ಮರವಂತೆಯಲ್ಲಿ ಹೆಚ್ಚಿದ ಸಮುದ್ರದ ಆರ್ಭಟ, ಸ್ಥಳಕ್ಕೆ ಶಾಸಕರ ಭೇಟಿ

ಬೈಂದೂರು: ಮರವಂತೆಯಲ್ಲಿ ಕಡಲು ಬಿರುಸುಗೊಂಡಿದ್ದು, ಕಡಲ್ಕೊರೆತದ ಲಕ್ಷಣ ಕಂಡುಬಂದ ಸ್ಥಳಕ್ಕೆ ಶಾಸಕ ಕೆ. ಗೋಪಾಲ ಪೂಜಾರಿ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
     ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದ ಸ್ಥಳೀಯ ಮೀನುಗಾರ ಮುಖಂಡರು ಎರಡು ವರ್ಷಗಳ ಹಿಂದೆ ಇಲ್ಲಿ ತೀವ್ರ ಸ್ವರೂಪದ ಕಡಲ್ಕೊರೆತ ಸಂಭವಿಸಿತ್ತು. ಆಗ ಸುಮಾರು 200 ಮೀಟರು ಉದ್ದಕ್ಕೆ ಕಲ್ಲುಗಳನ್ನು ಹಾಕಿ ತೀರಕ್ಕೆ ರಕ್ಷಣೆ ಒದಗಿಸಲಾಗಿತ್ತು. ಈಗ ಆ ಸ್ಥಳದ ಉತ್ತರ ದಿಕ್ಕಿನಲ್ಲಿ ನೂತನ ಮೀನುಗಾರಿಕಾ ಬಂದರು ಕಾಮಗಾರಿ ನಿವೇಶನದ ವರೆಗಿನ 100 ಮೀಟರು ಉದ್ದದ ಪ್ರದೇಶ ತೀವ್ರ ಸ್ವರೂಪದ ಉಬ್ಬರದ ಅಲೆಗಳಿಂದ ಕೊರೆತಕ್ಕೊಳಗಾಗುವ ಸಾಧ್ಯತೆ ಇದೆ. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಅಲೆಗಳು ಸಮೀಪದ ರಸ್ತೆಯ ತನಕವೂ ಸಾಗಿ, ಅಲ್ಲಿನ ಮೀನುಗಾರರ ವಿಶ್ರಾಂತಿ ಕುಠೀರಗಳಿಗೆ ಅಪ್ಪಳಿಸಿದ್ದುವು. ಶನಿವಾರ ಸಮುದ್ರದ ಭರತದ ವೇಳೆ ಗಾಳಿ ಬೀಸಿ ಸಮುದ್ರ ಪ್ರಕ್ಷುಬ್ಧವಾದರೆ ಅಪಾಯ ಸಂಭವಿಸುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ 100 ಮೀಟರು ಉದ್ದಕ್ಕೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.
     ಶಾಸಕರು ಕಡಲ ಭರತದ ವೇಳೆ ಅಧಿಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯವೆನಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್‌, ರಾಜು ಪೂಜಾರಿ, ರಾಮ ಶೇರೆಗಾರ್‌, ಪ್ರಮುಖರಾದ ಬಿ. ರಘುರಾಮ ಶೆಟ್ಟಿ, ಸುಬ್ರಾಯ ಶೇರೆಗಾರ್‌, ಎಂ. ವಿನಾಯಕ ರಾವ್‌, ಪುಟ್ಟಯ್ಯ ಪೂಜಾರಿ, ರಾಮಕೃಷ್ಣ ಖಾರ್ವಿ, ಚಂದ್ರ ಖಾರ್ವಿ ಮತ್ತಿತರರು ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com