ಹೆಮ್ಮಾಡಿ: ವಿದ್ಯಾರ್ಥಿಗಳಿಗೆ ಕಾನೂನು ಸಾಕ್ಷರತೆ

ಕುಂದಾಪುರ: ಜನಸಾಮಾನ್ಯರ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಕಾನೂನು ತೊಡಕುಗಳು ಎದುರಾಗಿ ಅವರು ಗೊಂದಲಕ್ಕೀಡಾಗುವ ಪರಿತ್ಥಿತಿ ನಿರ್ಮಾಣ ವಾಗುತ್ತದೆ. ನೆರೆ ಹೊರೆ ಜನರ ಬದುಕಿನ ಗೊಂದಲವನ್ನು ನಿವಾರಿಸಿ ಸೌಹಾರ್ದ ಜೀವನ ನಡೆಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ.ಭಾಲಕೃಷ್ಣ ಶೆಟ್ಟಿ ಹೇಳಿದರು.
       ಅವರು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ, ಹಾಗೂ ಶಿಶು ಅಭಿವೃದ್ಧಿ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹೆಮ್ಮಾಡಿ ಜನತಾ ಸ್ವತಂತ್ರ ಪ.ಪೂ.ಕಾಲೇಜಿನಲ್ಲಿ ನಡೆದ ಕಾನೂನು ಸಾಕ್ಷರತಾ ರಥದ ಮೂಲಕ ಕಾನೂನು ಸಾಕ್ಷರತೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಮರವಂತೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಸ್.ಜನಾರ್ದನ ಮರವಂತೆ ಮಾತನಾಡಿ, ದಿನ ನಿತ್ಯದ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರುವ ಕಾನೂನುಗಳ ಬಗ್ಗೆ  ಹದಿಹರೆಯದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅವರ ಮೂಲಕ ಜನಸಾಮಾನ್ಯರಿಗೆ ತಲುಪಿಸಿ ಪ್ರಜ್ಞಾವಂತ ನಾಗರಿಕನನ್ನಾಗಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ ಎಂದರು.
`ಮೋಟಾರು ವಾಹನ ಕಾಯಿದೆ'  ಮತ್ತು `ಕ್ರಿಮಿನಲ್ ಕಾಯಿದೆ' ಬಗ್ಗೆ ವಕೀಲರಾದ ಕೆ.ಕುಸುಮಾಕರ್ ಶೆಟ್ಟಿ, ಕೆ.ರಾಜಾರಾಮ ಶೆಟ್ಟಿ ವಿದ್ಯಾರ್ಥಿಗಳಿಗೆ ಕಾನೂನಿನ ಮಾಹಿತಿ ನೀಡಿದರು. 
        ಅಂದು ಬೆಳಿಗ್ಗೆ ಕುಂದಾಪುರದ ನ್ಯಾಯಾಲಯಗಳ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸುವರ್ಣ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ದೊರೆತ ನಂತರ ಗಂಗೊಳ್ಳಿ ಮಾರ್ಗವಾಗಿ ಸಾಗಿ ಬಂದ ರಥಕ್ಕೆ ಹೆಮ್ಮಾಡಿ ಕಾಲೇಜಿನ ವಿದ್ಯಾರ್ಥಿಗಳು ಆದರದಿಂದ ಬರಮಾಡಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಸೀತಾರಾಮ ಮಧ್ಯಸ್ಥ, ವಕೀಲರ ಸಂಘದ ಕಾರ್ಯದರ್ಶಿ ಕೆ.ಚಂದ್ರ ಶೇಖರ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.
        ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಚಂದನ್ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಜೊತೆ ಕಾರ್ಯದರ್ಶಿ ಮಂಜುನಾಥ. ಆರ್. ಆರಾಟೆ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com