ಕೊಲ್ಲೂರಿನಲ್ಲಿ ಕೇಂದ್ರ ನಾಗರೀಕ ರಾಜ್ಯ ಸಚಿವ ವೇಣುಗೋಪಾಲ ಚಂಡಿಕಾ ಹೋಮ

ಕುಂದಾಪುರ: ಕೇಂದ್ರ ನಾಗರೀಕ ರಾಜ್ಯ ಸಚಿವ ವೇಣುಗೋಪಾಲ ಕೆ.ಸಿ ಬುಧವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ತಮ್ಮ ಪತ್ನಿ ಪುತ್ರಿಯೊಂದಿಗೆ ಮಂಗಳವಾರ ರಾತ್ರಿ ಕ್ಷೇತ್ರಕ್ಕೆ ಆಗಮಿಸಿದ್ದರು.
     ದೇವಿಗೆ ಪ್ರಿತ್ಯರ್ಥವಾದ ಚಂಡಿಕಾ ಹೋಮ ಹಾಗೂ ಇತರ ಧಾರ್ಮಿಕ ಸೇವೆಯನ್ನು ಸಲ್ಲಿಸಿದರು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ನಾನು ಮೊದಲಿನಿಂದಲೂ ಮೂಕಾಂಬಿಕೆಯ ಭಕ್ತನಾಗಿದ್ದು ಯಾವಾಗಲೂ ಈ ಕ್ಷೇತ್ರಕ್ಕೆ ಬರುತ್ತಿರುವುದಾಗಿ ತಿಳಿಸಿದರು. ಉತ್ತರಭಾರತದ ಜಲಪ್ರಳಯದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. 
      ದಕ್ಷಿಣಭಾರತದ ಹಲವು ಯಾತ್ರಿಕರು ಇದರಲ್ಲಿ ಸಿಲುಕಿದ್ದು, ರಕ್ಷಣಾ ಪಡೆಗಳು ಚುರುಕು ಕಾರ್‍ಯಚರಣೆಯಲ್ಲಿ ನಿರತರಾಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಹಿಂದಿರುಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಬಿಜೆಪಿಯ ಚುಕ್ಕಾಣೆ ಹಿಡಿದಿದ್ದಾರೆ. ಇದರಿಂದ ಕಾಂಗ್ರೇಸ್‌ಗೆ ತೊಂದರೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೋದಿ, ಬಿಜೆಪಿ ಹಾಗೂ ಎನ್‌ಡಿ‌ಎ ಗಳಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ಅವರಿಂದ ಆ ಪಕ್ಷಗಳಿಗೆ ಹಿನ್ನೆಡೆಯಾಗಲಿದೆ. 
      ಒಂದು ರೀತಿಯಲ್ಲಿ ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಇದರಿಂದ ಕಾಂಗ್ರೇಸ್‌ಗೆ ತುಂಬಾ ಅನುಕೂಲವೇ ಹೊರತು ನಷ್ಟವಿಲ್ಲ. ಪ್ರಸ್ತುತ ಯುಪಿ‌ಎ ಸರ್ಕಾರದ ಜನಪ್ರಿಯ ಕಾರ್‍ಯಕ್ರಮಗಳನ್ನು ಮೆಚ್ಚಿ, ಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಇನ್ನೊಮ್ಮೆ ಸೋನಿಯಾಗಾಂಧಿ ನೇತೃತ್ವದ ಯುಪಿ‌ಎ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.
      ಕ್ಷೇತ್ರದ ಪ್ರಧಾನ ಅರ್ಚಕ ಡಾ| ನರಸಿಂಹ ಅಡಿಗ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಿದರು. ಸಚಿವರ ಪತ್ನಿ ಮತ್ತು ಪುತ್ರಿ ಜೊತೆಗಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಚಿವರನ್ನು ಬರಮಾಡಿಕೊಂಡರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com