ಮಾದರಿಯಾಗಿ ಮೂಡಿಬಂದ ಮರವಂತೆ ಗ್ರಾಮಸಭೆ

ಮರವಂತೆ:  ಮಳೆಗಾಲ, ಕೃಷಿ ಋತು ನಡುವೆಯೂ ಹಾಜರಾದ ಮತದಾರರ ಸಂಖ್ಯೆ 150. ನಿಗದಿತ ಕಾಲಕ್ಕೆ ಸರಿಯಾಗಿ ಆರಂಭ. ಸ್ವೀಕೃತ ಕಾರ್ಯಸೂಚಿಯಂತೆ ಸಾಗಿದ ಸಭೆ. ಅಹವಾಲು ಮಂಡಿಸಲು, ಕುಂದು ಕೊರತೆಗಳನ್ನು ಎತ್ತಿ ಹೇಳಲು ದೊರಕಿದ ಅವಕಾಶವನ್ನು ಸಭಾಮರ್ಯಾದೆಯನ್ನು ಗೌರವಿಸುತ್ತ ಬಳಿಸಿಕೊಂಡ ಸಾರ್ವಜನಿಕರು. ಅಡ್ಡಿಯಾಗದ ಕೆಲವು ಪ್ರಮುಖ ಅಧಿಕಾರಿಗಳ ಗೈರು ಹಾಜರಿ. ಹೀಗೆ ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಶನಿವಾರ ನಡೆದ ಈ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಮಾದರಿಯಾಗಿ ಮೂಡಿಬಂದು, ಯಶಸ್ವಿಯಾಗಿ ಉದ್ದೇಶಿತ ಗುರಿಸಾಧಿಸಿತು. 
       ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತಿಸಿ, ಆರಂಭಿಕ ಮಾತುಗಳನ್ನಾಡಿದ ನಿಕಟಪೂರ್ವ ಅಧ್ಯಕ್ಷ ಎಸ್. ಜನಾರ್ದನ ಪಂಚಾಯತ್‌ನ ಸಮಗ್ರ ಸಾಧನೆಯನ್ನು ಪರಿಗಣಿಸಿ ಅದಕ್ಕೆ 2012-13ನೆಯ ಸಾಲಿನ ರಾಷ್ಟ್ರೀಯ ಪಂಚಾಯತ್ ಸಬಲೀಕರಣ ಮತ್ತು ಉತ್ತರದಾಯಿತ್ವ ಪುರಸ್ಕಾರ ನೀಡಲಾಗಿದೆ. ಇದು 14 ಲಕ್ಷ ರೂಪಾಯಿ ನಗದು ಬಹುಮಾನವನ್ನೊಳಗೊಂಡಿದೆ. ರಾಷ್ಟ್ರ ಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ಸಾರ್ವಜನಿಕರು, ಮೇಲಿನ ಸ್ತರದ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ನೀಡಿದ ಸಕಾಲಿಕ ಬೆಂಬಲ ಮತ್ತು ಸಹಯೋಗ ಕಾರಣ ಎಂದು ಹೇಳಿ ಅವರಿಗೆಲ್ಲ ಕೃತಜ್ಞತೆ ಸಲ್ಲಿಸಿದರು. 
        ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ ಕಳೆದ ವರ್ಷದ ಗ್ರಾಮಸಭೆಗಳ ನಿರ್ಣಯಗಳ ಅನುಪಾಲನಾ ವರದಿ ಮತ್ತು, ಕೈಗೊಂಡ ಕಾಮಗಾರಿಗಳ ವಿವರ ನೀಡಿದರೆ, ಕರಸಂಗ್ರಾಹಕ ಶೇಖರ್ ಎಂ. ಗ್ರಾಮಸಭೆಯ ಪೂರ್ವದಲ್ಲಿ ನಡೆದ ವಾರ್ಡ್‌ಸಭೆಗಳ ನಡಾವಳಿಗಳನ್ನು ಓದಿದರು. ಇತ್ತೀಚಿನ ಸರಕಾರಿ ಆದೇಶದನ್ವಯ ಅಭಿವೃದ್ಧಿ ಯೋಜನೆಗಳ ಸಮಗ್ರ ಗುಚ್ಛದಲ್ಲಿ ಸೇರಿಸಿಕೊಳ್ಳಬೇಕಾದ ಕಾಮಗಾರಿ, ಕೆಲಸಗಳ ಸೂಚನೆಯನ್ನು ಆಹ್ವಾನಿಸಲಾಯಿತು. ಪುಟ್ಟಯ್ಯ ಪೂಜಾರಿ ನಾಲ್ಕು ವಾರ್ಡ್‌ಗಳಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಪಟ್ಟಿ ನೀಡಿದರು. ಸುಬ್ರಾಯ ಹೆಬ್ಬಾರ್ ಗಾಣದಡಿಗೆ ರಸ್ತೆ ಸಂಪರ್ಕ ಬೇಕೆಂದರು.
     ಗಣೇಶ ಮಧ್ಯಸ್ಥ ಪೂರ್ವ ಶಾಲೆಗೆ ಪಂಚಾಯತ್ ನೆರವಿನ ಅಗತ್ಯವಿದೆ ಎಂದರು. ಲೀನಾ ಕ್ರಾಸ್ತಾ ಮುತ್ತಯ್ಯ ಆಚಾರ್ಯ ಮನೆ ವರೆಗಿನ ರಸ್ತೆಯನ್ನು ಕಡೆಗಣಿಸಲಾಗಿ ಎಂದು ದೂರಿದರು. ವಿನಯ್ ಡಿ ಆಲ್ಮೇಡಾ ಸಾಧನಾ ಮಾರ್ಗದ ಒಂದು ಭಾಗವನ್ನು ಎತ್ತರಿಸಬೇಕೆಂಬ ಸಲಹೆಯಿತ್ತರು. ನಾಗೇಶ ಎಸ್. ರಾವ್ ಕಾರ್ಯದರ್ಶಿಯ ನಿಯೋಜನೆ ರದ್ದುಗೊಳಿಸಿ, ಮರಳಿ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಮರವಂತೆಗೆ ಪಶು ಇಲಾಖೆಯ ಸೌಲಭ್ಯ ಸಾಲದು ಎಂದು ಹೇಳಿದರು. ಮೋಹನ ಖಾರ್ವಿ ಸಿ‌ಆರ್‌ಜಡ್ ನಿಯಮ ಸಡಿಲಿಸಬೆಕು ಎಂದು ಆಗ್ರಹಿಸಿದರು. ಅಭಿಲಾಷ್ ಕಸದ ತೊಟ್ಟಿಗಳನ್ನು ಇಡಬೇಕೆಂಬ ಸಲಹೆ ನೀಡಿದರು. ಜನರ ಬೇಡಿಕೆ ಮತ್ತು ದೂರುಗಳನ್ನು ದಾಖಲಿಸಿಕೊಳ್ಳಲಾಯಿತು. 
        ವೈದ್ಯಾಧಿಕಾರಿ ಡಾ. ಗಿರೀಶ ಗೌಡ, ಪಶುವೈದ್ಯಾಧಿಕಾರಿ ಡಾ. ಕೆ. ಪಿ ಅರುಣ, ಕೃಷಿ ಸಹಾಯಕ ಎಂ. ಪರಶುರಾಮ್, ಗ್ರಾಮ ಕರಣಿಕ ಸಂತೋಷ್, ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ವೇಣುಗೋಪಾಲ ಕಿಣಿ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ವಿವಿಧ ವರ್ಗದ ಜನರಿಗೆ ಲಭ್ಯವಿರುವ ಸೌಲಭ್ಯಗಳ ಮಾಹಿತಿ ನೀಡಿದರು. 
         ನಿವೃತ್ತ ಉಪನ್ಯಾಸಕ ಟಿ. ಕೆ. ಖಾರ್ವಿ ಪಂಚಾಯತ್ ಹೊರತಂದ ಅದರ ಸಾಧನೆಗಳ ವಿಸ್ತೃತ ವರದಿಯನ್ನು ಬಿಡುಗಡೆಗೊಳಿಸಿ, ಸುಸಜ್ಜಿತ ಸ್ಮಶಾನ ನಿರ್ಮಿಸಲು ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದರು. ಮಾರ್ಗದರ್ಶಿ ಅಧಿಕಾರಿ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಸೀತಾರಾಮ ಶೆಟ್ಟಿ ಗ್ರಾಮಸಭೆಯ ಮಹತ್ವವನ್ನು ವಿವರಿಸಿ, ಇದನ್ನು ಸಮರ್ಪಕವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸುತ್ತಿರುವ ಪಂಚಾಯತನ್ನು ಮತ್ತು ಪ್ರಜ್ಞಾವಂತಿಕೆ ಪ್ರದರ್ಶಿಸುತ್ತಿರುವ ಸಾರ್ವಜನಿಕರನ್ನು ಅಭಿನಂದಿಸಿದರು. ಊರಿನ ಪರಿಣತ ಮುಳುಗುಗಾರ, ಕಡಲಾಮೆ ಸಂರಕ್ಷಕ ದಾಸಿ ವೆಂಕಟ ಖಾರ್ವಿ ಅವರನ್ನು ಸನ್ಮಾನಿಸಲಾಯಿತು ಮತ್ತು ಮೂವರು ಮಹಿಳಾ ಮೀನು ಮಾರಾಟಗಾರರಿಗೆ ಮೀನುಗಾರಿಕಾ ಇಲಾಖೆ ಒದಗಿಸಿದ ಶೀತರಕ್ಷಕ ಮೀನು ಸಂಗ್ರಾಹಕಗಳನ್ನು ವಿತರಿಸಲಾಯಿತು. 
           ಉಪಾಧ್ಯಕ್ಷೆ ಪ್ರೇಮಾ ಪೂಜಾರಿ ಮತ್ತು ಎಲ್ಲ ಸದಸ್ಯರು, ಕಿರಿಯ ಇಂಜಿನಿಯರ್ ಶ್ರೀಕಾಂತ್, ಗಂಗೊಳ್ಳಿಯ ಎ‌ಎಸ್‌ಐ ಬಾಬು, ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಅಂಗನವಾಡಿ ಮತ್ತು ಬಿ‌ಎನ್‌ಎ ಕಾರ್ಯಕರ್ತರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಗ್ರೇಶನ್ ಕ್ರಾಸ್ತಾ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com