ರಾ. ಗಾ ಗ್ರಾಮೀಣ ವಿದ್ಯುತ್ ಯೋಜನೆ; ಅನುಷ್ಠಾನ ಪೂರ್ವ ಪರೀಶಿಲನೆ

ಬೈಂದೂರು: ಕೇಂದ್ರ ಸರ್ಕಾರದ ರಾಜೀವ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆಯ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪರಿಶೀಲನೆ ಹಾಗೂ ಮಾಹಿತಿಯ ವಿಚಾರ ವಿನಿಮಯ ಗುರುವಾರ ಶಾಸಕರ ಕಛೇರಿಯಲ್ಲಿ ಜರುಗಿತು. 
       ಕ್ಷೇತ್ರ ಶಾಸಕ ಕೆ. ಗೋಪಾಲ ಪೂಜಾರಿ, ಮೆಸ್ಕಾಂ ಅಧಿಕಾರಿಗಳು ಮತ್ತು ಪ್ರತಿ ಗ್ರಾಮದ ಪ್ರಮುಖರು ಸೇರಿ ಈ ಯೋಜನೆ ಬಗ್ಗೆ ಚರ್ಚಿಸಿದರು. ಈಗಾಗಲೇ ಬಿಪಿ‌ಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಮಂಜೂರಾತಿಯಾಗಿದ್ದು, ಇದರಲ್ಲಿ ತಪ್ಪಿದವರಿಗೆ ಹಾಗೂ ಹೊಸ ಬಿಪಿ‌ಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅಲ್ಲದೇ ಹೊಸ ಬಿಪಿ‌ಎಲ್ ಕಾರ್ಡ್‌ಗೆ ಅರ್ಜಿ ಸ್ವೀಕರಿಸುವಂತೆ ಆಯಾಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
    ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಸಿ ಮಹಾದೇವಪ್ಪ ಮಾತನಾಡಿ, ಉಡುಪಿ ಜಿಲ್ಲೆಗೆ ಈ ಯೋಜನೆಯಿಂದ 28ಕೋಟಿ ರೂ. ಮಂಜೂರಾತಿ ಸಿಕ್ಕಿದ್ದು ಟೆಂಡರ್ ಕೂಡ ಕರೆಯಲಾಗಿದೆ. ಕುಂದಾಪುರ ತಾಲೂಕಿನ 96 ಗ್ರಾಮಕ್ಕೆ 12ಕೋಟಿ ರೂ. ಅನುದಾನ ಮಂಜೂರಾತಿ ಸಿಕ್ಕಿದ್ದು ಈಗಾಗಲೇ ಬಿಪಿ‌ಎಲ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕೆಲಸ ಪ್ರಾರಂಭವಾಗಿದೆ ಎಂದರು. 
      ಹಳ್ಳಿಬೇರು, ಬಸ್ರಿಬೇರು, ತಾರೆಕೊಡ್ಲು, ಬಾವಡಿ, ಹರ, ಚಾರ್‍ಸಾಲು ಮುಂತಾದ ಉಪಗ್ರಾಮಗಳು ಸುರಕ್ಷಿತ ಅರಣ್ಯ ಪ್ರದೇಶವಾದ್ದರಿಂದ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಅಲ್ಲದೇ ಅಲ್ಲಿನ ಜನರು ಒಪ್ಪಿದಲ್ಲಿ ಸೋಲಾರ್ ಲೈಟ್ ವ್ಯವಸ್ಥೆ ಮಾಡಬಹುದಿತ್ತು. ಆದರೆ ಈ ಹಿಂದೆ ದೊಡ್ಡಹರ, ಮನ್ಮನ್ಹರ ಪ್ರದೇಶಗಳಿಗೆ 11ಲಕ್ಷ ರೂಪಾಯಿ ಸೋಲಾರ್ ಲೈಟ್ ವ್ಯವಸ್ಥೆ ಮಂಜೂರಾಗಿದ್ದು ಅಲ್ಲಿನ ಜನ ಒಪ್ಪದಿರುವುದರಿಂದ ಅಳವಡಿಕೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ತಂದ ಉಪಕರಣಗಳನ್ನು ವಾಪಾಸು ತರಲಾಗಿದೆ ಎಂದು ಹೇಳಿದರು. 
    ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿದ್ದೇಶ್, ಬೈಂದೂರು ಶಾಖಾಧಿಕಾರಿ ರಾಘವೇಂದ್ರ, ಕೊಲ್ಲೂರು ಶಾಖಾಧಿಕಾರಿ ಸುದರ್ಶನ್, ತಾ. ಪಂ. ಸದಸ್ಯರಾದ ಕೆ. ರಮೇಶ ಗಾಣಿಗ, ಎಸ್. ರಾಜು ಪೂಜಾರಿ, ಮತ್ತು ಎಸ್. ರಾಮ ಶೇರುಗಾರ್, ವಾಸುದೇವ ಯಡಿಯಾಳ, ಮದನ್‌ಕುಮಾರ್, ರಿಯಾಜ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com