ಮಂಗಳೂರು-ಉಡುಪಿ-ಕುಂದಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಓಡಿಸಲು ಆಗ್ರಹ

ಉಡುಪಿ: ಖಾಸಗಿ ಬಸ್ಸಿನವರಿಗೆ ಏನೇ ತೊಂದರೆಯಾದರೂ ಅದರ ಪ್ರತಿಫಲವನ್ನು ಸಾರ್ವಜನಿಕರು ಅನುಭವಿಸಬೇಕಾಗಿದೆ. ಹಾಗಾಗಿ ಖಾಸಗಿ ಬಸ್ಸುಗಳ ಬದಲು ಮಂಗಳೂರು, ಉಡುಪಿ, ಕುಂದಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಓಡಿಸಿ, ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಿ ಎಂಬ ಸಾರ್ವಜನಿಕರ ಆಗ್ರಹ ಹೆಚ್ಚುತ್ತಿದೆ. 
      ಬಸ್ ಚಾಲಕನಿಗೆ ಹಲ್ಲೆ ನಡೆಸಿದರೆಂಬ ಕಾರಣಕ್ಕೆ ಸೋಮವಾರ ಎಲ್ಲ ಸರ್ವಿಸ್ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟಿಸಿದ್ದರಿಂದ ಮಧ್ಯಾಹ್ನದ ವರೆಗೆ ಉಡುಪಿಯಿಂದ ಮಂಗಳೂರು, ಕಾರ್ಕಳ, ಕುಂದಾಪುರ ಕಡೆಗೆ ತೆರಳುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರು ಕ್ಷರಶಃ ಪೇಚಾಡಬೇಕಾಯಿತು. ಆದರೆ ಕೆಎಸ್‌ಆರ್‌ಟಿಸಿಯವರು ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿ ಹೆಚ್ಚುವರಿ ಬಸ್‌ಗಳನ್ನು ಈ ಮಾರ್ಗಗಳಲ್ಲಿ ಓಡಿಸಿದ್ದರಿಂದ ದೊಡ್ಡ ಮಟ್ಟದ ತಾಪತ್ರಯಗಳಿಂದ ಪ್ರಯಾಣಿಕರು ಪಾರಾದರು. ಕೆಎಸ್‌ಆರ್‌ಟಿಸಿ ಬಸ್‌ಗಳು ತುಂಬಿ ತುಳುಕುತ್ತಿದ್ದವು. 

ದಿಢೀರ್ ಪ್ರತಿಭಟನೆ ಅಸ್ತ್ರ ತೆರವಲ್ಲ: 
   ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು ತಪ್ಪು. ಕೂಡಲೇ ಎಲ್ಲ ಸರ್ವಿಸ್ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ತೊಡಗಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದು ಕೂಡಾ ತಪ್ಪು ಎಂಬುದು ಸಾರ್ವಜನಿಕ ವಲಯದ ಆಕ್ಷೇಪವಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ನಡೆಸಬೇಕು. ಕಾನೂನು ಮಾರ್ಗ ಅನುಸರಿಸಿದರೂ ಪರಿಣಾಮ ಶೂನ್ಯವಾದಾಗ ಸಾರ್ವಜನಿಕರಿಗೆ ತಿಳಿಸಿಯೇ ಪ್ರತಿಭಟನೆ ಹಮ್ಮಿಕೊಂಡು ಬಸ್ ಸಂಚಾರ ಸ್ಥಗಿತಗೊಳಿಸಬೇಕು. ಆಗ ಸಾರ್ವಜನಿಕರೂ ಎಚ್ಚರ ವಹಿಸುತ್ತಾರೆ. ಪ್ರತಿಭಟನೆಯ ಸಮಯದ ಬಗ್ಗೆ ಅರಿವಿರುವುದರಿಂದ ಅದಕ್ಕೆ ತಕ್ಕಂತೆ ತಮ್ಮ ಕಾರ್ಯಕ್ರಮಗಳನ್ನು ಹೊಂದಿಸಿಕೊಳ್ಳುತ್ತಾರೆ. ಪರ್ಯಾಯ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತಾರೆ. ಅಂದು ನಿಗದಿಪಡಿಸಿದ ಕಾರ್ಯಕ್ರಮಗಳ ಈಡೇರಿಕೆ ಅಥವಾ ಬದಲಾವಣೆ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬರುವುದು ಸಾಧ್ಯವಾಗುತ್ತದೆ. ಆದರೆ ದಿಢೀರ್ ಪ್ರತಿಭಟನೆ ಮಾಡಿದರೆ ಪ್ರಯಾಣಿಕರಾದರೂ ಏನು ಮಾಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಪ್ರಶ್ನೆಯಾಗಿದೆ. 

ಕೆಎಸ್‌ಆರ್‌ಟಿಸಿ ಬರಲಿ 
     ಸರ್ವಿಸ್ ಬಸ್‌ನವರು ಯಾವುದೇ ಸೂಚನೆ ನೀಡದೆ ಬಸ್ ಸಂಚಾರ ಸ್ಥಗಿತಗೊಳಿಸುವುದು ಆಗಾಗ ನಡೆಯುತ್ತಿರುತ್ತದೆ. ಆರು ತಿಂಗಳ ಹಿಂದೆ ರಾಂಗ್‌ರೂಟಲ್ಲಿ ಬಸ್ ಬಂತು ಎಂಬ ಕಾರಣಕ್ಕೆ ಆರ್‌ಟಿಒ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಾಗಲೂ ಈ ರೀತಿ ದೀಢೀರ್ ಪ್ರತಿಭಟನೆ ನಡೆದಿತ್ತು. ನ್ಯಾಯ ಕೇಳುವ ವ್ಯವಧಾನ ಇಲ್ಲದ, ಅತಿ ವೇಗಕ್ಕೆ ಕಡಿವಾಣ ಹಾಕದ ಖಾಸಗಿ ಬಸ್‌ಗಳ ಬದಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಈ ಮಾರ್ಗಗಳಲ್ಲಿ ಇಳಿಸಲು ಅನುಮತಿ ನೀಡುವುದೊಂದೇ ಇಂಥ ಸಮಸ್ಯೆಗಳ ನಿಯಂತ್ರಣಕ್ಕಿರುವ ಪರಿಹಾರವಾಗಿದೆ. ಆದರೆ ಖಾಸಗಿ ಲಾಬಿ ಮುಂದೆ ಸಾರ್ವಜನಿಕರ ಹಿತಾಸಕ್ತಿಗೆ ಕವಡೆ ಕಾಸಿನ ಕಿಮ್ಮತ್ತು ದೊರೆಯುತ್ತಿಲ್ಲ. 
ವರದಿ: ಬಾಲಕೃಷ್ಣ ಶಿಬಾರ್ಲ ಉಡುಪಿ 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com