಾಯಕನ ಕಾಲಘಟ್ಟದಲ್ಲಿ ಈ ಕೆರೆ ಮಹತ್ತಿಕೆ ಹೊಂದಿತ್ತು. ಸುತ್ತಮುತ್ತಲಿನ 25ಕ್ಕೂ ಹೆಚ್ಚು ಹಳ್ಳಿಗಳಿಗೆ ಕೆರೆ ಜೀವನಾಧಾರ. ಕೆರೆಯಲ್ಲಿ ಹೂಳು ತುಂಬಿ ನಿರುಪಯುಕ್ತವಾಗುವ ಹಂತ ತಲುಪಿದ್ದ ಸಂದರ್ಭ ಸ್ಥಳೀಯರ ಬೇಡಿಕೆ, ಆಗ್ರಹದ ಮೇರೆಗೆ ಕೆರೆ ಅಭಿವೃದ್ಧಿಗೆ ಚಾಲನೆ ದೊರಕಿತ್ತು. ಊರಿಗೊಂದು ಕೆರೆ ಅಭಿವೃದ್ಧಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ 17 ಎಕರೆ ವಿಸ್ತಾರದ ಕೆರೆ ಅಭಿವೃದ್ಧಿಗೆ 1 ಕೋಟಿ ರೂ. ಮಂಜೂರು ಮಾಡಿತ್ತು. ಕೆರೆಯ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ಕೆರೆಯ ಭೂಮಿ ಅತಿಕ್ರಮಣ ತೆರವಿಗೆ ಪಂಚಾಯಿತಿ ಮುಂದಾದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ ಜಿಲ್ಲಾಡಳಿತ, ಕಂದಾಯ ಇಲಾಖೆಯ ಸಮರ್ಥ ಸ್ಪಂದನದಿಂದಾಗಿ ಕೆರೆ ಒತ್ತುವರಿ ತೆರವುಗೊಳಿಸಲಾಯಿತು. ನಂತರ ಕಾಮಗಾರಿಗೆ ಚಾಲನೆ ದೊರೆತಿತ್ತು. ಈ ತನಕ ವೇಸ್ಟ್‌ವಿಯರ್ (ಹೆಚ್ಚುವರಿ ನೀರು ಹೊರಹೋಗುವ ದಂಡೆ), ಕೃಷಿಭೂಮಿ ನೀರು ಸಾಗುವ ಶಾಶ್ವತ ಗೇಟ್, ಹೂಳು ಮೇಲೆತ್ತುವುದು, ಜಳ್ಳಾಗಿರುವ ಕೆರೆಯ ದಂಡೆ ಅಲ್ಲಲ್ಲಿ ರಿವಿಟ್‌ಮೆಂಟ್ ಇದರಲ್ಲಿ ಸೇರಿದೆ. 

ಅಪಾಯದ ಮನ್ಸೂಚನೆ: ವೇಸ್ಟ್‌ವಿಯರ್‌ನ ಅಕ್ಕಪಕ್ಕದಲ್ಲಿಯೂ ಕುಸಿತ ಉಂಟಾಗುತ್ತಿದ್ದು ಅಪಾಯದ ಮನ್ಸೂಚನೆ ನೀಡಿದೆ. ಕೆರೆಯ ನೀರು ಅಪಾಯ ಪ್ರಮಾಣದಲ್ಲಿ ಹೊರ ಹೋಗಿ ಕೃಷಿ ಭೂಮಿಗೆ ಸೇರಿದ್ದು, ತಗ್ಗು ಪ್ರದೇಶ ಜಲಾವತಗೊಂಡಿದೆ. ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ಕೆರೆಯ ಇಕ್ಕೆಲದ ರಸ್ತೆಯಲ್ಲಿ ಶಾಲೆ ಮಕ್ಕಳು ಸೇರಿದಂತೆ ನೂರಾರು ಮಂದಿ ನಡೆದಾಡುವುದರಿಂದ ಅಪಾಯದ ಭೀತಿ ಉಂಟಾಗಿದೆ. 

>>ವೇಸ್ಟ್‌ವಿಯರ್‌ನ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ, ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ. ವೇಸ್ಟ್‌ವಿಯರ್ ನೀರಿನಲ್ಲಿ ಕೊಚ್ಚಿಹೋಗುತ್ತದೆ ಎಂಬ ಆತಂಕ ಈ ಮೊದಲೇ ಹೊರಗೆಡಹಿದ್ದೆವು. ಅದೀಗ ಶ್ರುತಪಟ್ಟಿದೆ. ಸಿಮೆಂಟ್, ಜಲ್ಲಿಕಲ್ಲುಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ದಂಡೆ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಳಪೆ ಕಾಮಗಾರಿಯ ತನಿಖೆ ನಡೆಸಬೇಕು.
 -ಅವಿನಾಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಹೊಸಂಗಡಿ. 
ವರದಿ: ಜಾನ್ ಡಿಸೋಜಾ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com