ಸುಸಜ್ಜಿತ ಆಸ್ಪತ್ರೆಯಿದ್ದರೂ ಬೈಂದೂರಿನಲ್ಲಿ ವೈದ್ಯರ ಕೊರತೆ

ಬೈಂದೂರು: ತಾಲೂಕು ಕೇಂದ್ರವಾಗಿರುವ ಬೈಂದೂರಿನಲ್ಲಿ ಸುಸಜ್ಜಿತ ಆಸ್ಪತ್ರೆಯಿದೆ ಸೂಕ್ತ ಸೌಲಭ್ಯಗಳಿವೆ. ಆದರೆ ನುರಿತ ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರಿಂದ ದೂರಾಗುತ್ತಿದೆ. ಇದು ಸರಕಾರಿ ಆಸ್ಪತ್ರೆಗಳಿಗೆ ಅಂಟಿದ ಶಾಪವೋ, ಅಥವಾ ಇಲಾಖೆಯ ಚಿಂತನೆಯ ಕೊರತೆಯೋ, ಒಟ್ಟಾರೆ ಸರಕಾರಿ ಆಸ್ಪತ್ರೆಗಳು ಕೇವಲ ಕಡತಗಳಲ್ಲಿ ಮಾತ್ರ ಪ್ರಗತಿ ಬಿಂಬಿತವಾಗುತ್ತಿದೆ ವಿನಃ ಕರ್ತವ್ಯದಲ್ಲಿ ದಾಖಲಾಗುತ್ತಿಲ್ಲ.
      ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿರುವ ಬೈಂದೂರಿನ ಸುತ್ತಮುತ್ತ ಹತ್ತಾರು ಹಳ್ಳಿಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. 2011ರಲ್ಲಿ 1ಕೋಟಿ ಅನುದಾನದ ಸುಸಜ್ಜಿತ ಕಟ್ಟಡ ನಿರ್ಮಾಣವಾಗುವ ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡಿತ್ತು. ಆದರೆ ಇಂದು ಆಸ್ಪತ್ರೆ ಕೇವಲ ಕಟ್ಟಡಗಳನ್ನು ಕಂಡು ತೃಪ್ತಿ ಪಡಬೇಕೆ ಹೊರತು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ.

ನನಸಾಗದ ಕನಸು:  ರಕ್ತ ಪರೀಕ್ಷಾ ವಿಭಾಗ, ಟಿ.ಬಿ. ಪರೀಕ್ಷೆ, ಏಚ್‌,ಐ.ಬಿ. ಪರೀಕ್ಷೆ , ಎಕ್ಸರೇ, ಶಸ್ತ್ರ ಚಿಕಿತ್ಸಾ ಕೇಂದ್ರ, ವಿಶಾಲ ಕೊಠಡಿ, ಹೊರ ರೋಗಿ ವಿಭಾಗ, ಸುಸಜ್ಜಿತ ಔಷಧಾಲಯ , ಶವಗಾರ ಸೇರಿದಂತೆ ಪೂರ್ಣ ಸವಲತ್ತುಗಳು ಹೊಂದಿದೆ. ಆದರೆ ಇಷ್ಟು ವಿಶಾಲವಾದ ಆಸ್ಪತ್ರೆಯಲ್ಲಿ ಕೇವಲ ಒಬ್ಬ ಮಹಿಳಾ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸಬೇಕಾಗಿದೆ. ಹೀಗಾಗಿ ಹೆರಿಗೆ, ಮುಂತಾದ ಅಗತ್ಯ ಸಂಧರ್ಭದಲ್ಲಿ 40 ಕಿ.ಮೀ ದೂರದ ಕುಂದಾಪುರ ಆಸ್ಪತ್ರೆಗೆ ತೆರಳಬೇಕಾಗಿರುವುದರಿಂದ ಸುಸಜ್ಜಿತ ಆಸ್ಪತ್ರೆಯಿದ್ದರು ಸಹ ಸೌಲಭ್ಯ ದೊರೆಯದಂತಾಗಿದೆ.

ಬಹುತೇಕವಾಗಿ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದೆ. ಇದು ಬೈಂದೂರಿಗೂ ಹೊರತಾಗಿಲ್ಲ. ಇಲ್ಲಿನ ವೈದ್ಯಾಧಿಕಾರಿ ಲತಾ ನಾಯಕ್‌ ಹೇಳುವ ಪ್ರಕಾರ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸವಲತ್ತುಗಳಿವೆ. ಆದರೆ ನುರಿತ ವೈದ್ಯರ ಕೊರತೆಯಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಪ್ರತಿದಿನ 150 ರಿಂದ 200 ಹೊರ ರೋಗಿಗಳನ್ನು ಪರೀಕ್ಷಿಸಬೇಕು. ಇನ್ನುಳಿದಂತೆ ಅಂಗನವಾಡಿ ಬೇಟಿ, ಅತೀ ಕಡಿಮೆ ತೂಕದ ಮಕ್ಕಳ ಪರೀಕ್ಷೆ, ಮಲೇರಿಯಾ ಕಾರ್ಯಕ್ರಮ, ಮರಣೋತ್ತರ ಪರೀಕ್ಷೆ, ಉಪಕೇಂದ್ರ ಬೇಟಿ, ಮತ್ತು ಸಭೆ ಸಮಾರಂಭಗಳಿಗೆ ಬೇಟಿ ಸೇರಿದಂತೆ ಇಲಾಖೆಯ ಜವಬ್ದಾರಿಗಲನ್ನು ಓರ್ವ ಆಧಿಕಾರಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುತ್ತಾರೆ.

ಅಂಬುಲೆನ್ಸ್‌ ಸೇವೆ ಇಲ್ಲಾ: ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಹೆರಿಗೆ ವಾರ್ಡ್‌ ಹೊಂದಿದೆ ತಿಂಗಳಿಗೆ ನಾಲೈದು ಹೆರಿಗೆ, 260ಕ್ಕೂ ಅಧಿಕ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆರಿಗೆ ಸಂಧರ್ಭದಲ್ಲಿ ವೈದ್ಯಾಧಿಕಾರಿಗಳು ಹೆಚ್ಚುವರಿ ಜವಬ್ದಾರಿ ತೆಗೆದುಕೊಂಡಾಗ ಆಕಸ್ಮಿಕ ಅಪಾಯ ಸಂಭವಿಸಿದರೆ ತಕ್ಷಣ ಕುಂದಾಪುರಕ್ಕೆ ಕೊಂಡೊಯಲು ಸುಸಜ್ಜಿತವಾದ ಅಂಬುಲೈನ್ಸ್‌ ಸೇವೆ ಇಲ್ಲವಾಗಿದೆ. ಹೀಗಾಗಿ ವೈದ್ಯರು ಅಡಕತ್ತರಿಯಲ್ಲಿ ಸಿಕ್ಕಿದ ಪರಿಸ್ಥಿತಿಯಾಗಿದೆ. ಉತ್ತಮ ವ್ಯವಸ್ಥೆಗಳಿದ್ದರು ಸಹ ವೈದ್ಯರ ಕೊರತೆಯಿಂದ ಬಡವಾಗಿರುವ ಬಗ್ಗೆ ಇಲಾಖೆ ಗಮನ ಹರಿಸಬೇಕು ಎನ್ನುವುದು ಸ್ಥಳೀಯರಾದ ಗಣೇಶ ಪೂಜಾರಿಯವರ ಅಭಿಪ್ರಾಯವಾಗಿದೆ.
    ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಯಿಸಿದ ಶಾಸಕ ಕೆ.ಗೋಪಾಲ ಪೂಜಾರಿ ಬೈಂದೂರು ಸರಕಾರಿ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಮೇಲ್ದರ್ಜೆಗೇರಿದೆ .ಇಲ್ಲಿ ವೈದ್ಯರ ಕೊರತೆಯಿರುವ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇನೆ ಎಂದಿದ್ದಾರೆ.
      ಒಟ್ಟಾರೆಯಾಗಿ ಹತ್ತಾರು ಗ್ರಾಮೀಣ ಭಾಗಗಳು ಹೊಂದಿರುವ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ವೈದ್ಯರ ನೇಮಕಕ್ಕೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಾಗಿದೆ.
-ಅರುಣ ಕುಮಾರ್‌,ಶಿರೂರು 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com