ಬಾಲಕಿಯ ಭವಿಷ್ಯಕ್ಕೆ ಮುಳ್ಳಾದ ವಿಚಿತ್ರ ವ್ಯಾಧಿ

ಕುಂದಾಪುರ: ವಿಚಿತ್ರ ವ್ಯಾಧಿಯಿಂದ ಬಳಲುತ್ತಿರುವ ಮಗು. ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡು ರೆಕ್ಕೆ ಮುರಿದ ಹಕ್ಕಿಯಂತಾದ ಬದುಕು. ಕಿತ್ತುತಿನ್ನುವ ಬಡತನದ ನಡುವೆ ಆ ತಾಯಿ ಕಿಂಚಿತ್ ನೆಮ್ಮದಿಯನ್ನಂತೂ ಕಂಡಿಲ್ಲ. ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲು ತೊಳಲಾಡುತ್ತಾ ಇನ್ನೊಂದು ಮಗುವಿನ ಆರೈಕೆಯ ಚಿಂತೆಯಲ್ಲಿ ಬಳಲಿದ ಆಕೆಯ ಪಾಡು ಎಂಥವರಿಗೂ ಮರುಕಹುಟ್ಟಿಸುತ್ತದೆ. ಗುಜ್ಜಾಡಿ ಗ್ರಾಮದ ಕೊಡಪಾಡಿ ನಿವಾಸಿ ಪದ್ಮಾ ಅವರು ತನ್ನ ಮಗಳು ಪ್ರೀತಿಗೆ ಹುಟ್ಟಿನಿಂದಲೇ ಅಂಟಿದ್ದ ವಿಚಿತ್ರ ವ್ಯಾಧಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಪಡಿಪಾಟಲು ಪಡುತ್ತಿದ್ದಾರೆ. 
    ಪದ್ಮಾ ಮತ್ತು ಶ್ರೀಧರ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು. ಮೊದಲಿಗಳಾದ ಪ್ರೀತಿ ಹುಟ್ಟುವಾಗಲೇ ತೀರಾ ಮೃದುಮೂಳೆಯನ್ನು ಹೊಂದಿದ್ದು ಸಮಸ್ಯೆಯನ್ನು ಅನುಭವಿಸುತ್ತಿದ್ದಳು. ಆಕೆಯ ಕೈಕಾಲುಗಳನ್ನು ಬಿಗಿಯಾಗಿ ಹಿಡಿದರೆ ಮೂಳೆ ಮುರಿಯುವಂತಹ ಅನುಭವವಾಗುತ್ತಿದ್ದುದರಿಂದ ಆತಂಕಗೊಂಡ ಪೋಷಕರು ಹಲವೆಡೆ ಆಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತೀರಾ ಮೃದುಮೂಳೆಯನ್ನು ಹೊಂದಿದ ಪ್ರೀತಿಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ ಏಳು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಕಾಲುಗಳಿಗೆ ತಲಾ ಮೂರರಂತೆ ಆರು ಸ್ಟೀಲ್ ರಾಡುಗಳನ್ನು ಹಾಗೂ ಕೈಗೆ ಕೂಡಾ ಸ್ಟೀಲ್ ರಾಡನ್ನು ಅಳವಡಿಸಲಾಗಿದೆ. ಒಮ್ಮೆ ಮಗು ನಡೆದಾಡುವಾಗ ಆಕಸ್ಮಿಕವಾಗಿ ಬಿದ್ದು ಕೈ ಮೂಳೆ ಮುರಿತಕ್ಕೆ ಒಳಗಾಗಿ ರಾಡು ಹೊರಬಂದುದರಿಂದ ಕೈ ಬೆಂಡಾಗಿದೆ. ಅದನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. 
   ಏತನ್ಮಧ್ಯೆ ಅನೇಕ ವೈದ್ಯರಲ್ಲಿ ತೋರಿಸಿದ್ದರೂ ಪ್ರೀತಿಯ ಕಾಯಿಲೆಗೆ ಸರಿಯಾದ ಚಿಕಿತ್ಸೆಯನ್ನು ಯಾರೂ ಸೂಚಿಸಿಲ್ಲ. ಕಾಡುತ್ತಿರುವ ವಿಚಿತ್ರ ಕಾಯಿಲೆಯ ಗುಟ್ಟನ್ನೂ ಬಿಚ್ಚಿಟ್ಟಿಲ್ಲ. ಆದರೆ ಪ್ರೀತಿ ನಿಲ್ಲದಂತೆ, ಬೀಳದಂತೆ, ಯಾರಾದರೂ ತಳ್ಳದಂತೆ ಈಕೆಯನ್ನು ಯಾರಾದರೂ ನೋಡಿಕೊಳ್ಳಬೇಕು. ಈಕೆ ಆಯತಪ್ಪಿ ಬಿದ್ದಲ್ಲಿ ಮತ್ತೆ ಚಿಕಿತ್ಸೆ ಅನಿವಾರ್ಯ. ಸಾಕಷ್ಟು ಎಚ್ಚರಿಕೆಯಿಂದ ಈಕೆಯನ್ನು ನೋಡಿಕೊಳ್ಳಿ. ಮುಂದೆ ಎಂದಾದರೊಂದು ದಿನ ಈ ಮಗು ಎಲ್ಲ ಮಕ್ಕಳಂತಾಗಲೂಬಹುದು ಎಂದು ವೈದ್ಯರು ಪ್ರೀತಿಯ ಭವಿಷ್ಯದ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಂತೆ ಮಾತನಾಡಿದ್ದಾರೆ. ಆದರೆ ಮಗುವಿನ ಚಿಕಿತ್ಸೆಗಾಗಿ ಈಗಾಗಲೇ ಮೂರು ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚಾಗಿದ್ದರೂ ಪ್ರೀತಿ ಸಂಪೂರ್ಣವಾಗಿ ಗುಣಮುಖಳಾಗುವ ಭರವಸೆಯನ್ನಂತೂ ವೈದ್ಯರು ವ್ಯಕ್ತಪಡಿಸದಿರುವುದು ತಾಯಿ ಪದ್ಮಾ ಅವರ ನಿತ್ಯಚಿಂತೆಗೆ ಕಾರಣವಾಗಿದೆ.
     ಒಂಭತ್ತರ ಹರಯದ ಪ್ರೀತಿ ಸದ್ಯ ಕೊಡಪಾಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಎಲ್ಲಾ ಮಕ್ಕಳಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಚುರುಕಾಗಿರುವ ಈಕೆ ಚಿತ್ರಕಲೆ ಮತ್ತು ಸಂಗೀತದಲ್ಲಿ ಪ್ರತಿಭಾವಂತೆ. ಆದರೆ ಪ್ರೀತಿಯ ನಿತ್ಯಕರ್ಮಗಳು, ಊಟೋಪಚಾರಗಳನ್ನು ಮಾಡಿಸುವುದರೊಂದಿಗೆ ಈಕೆಯನ್ನು ಜೋಪಾನವಾಗಿ ಶಾಲೆಗೆ ಕರೆದೊಯ್ದು ವಾಪಾಸು ಕರೆತರುವ ನಾಜೂಕಿನ ಕೆಲಸವನ್ನು ಈಕೆಯ ತಾಯಿಯೇ ನೋಡಿಕೊಳ್ಳಬೇಕಾಗಿದೆ. ಬಸ್ ಚಾಲಕರಾಗಿದ್ದು ಕೂಲಿನಾಲಿ ಮಾಡಿ ಹೇಗೋ ಜೀವನ ನಿರ್ವಹಿಸುತ್ತಿದ್ದ ಪದ್ಮಾ ಅವರ ಪತಿ ಶ್ರೀಧರ ಅವರು, ಇತ್ತೀಚೆಗೆ ಬಸ್ಸಿನಿಂದ ಇಳಿಯುವಾಗ ಜಾರಿಬಿದ್ದು ತೀರಿಕೊಂಡಿದ್ದರಿಂದ ಪದ್ಮಾ ಕಂಗಾಲಾಗಿದ್ದಾರೆ. ಸಂಸಾರದ ಸಂಕಷ್ಟಗಳನ್ನೆಲ್ಲಾ ಹೇಗೋ ಒಟ್ಟಾಗಿಯೇ ನಿಭಾಯಿಸಿಕೊಂಡು ಹೋಗುತ್ತಿದ್ದ ಗಂಡನನ್ನು ಕಳೆದುಕೊಂಡ ಪದ್ಮಾ ಅವರಿಗೆ ದಿಕ್ಕುಗಾಣದಂತಾಗಿದೆ. ಸ್ವಂತ ಭೂಮಿ, ಆಸ್ತಿ-ಪಾಸ್ತಿಯೂ ಇಲ್ಲ. ಮಗುವಿನ ಔಷಧಕ್ಕೂ ತನ್ನ ಬಳಿ ಹಣವಿಲ್ಲ ಎಂಬುದು ಪದ್ಮಾ ಅವರ ಅಳಲು. 

      ವಿಚಿತ್ರ ವ್ಯಾಧಿಯಿಂದ ಬಳಲುತ್ತಿರುವ ಈ ಮಗುವಿನ ಬದುಕು-ಭವಿಷ್ಯ ಹಸನಾಗಲು ಸಹೃದಯಿಗಳ, ದಾನಿಗಳ ನೆರವು ಹಾಗೂ ಸಹಕಾರ ಅಗತ್ಯವಿದೆ. ಸಹಾಯ ನೀಡಬಯಸುವವರು ಕರ್ನಾಟಕ ಬ್ಯಾಂಕ್ ತ್ರಾಸಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ 7552500100849301 ಅಥವಾ ಶ್ರೀಧರ, ಜನತಾ ಕಾಲೋನಿ ಭಾರತ್ ನಗರ, 5ನೇ ಕ್ರಾಸ್, ಕೊಡಪಾಡಿ ಗುಜ್ಜಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. ದೂರವಾಣಿ 9945374329 ಸಂಪರ್ಕಿಸಬಹುದು.

ಸಿ. ಕೆ. ಹೆಮ್ಮಾಡಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com