ತಾಲೂಕಿನಾದ್ಯಂತ ಮುಂದುವರಿದ ಭಾರಿ ಮಳೆ, ಹಲವೆಡೆ ನೆರೆ

ಕುಂದಾಪುರ: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಬಿರುಸುಗೊಂಡ ಪರಿಣಾಮ ಪಂಚಮಹಾನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳು ನೆರೆಭೀತಿಯನ್ನು ಎದುರಿಸುತ್ತಿದೆ.
   ತಾಲೂಕಿನ ವಾರಾಹಿ ಕುಬ್ಜಾ, ಚಕ್ರಾ, ಸೌಪರ್ಣಿಕಾ, ಕೀಟಕಿ ನದಿಗಳು ತುಂಬಿಹರಿಯುತ್ತಿದ್ದು ನದಿ ತಟದಲ್ಲಿರುವ ಕೊಲ್ಲೂರು, ನಾಡ, ಸೇನಾಪುರ, ಬಡಾಕೆರೆ, ತೊಪ್ಲು, ಸಾಲ್ಬುಡ, ಹೇರೂರು, ತ್ರಾಸಿ, ಹೊಸಾಡು, ನಾವುಂದ, ಮರವಂತೆ, ಕಂಡೂರು, ಕಾವ್ರಾಡಿ, ಹೊಳೆ ಶಂಕರನಾರಾಯಣ ಮೊದಲಾದೆಡೆ ನೆರೆಭೀತಿ ಎದುರಾಗಿದೆ.

ಸುರಕ್ಷಿತ ಸ್ಥಳಕ್ಕೆ
      ನಾವುಂದ ಸಾಲ್ಬುಡ - ತೊಪ್ಲು ಪರಿಸರದಲ್ಲಿ ನೆರೆ ನೀರು ಕೃಷಿಭೂಮಿಗೆ ನುಗ್ಗಿದೆ. ನಾಡ ಪಡುಕೋಣೆ ಕುರು ದ್ವೀಪ ಜಲಾವೃತಗೊಂಡಿದೆ. ಅರೆಹೊಳೆ ಬಳಿಯ ರೈಲ್ವೇ ಸೇತುವೆಯ ಬಳಿ ಕೆಲವು ಮನೆಗಳಿಗೆ ನೀರು ನುಗಿದ್ದು ಅಪಾಯದಂಚಿನಲ್ಲಿದೆ. ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ದೋಣಿಯ ಮೂಲಕ ಸಾಗಿಸುವ ಕಾರ್ಯ ನಡೆದಿದೆ. ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಓಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರು.
         ಸೌಪರ್ಣಿಕಾ ನದಿ ತಟದ ಕೃಷಿ ತೋಟ, ಭತ್ತದ ಗದ್ದೆ, ತೆಂಗಿನ ಮರಗಳು ಜಲಾವೃತಗೊಂಡಿದೆ. ಹೇರೂರು ಗ್ರಾಮದ ಕೆಲಾ ಬೈಲು ಬಚ್ಚ ಪೂಜಾರಿ, ಚಿತ್ತಾಡಿ ರಾಧಾ ಮೊಗವೀರ, ಮರ್ಲಿ ಮೊಗವೀರ, ಸುಶೀಲಾ ದೇವಾಡಿಗ, ಕೆಳಾಹಿತ್ಲು ಕೃಷ್ಣ, ಶೀನ ಅವರ ಮನೆಗಳಿಗೆ ನೆರೆ ನೀರು ನುಗ್ಗಿ ಹಾನಿ ಉಂಟಾಗಿದೆ. ಈ ಭಾಗದ ಜನರನ್ನು, ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮರ ಬಿದ್ದು ಹಾನಿ
     ಮರವಂತೆಯ ಅಂಚೆಕಟ್ಟೆ ಬಳಿ ಬೃಹತ್‌ ಗಾಳಿ ಮರವೊಂದು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಮೇಲೆ ಉರುಳಿ ಬಿದ್ದ ಪರಿಣಾಮ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ. ಪರಿಸರದಲ್ಲಿ ವಿದ್ಯುತ್‌ ಕಡಿತ ಉಂಟಾಯಿತು. ಸ್ಥಳಕ್ಕೆ ಮೆಸ್ಕಾಂ ಶಾಖಾಧಿಕಾರಿ ರಾಘವೇಂದ್ರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಸಿದ್ಧೇಶ್‌ ಆಗಮಿಸಿ ಪರಿಶೀಲನೆ ನಡೆಸಿದರು.
        ವಕ್ವಾಡಿ ಗ್ರಾಮದ ಸಣ್ಣಮ್ಮ ಕುಲಾಲ್ತಿ ಅವರ ಮನೆ ಮರ ಬಿದ್ದು ಹಾನಿಯಾಗಿದೆ. ಗುಜ್ಜಾಡಿ ಗ್ರಾಮದಲ್ಲಿ ಪದ್ದು ಪೂಜಾರಿ ಅವರ ಮನೆ ಕುಸಿದು ಹಾನಿ ಸಂಭವಿಸಿದೆ. ಶೇಡಿಮನೆ ಗ್ರಾಮದ ರೇವತಿ ಹಾಗೂ ಬೋಳ ಹಾಂಡ ಹಾಗೂ ಗುಜ್ಜಾಡಿ ಗ್ರಾಮದ ಕಾವೇರಿ ದೇವಾಡಿಗ ಅವರ ಕೃಷಿ ತೋಟಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
   
   ಸಿದ್ದಾಪುರ ಪರಿಸರದ ಹಳ್ಳಿಹೊಳೆ, ಅಮಾಸೆಬೈಲು. ಯಡಮೊಗೆ, ಹೊಸಂಗಡಿ, ಆಜ್ರಿ, ಕೊಡ್ಲಾಡಿಯ ಕೊಡ್ಗಿ ಮತ್ತು ಮಡಾಮಕ್ಕಿ ಪರಿಸರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
      ಶೇಡಿಮನೆ ಗ್ರಾಮದ ರೇವತಿ ಕಾಸ್ತ ಅವರ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗೆ ನೀರಿ ನುಗ್ಗಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಶೇಡಿಮನೆ ಗ್ರಾಮದ ಬೊಮ್ಮ ಹಾಂಡ ಅವರ ರೈಸ್‌ ಮಿಲ್‌ ಹಾಗೂ ಮನೆಗೆ ನೀರು ನುಗ್ಗಿದರಿಂದ ಮನೆ ಬೀಳುವ ಹಂತದಲ್ಲಿದೆ. ಆರ್ಡಿ,  ಗೋಳಿಯಂಗಡಿ, ತೊಂಬಟ್ಟು ಭಾಗಗಳಲ್ಲಿ ಮಂಗಳವಾರ ರಾತ್ರಿಯಿಂದ ವಿದ್ಯುತ್‌ ಅಸ್ತವ್ಯಸ್ತಗೊಂಡಿದ್ದು ಸ್ಥಿರ ಮತ್ತು ಸಂಚಾರಿ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಶೇಡಿಮನೆ ಹಾಗೂ ಕಲ್ಲಟಮನೆ ಸಂಪರ್ಕಿಸುವ ರಸ್ತೆಯು ದಾಸನಹೊಳೆ ಹತ್ತಿರ ರಸ್ತೆ ಕೊಚ್ಚಿಹೋಗಿ ನಾಗರಿಕರು ಪಂಪರ್ಕ ಕಡಿತಕೊಳ್ಳಗಾಗಿದ್ದಾರೆ.
     ಕುಬ್ಜಾ ನದಿ, ಶೇಡಿಮನೆಯ ಕುಂಟುಹೊಳೆ, ಮಡಾಮಕ್ಕಿ ಮುಂಡೊಳ್ಳಿ ನದಿಯು ತುಂಬಿ ಹರಿಯುತ್ತಿದೆ. ಶೇಡಿಮನೆ ಆರ್ಡಿ ಸಂಪರ್ಕ ರಸ್ತೆ ಸಂಚಾರ ಕಡಿತಗೊಂಡಿದ್ದು ಬುಧವಾರ ಸಂಜೆ ವೇಳೆ ಪುನಃ ಪ್ರಾರಂಭಗೊಂಡಿದೆ.
   ಮುಂಡೊಳ್ಳಿ ನದಿ ಉಕ್ಕಿ ಹರಿಯುತ್ತಿದ್ದರಿಂದ ಮಂಡೊಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಿದ್ದಾಪುರ ಹೆಬ್ರಿ ವಾಹನ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿದೆ. ಆವರ್ಸೆ ಬಳಿಯ ಸೀತಾನದಿ ತುಂಬಿ ಹರಿಯುತ್ತಿದ್ದು ಮಂದಾರ್ತಿ, ಗೊಳಿಯಂಗಡಿ ರಾಜ್ಯ ಹೆದ್ದಾರಿ ಅಪಾಯಕಾರಿಯಾಗಿದ್ದು ಸಂಚಾರ ಕಡಿತಗೊಳ್ಳುವ ಬೀತಿ ಎದುರಾಗಿದೆ.
     ಮಚ್ಚಟ್ಟು, ತೊಂಬಟ್ಟು, ಹಾಲಾಡಿ, ಸಿದ್ದಾಪುರ, ಶಂಕರನಾರಾಯಣ ಮತ್ತು ಉಳ್ಳೂರು ಸಮೀಪದಲ್ಲಿ ವಾರಾಹಿ ಎಡದಂಡೆ ಮತ್ತು ಬಲದಂಡೆ ಕಾಲುವೆ ಅಸಮರ್ಪಕ ಕಾಮಗಾರಿಯಿಂದ ಕೃಷಿ ಕ್ಷೇತ್ರಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ವಾರಾಹಿ ನದಿ ಪಾತ್ರಗಳಲ್ಲಿ ವಾಸಿಸುವ ಜನತೆ ಭಯದ ನಡುವೆ ಬದುಕುಂತಾಗಿದೆ.

 ಸಂಪರ್ಕ ಕಡಿತದಿಂದ ಕಂಗಾಲಾದ ಸಾರ್ಕಲ್‌ ಜನತೆ
      ನಿರಂತರ ಮಳೆಗೆ ಸಾರ್ಕಲ್‌ ದ್ವೀಪ ತತ್ತರಿಸಿದೆ. ಇದ್ದ ಒಂದೇ ಒಂದು ಸಂಪರ್ಕ ಸೇತುವೆ ಕಡಿದು ಹೋಗಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಸಾರ್ಕಲ್‌ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
      ಸುಮಾರು 300 ಎಕ್ರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಅಡಿಕೆ, ತೆಂಗಿನ ತೋಟಗಳು ನೀರಿನಲ್ಲಿ ಮುಳುಗಿವೆ. ಶಾಲಾ ವಿದ್ಯಾರ್ಥಿಗಳು ಸುತ್ತುಬಳಸಿ ನಡೆದುಕೊಂಡು ಹೋಗಲೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ ದೊರಕಿ ಆರು ದಶಕಗಳು ಸಂದರೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಕಾವ್ರಾಡಿ ಗ್ರಾ. ಪಂ. ವ್ಯಾಪ್ತಿಯ ಸಾರ್ಕಲ್‌ ದ್ವೀಪದ ಜನತೆ ಪಟ್ಟಣದ ಸಂಪರ್ಕ ಕಡಿದುಕೊಂಡಿರುವುದಲ್ಲದೇ ನೆರೆಯ ಭೀತಿ ಎದುರಿಸುತ್ತಿದ್ದಾರೆ. ತಾಲೂಕು ಕೇಂದ್ರದಿಂದ 8 ಕಿ.ಮೀ ದೂರದಲ್ಲಿರುವ ಸಾರ್ಕಲ್‌ ನಾಗರೀಕರು ಸೌಕೂರು ದೇವಸ್ಥಾನದ ಎದುರು ರಸ್ತೆಯಲ್ಲಿ ಮೂಲಕ ಕೇವಲ ಹತ್ತು ನಿಮಿಸಷಗಳ ದಾರಿಯಲ್ಲಿ ಬರಬೇಕಾದ ಸಾರ್ಕಲ್‌ ಜನರಿಗೆ ಈಗ 30 ಕಿ.ಮೀ ಕ್ರಮಿಸಿ ಪೇಟೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
     ಪ್ರತೀ ವರ್ಷದ ಮಳೆಗಾಲದಲ್ಲಿಯೂ ಸಾರ್ಕಲ್‌ ನಾಗರಿಕರಿಗೆ ಇದೊಂದು ದುಸ್ವಪ್ನವಾಗಿದೆ. ಮಳೆಗಾಲದಲ್ಲಿ ಸಂಪರ್ಕಕ್ಕಾಗಿ ಸ್ಥಳೀಯ ಗ್ರಾಮಸ್ಥರೇ ನಿರ್ಮಿಸಿಕೊಂಡ ಸೇತುವೆಯೂ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ಎರಡು ದಿನಗಳಿಂದ ನೆರೆಯ ಮಟ್ಟ ಏರುತ್ತಿದೆ. ಬುಧವಾರ ಸಂಜೆಯ ಹೊತ್ತಿಗೆ ಸಾರ್ಕಲ್‌ ಪ್ರದೇಶ ಶೆ.75ರಷ್ಟು ಮುಳುಗಡೆ ಕಂಡಿದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಮತ್ತಷ್ಟು ನೆರೆ ಹಾವಳಿ ಸಾಧ್ಯವಿದ್ದು ಮನೆಯವರೆಲ್ಲರೂ ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ.

ಕೊಲ್ಲೂರು ಸುತ್ತಲಿನ ಜಡ್ಕಲ್‌, ಮುದೂರು, ವಂಡ್ಸೆ ಪರಿಸರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೃಷಿಭೂಮಿ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
    ಕೊಲ್ಲೂರು ದಳಿ ಎಂಬಲ್ಲಿ ವಾಸುದೇವ ನಾಯ್ಕ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೊಸದಾಗಿ ಡಾಮರೀಕರಣಗೊಂಡ ಮುದೂರು - ಜಡ್ಕಲ್‌ ರಸ್ತೆ ಭಾರಿ ಮಳೆಗೆ ಹಾನಿಗೊಂಡಿದೆ. ಮುದೂರು ಮೈದಾನದಿಂದ ಉದಯ ನಗರದ ತನಕ ರಸ್ತೆ ಭಾರಿ ಹೊಂಡದಿಂದ ಕೂಡಿದ್ದು, ದ್ವಿಚಕ್ರ ವಾಹನದಲ್ಲಿ ಸಾಗುವುದು ಕಷ್ಟಕರವಾಗಿದೆ.
     ಹುಲಿಪಾರೆಯಿಂದ ಮುದೂರು ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಬಸ್ಸು ಸಂಚಾರ ಸ್ಥಗಿತಗೊಳ್ಳುವ ಭೀತಿ ಇದೆ. ವಂಡ್ಸೆ - ಕೆರಾಡಿ - ಬೆಳ್ಳಾಲ ಪರಿಸರದಲ್ಲಿ ಕೃಷಿ ಭೂಮಿ ಜಲಾವೃತಗೊಂಡಿದೆ. ಬೇಸಾಯಗಾರರು ಆತಂಕದಲ್ಲಿದ್ದಾರೆ.
   ಕೊಲ್ಲೂರಿನ ಅಗ್ನಿತೀರ್ಥ ಹಾಗೂ ಸೌಪರ್ಣಿಕ ನದಿ ಉಕ್ಕಿ ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದಲ್ಲಿ ನೀರು ಅಪಾಯಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ.
 
      ಭಾರೀ ಮಳೆಯಿಂದಾಗಿ ಸೌಪರ್ಣಿಕಾ ನದಿತೀರದ ಅರೆಹೊಳೆ, ಬಡಾಕೆರೆ, ಪಡುಕೋಣೆ, ಹಡವು, ಸೇನಾಪುರ, ಬಂಟ್ವಾಡಿ ಮೊದಲಾದೆಡೆ ಭಾರೀ ನೆರೆಹಾವಳಿ ಕಾಣಿಸಿಕೊಂಡಿದೆ.
     ತೀರಪ್ರದೇಶದ ಅಪಾರ ಕೃಷಿಭೂಮಿ ಜಲಾವೃತಗೊಂಡಿದೆ. ನಾಡಾ ಗ್ರಾಮದ ಚಿಕ್ಕಳ್ಳಿಯಲ್ಲಿ 12 ಮನೆಗಳಿಗೆ ನೆರೆನೀರು ನುಗ್ಗಿದೆ. ಬಂಟ್ವಾಡಿ ಸಮೀಪ ತೆಂಗಿನಗುಂಡಿ, ಪರಮಕಳಿ, ಗುಡ್ಡಮ್ಮಾಡಿ ಮೊದಲಾದೆಡೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.
      ಚಿಕ್ಕಳ್ಳಿಯಲ್ಲಿ ನೆರೆ: ನಾಡಾ ಗ್ರಾಮದ ನದಿತೀರದಲ್ಲಿರುವ ಚಿಕ್ಕಳ್ಳಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇಲ್ಲಿನ 12 ಮನೆಗಳಿಗೆ ನೀರು ನುಗ್ಗಿದ್ದು, ಆತಂಕದ ಸೃಷ್ಟಿಯಾಗಿದೆ. ಇಲ್ಲಿನ ನಿವಾಸಿಗಳು ತಮ್ಮ ಸ್ವಂತ ದೋಣಿಗಳ ಮೂಲಕ ಸಂಚಾರ ಕೈಗೊಂಡಿದ್ದಾರೆ. ಹಟ್ಟಿಗಳಿಗೂ ನೆರೆನೀರು ನುಗ್ಗಿದ್ದರಿಂದ ಜಾನುವಾರುಗಳು ತೊಂದರೆಯಲ್ಲಿ ಸಿಲುಕಿವೆ.

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಗರ್ಭಗುಡಿ ಪ್ರವೇಶಿಸಿದ ಕುಬ್ಜೆ ನದಿ ನೀರು.
     ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ  ದುರ್ಗಾಪರಮೇಶ್ವರಿ ದೇವಳದ ಗರ್ಭ ಗುಡಿಗೆ ಬುಧವಾರ ಬೆಳಗ್ಗೆ ಕುಬ್ಜೆ ಹಾಗೂ ನಾಗತೀರ್ಥಗಳ ನೀರು ನುಗ್ಗಿ ದೇವಿಯ ಮೂರ್ತಿಯನ್ನು ತೋಯಿಸಿದೆ.
      ಶ್ರೀ ಬ್ರಾಹ್ಮೀ  ದುರ್ಗಾಪರಮೇಶ್ವರೀ ದೇವಾಲಯವು ಕುಬ್ಜೆ ನದಿ ಹಾಗೂ ನಾಗತೀರ್ಥಗಳ ಸಂಗಮ ಸ್ಥಳದಲ್ಲಿದ್ದು, ಮಲೆನಾಡು ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉದ್ಭವಲಿಂಕ್ಕೆ ಪ್ರಾಕೃತಿಕ ಗಂಗಾಭಿಷೇಕವಾಗಿದೆ.
      ಕುಬ್ಜೆ ನದಿ ಉಕ್ಕಿ ಹರಿದ ಪರಿಣಾಮ ಬುಧವಾರ ದೇವಾಲಯದ ಪ್ರಾಂಗಣಕ್ಕೆ ನೀರು ಹರಿದು ಬರುತ್ತಿದ್ದಂತೆ ದೇವಾಲಯಕ್ಕೆ ತಂಡೋಪತಂಡವಾಗಿ ಬಂದ ಭಕ್ತರು ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ಪುನೀತರಾದರು. ವರ್ಷಕೊಮ್ಮೆ ಶ್ರೀ ಮಾತೆಯನ್ನು ಕುಬ್ಜೆ ಸ್ನಾನ ಮಾಡಿಸುವುದು ಪುರಾಣ ಕಾಲದಿಂದಲೂ ಸಂಪ್ರದಾಯವೆಂಬಂತೆ ನಡೆದು ಬರುತ್ತಿದೆ. ಸಂಜೆಯ ಅನಂತರ ನೀರು ಇಳಿಮುಖವಾಯಿತು.
      ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್‌. ಸಚ್ಚಿದಾನಂದ ಚಾತ್ರ, ಮೊಕ್ತೇಸರರಾದ ಬರೆಗುಂಡಿ ಶ್ರೀನಿವಾಸ ಚಾತ್ರ ಹಾಗೂ ಹೆನ್ನಾಬೈಲು ಚಂದ್ರಶೇಖರ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಶ್ರೀ ದುರ್ಗಾಂಬಾ ಬಸ್‌ ಪಾಲುದಾರ ಎಸ್‌. ಅನಿಲ್‌ ಚಾತ್ರ, ಕಾಪೊರೇಶನ್‌ ಬ್ಯಾಂಕಿನ ನಿವೃತ್ತ ಜನರಲ್‌ ಮ್ಯಾನೇಜರ್‌ ಜಯಕರ ಶೆಟ್ಟಿ, ದುರ್ಗಾಂಬಾ ಬಸ್‌ ಪಾಲುದಾರ ಎಸ್‌. ಸದಾನಂದ ಚಾತ್ರ, ಮತ್ತು ದೇವಳದ ಕೂಡವಳಿಕೆಯ ಗ್ರಾಮಸ್ಥರು ಪರಊರ ಭಕ್ತರು ಸೇರಿದಂತೆ ಸುಮಾರು 3,000ಕ್ಕೂ ಮಿಕ್ಕಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪವಿತ್ರ ಸ್ನಾನ ಹಾಗೂ ವಿಶೇಷ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com