ಬಸ್ ಪ್ರಯಾಣ ದರ ಏರಿಕೆ ಸಿಪಿಐ(ಎಂ) ಖಂಡನೆ

ಕುಂದಾಪುರ: ಅಧಿಕಾರಕ್ಕೆ ಬಂದ ತಕ್ಷಣ ಅಗ್ಗದ ಅಕ್ಕಿ, ಗುಟ್ಕಾ ನಿಷೇದದಂತಹ ಕೆಲವು ಜನಾಕರ್ಷಕ ಯೋಜನೆಗಳನ್ನು ಪ್ರಕಟಿಸಿ ಜನಮೆಚ್ಚುಗೆ ಪಡೆದಿದ್ದ ಕಾಂಗ್ರೆಸ್ ಸರ್ಕಾರದ ಇನ್ನೊಂದು ಮುಖ ಈಗ ಬಯಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ವಿಭಾಗಗಳ ಪ್ರಯಾಣ ದರಗಳನ್ನು ಶೇ. 10.50ರಷ್ಟು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಪ್ರಯಾಣ ದರಗಳನ್ನು ಶೇ. 16ರಷ್ಟು ಏರಿಕೆ ಮಾಡಿರುವ ಸರ್ಕಾರ, ಈಗಾಗಲೇ ಅಗತ್ಯ ವಸ್ತುಗಳ ತೀವ್ರ ಬೆಲೆಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗಗಳ ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ. ಅತ್ಯಧಿಕ ದರ ಏರಿಕೆಯಾಗಿದ್ದು ಕಾಂಗ್ರೆಸ್ ಸರ್ಕಾರದ ಅತ್ಯಂತ ಖಂಡನಾರ್ಹ ಕ್ರಮವಾಗಿದೆ ಹಾಗೂ ಜನ ವಿರೋಧಿಯಾಗಿದೆ ಎಂದು ಉಡುಪಿ ಸಿಪಿಐ(ಎಂ) ಆಪಾದಿಸಿದೆ.
          ಕೇಂದ್ರದಲ್ಲಿರುವುದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ. ಅದು ಆರು ತಿಂಗಳಲ್ಲಿ ಡೀಸೆಲ್ ದರವನ್ನು ಐದು ಬಾರಿ ಏರಿಸಿದ್ದನ್ನು ರಾಜ್ಯ ಸರ್ಕಾರ ಸಮರ್ಥಿಸಲಾಗದು. ಕೇಂದ್ರ ಸರ್ಕಾರ ತೈಲ ಕಂಪೆನಿಗಳ ಲಾಭಗಳಿಕೆಗೆ ಅನುಕೂಲ ಮಾಡಿಕೊಡಲು ತೈಲ ಮಾರಾಟವನ್ನು ನಿಯಂತ್ರಣ ಮುಕ್ತಗೊಳಿಸಿದ್ದೇ ತೈಲೋತ್ಪನ್ನಗಳ ನಿಯಂತ್ರಣವಿಲ್ಲದ ಬೆಲೆ ಏರಿಕೆಗೆ ಕಾರಣವಾಗಿದೆ. ರಾಜ್ಯ ಸರ್ಕಾರ ಇದನ್ನು ಮರೆ ಮಾಚಲು ಸಾಧ್ಯವಿಲ್ಲ. ತೈಲ ಕಂಪೆನಿಗಳು ಮತ್ತೊಮ್ಮೆ ಪೆಟ್ರೋಲ್ ದರವನ್ನು ಲೀಟರ್‍ಗೆ 2ರೂ. ಏರಿಸಿದ್ದು ಅಷ್ಟೇ ಖಂಡನಾರ್ಹವಾಗಿದ್ದು ಸಾರಿಗೆ ನಿಗಮಗಳಿಗೆ ಡಿಸೇಲ್ ಬೆಲೆ ಏರಿಕೆಯಿಂದ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ಜನರ ಮೇಲೆ ಹೇರುವ ಬದಲು ರಾಜ್ಯ ಸರ್ಕಾರ ನಿಗಮಗಳಿಗೆ ಇಂತಹ ಸಂದರ್ಭದಲ್ಲಿ ಅಗತ್ಯ ಸಬ್ಸಿಡಿ ನೀಡಬೇಕು. ಸೇವೆಯನ್ನು ಒದಗಿಸುವ ವಿಷಯದಲ್ಲಿ ಲಾಭವೊಂದೇ ಗುರಿಯಾಗಿರಬಾರದು ಎಂದು ಸಿಪಿಐ(ಎಂ) ಹೇಳಿದೆ.
           ಸರ್ಕಾರದ ಈ ಕ್ರಮ ಅತ್ಯಂತ ಜನವಿರೋಧಿಯಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜ್ಯದ ಜನತೆಗೆ ಅಲ್ಪಸ್ವಲ್ಪ ಪರಿಹಾರ ಒದಗಿಸುವ ದೃಷ್ಟಿಯಿಂದಲಾದರೂ ಪ್ರಯಾಣದರ ಏರಿಕೆಯ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯಾದ್ಯಂತ ಪ್ರಯಾಣದರ ಏರಿಕೆ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಎಚ್ಚರಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com