ಆರೋಪಿಗಳ ಸುಳಿವು ನೀಡಿದವರಿಗೆ 2 ಲಕ್ಷ.ರೂ. ಬಹುಮಾನ

ಉಡುಪಿ: ಮಣಿಪಾಲ ವಿದ್ಯಾರ್ಥಿನಿಯ ಲೈಂಗಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಂಡಿದೆ. ಆರೋಪಿಗಳ ಬಗ್ಗೆ ಖಚಿತ ಸುಳಿವು ನೀಡಿದವರಿಗೆ ಪೊಲೀಸ್‌ ಇಲಾಖೆಯ ವತಿಯಿಂದ 2 ಲ.ರೂ. ನೀಡಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್‌ ರೆಡ್ಡಿ ಘೋಷಿಸಿದ್ದಾರೆ.
   ಉಡುಪಿ ಎಸ್‌ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದರು. ಶಂಕಿತ ವ್ಯಕ್ತಿಯ ಚಿತ್ರ ಮತ್ತು ಚಹರೆ ಪ್ರಕಟ ಮಾಡಿದ್ದರಿಂದ ಬಹಳಷ್ಟು ಮಾಹಿತಿಗಳು ಲಭ್ಯವಾಗುತ್ತಲಿದೆ. ಈ ಪ್ರಕರಣ ಭೇದಿಸಲು ಮೊದಲಿಗೆ 8 ಬಳಿಕ ಹೆಚ್ಚುವರಿ 3 ಹೀಗೆ ಒಟ್ಟು 11 ತಂಡ ರಚಿಸಿ ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ. ಈ ನಡುವೆ ನಮಗೆ ಹಲವು ಕಗ್ಗಂಟುಗಳು ಕಾಡುತ್ತಿದೆ. ಘಟನೆಗೆ ಸಂಬಂಧಿತ ಹೇಳಿಕೆಗಳಿಗೆ ಯುವತಿಯ ಹಿಂಜರಿಕೆ ತನಿಖೆಗೆ ಸಮಸ್ಯೆ ತಂದೊಡ್ಡುತ್ತಿದೆ. ಆಕೆ ದೈಹಿಕವಾಗಿ ಚೇತರಿಕೆ ಕಂಡಿದ್ದು, ಮಾನಸಿಕವಾಗಿ ಕುಗ್ಗಿದ್ದಾಳೆ. ಒತ್ತಡದಿಂದ ಯಾವುದೇ ಹೇಳಿಕೆ ಪಡೆಯುವುದಿಲ್ಲ ಎಂದರು.
       ಈವರೆಗೆ ಒಟ್ಟು 47 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಟೋ ಯೂನಿಯನ್‌ ಮತ್ತು ಸಾರ್ವಜನಿಕರೂ ಸಹಕಾರ ನೀಡುತ್ತಿದ್ದಾರೆ. ಕೇವಲ ಆಟೋರಿಕ್ಷಾ ಚಾಲಕರ ವಿಚಾರಣೆ ಮಾಡಲಾಗುತ್ತಿಲ್ಲ. ಬದಲಾಗಿ ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿಚಾರಣೆಯನ್ನೂ ನಡೆಸಲಾಗುತ್ತಿದೆ. 3 ಸಾವಿರ ಆಟೋಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮತ್ತಷ್ಟು ಆಟೋರಿಕ್ಷಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಆರ್‌ಟಿಒ ಅಧಿಕಾರಿಗಳು ಕೂಡ ಸಹಕರಿಸುವಂತೆ ಸೂಚಿಸಲಾಗಿದೆ ಎಂದು ಐಜಿಪಿ ವಿವರಿಸಿದರು.
ಖಾಸಗಿ ಸಿಸಿ ಟಿವಿ ಕೆಮರಾದಲ್ಲಿ ರಿಕ್ಷಾ ಸೆರೆ
     ಇಲಾಖೆಯು ಮಣಿಪಾಲದಲ್ಲಿ ಅಳವಡಿಸಿದ ಸಿಸಿ ಕೆಮರಾದ ವ್ಯಾಪ್ತಿಯಲ್ಲಿ ಶಂಕಿತ ಆಟೋ ಚಲಿಸಿರುವುದು ಪತ್ತೆಯಾಗಿಲ್ಲ. ಬದಲಾಗಿ ವಿವಿ ಕ್ಯಾಂಪಸ್‌ ಹೊರಗಿನ ವ್ಯಾಲಿವ್ಯೂ ಹೊಟೇಲ್‌ ಬಳಿಯ ಇಳಿಜಾರು ರಸ್ತೆ ಮತ್ತು ಇನ್ನೊಂದು ಖಾಸಗಿ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕೆಮರಾಗಳ ವಿಡಿಯೋ ಫ‌ುಟೇಜಿನಲ್ಲಿ ಶಂಕಿತ ಆಟೋರಿಕ್ಷಾ ಚಲಿಸಿರುವುದು ಪತ್ತೆಯಾಗಿದೆ. ಅದರ ಕ್ಲಿಪ್ಪಿಂಗ್‌ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ.
     ಒಟ್ಟು ನಾಲ್ಕು ಕ್ಲಿಪ್ಪಿಂಗ್‌ (ಅಪಹರಿಸಿ ಹೋಗುತ್ತಿರುವ 2 ಕ್ಲಿಪ್ಪಿಂಗ್‌ ಮತ್ತು ಹಿಂದಕ್ಕೆ ಕರೆದುಕೊಂಡು ಬರುತ್ತಿರುವ 2 ಕ್ಲಿಪ್ಪಿಂಗ್‌) ದೊರೆತಿದೆ. ಜೂ. 20ರ ರಾತ್ರಿ ಒಂದು ಕೆಮರಾದಲ್ಲಿ 11.26 ಮತ್ತು ಇನ್ನೊಂದರಲ್ಲಿ 11.35 ಸಮಯ ಪ್ರತ್ಯೇಕವಾಗಿ ದಾಖಲಾಗಿದೆ. ಅದೇ ದಾರಿಯಾಗಿ ಹಿಂತಿರುಗಿ ಬರುವ ಸಮಯ 2.37 ಮತ್ತು 2.51 ದಾಖಲಾಗಿದೆ. ಕೆಮರಾದಲ್ಲಿ ಸಮಯ ಸೆಟ್‌ ಮಾಡಿದಂತೆ ಸಮಯ ತೋರಿಸುವುದರಿಂದ ಸಮಯದಲ್ಲಿ ವ್ಯತ್ಯಯ ಇರಬಹುದು. ಆ ಸಮಯವನ್ನು ಸಾಮಾನ್ಯ ಸಮಯಕ್ಕೆ ತಾಳೆ ಹಾಕಿ ನಿರ್ದಿಷ್ಟ ಸಮಯ ಪತ್ತೆ ಮಾಡಲಾಗುವುದು ಎಂದು ಐಜಿಪಿ ಹೇಳಿದರು.
ಉಡುಪಿ ಎಸ್‌ಪಿ ಡಾ| ಬೋರಲಿಂಗಯ್ಯ ಎಂ.ಬಿ., ಮಂಗಳೂರು ಎಸ್‌ಪಿ ಅಭಿಷೇಕ್‌ ಗೋಯೆಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಸ್ಪಷ್ಟವಾದ ಚಿತ್ರಣ ಇಲ್ಲ

ಪತ್ರಿಕಾಗೋಷ್ಠಿಯಲ್ಲಿ ಸಿಸಿ ಟಿವಿ ಫ‌ುಟೇಜ್‌ಗಳನ್ನು ಮಾಧ್ಯಮಗಳಿಗೆ ಎಲ್‌ಸಿಡಿ ಮೂಲಕ ತೋರಿಸಲಾಯಿತು. ವೀಡಿಯೋ ತುಣುಕಿನಲ್ಲಿ ಕಂಡಂತೆ ರಿಕ್ಷಾ ಬಹಳ ವೇಗವಾಗಿ ಚಲಿಸುತ್ತಿದೆ. ಖಾಸಗಿ ಕೆಮರಾ ಆದ ಕಾರಣ ಗುಣಮಟ್ಟದ ಕೊರತೆ ಹಾಗೂ ರಿಕ್ಷಾ ವೇಗವಾಗಿ ಹೋಗಿರುವ ಕಾರಣ ರಿಕ್ಷಾದ ನಂಬರ್‌ ಇನ್ನಿತರ ಚಹರೆಗಳನ್ನು ಸ್ಪಷ್ಟವಾಗಿ ಪತ್ತೆ ಮಾಡಲು ಅಸಾಧ್ಯವಾಗಿದೆ. ಸಾಮಾನ್ಯವಾಗಿ ನೋಡುವಾಗ ಹೊಸ ರಿಕ್ಷಾದಂತೆ ಕಂಡುಬರುತ್ತಿದೆ. ಆಕೆಯನ್ನು ಕರೆದೊಯ್ಯುವ ಸಂದರ್ಭ ರಿಕ್ಷಾದ ಮುಂಭಾಗದಲ್ಲಿ ಬೈಕೊಂದು ಚಲಿಸುತ್ತಿರುವುದು, ರಸ್ತೆ ಪಕ್ಕದಲ್ಲಿ ಜನ ನಡೆದುಕೊಂಡು ಹೋಗುವುತ್ತಿರುವುದು ಕಂಡುಬಂದಿದೆ. ಆ ಬೈಕಿನಲ್ಲಿ ಹೋಗುತ್ತಿರುವವರು ಕೂಡ ಆರೋಪಿಗಳೆ? ಬೈಕು ಯಾರಿಗೆ ಸೇರಿದ್ದು? ಅಥವಾ ಈ ಘಟನೆಗೆ ಬೈಕಿಗೆ ಏನೂ ಸಂಬಂಧವೇ ಇಲ್ಲವೆ? ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಐಜಿಪಿ ಅವರು ಪ್ರತ್ಯುತ್ತರಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣನೆಗೆ ತೆಗೆದುಕೊಂಡು ತನಿಖೆ ನಡೆಯುತ್ತಿದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com