ತಾಲೂಕಿನಾದ್ಯಂತ ನಿರಂತರ ಮಳೆ; ಹಾನಿ

ಕುಂದಾಪುರ:ತಾಲೂಕಿನಾದ್ಯಂತ ಸೋಮವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮಂಗಳವಾರವೂ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾಗೂ ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದುದರಿಂದ ತಾಲೂಕಿನಲ್ಲಿ ಹರಿಯುತ್ತಿರುವ ನದಿಗಳ ನೀರನ ಮಟ್ಟ ಹೆಚ್ಚುತ್ತಿದ್ದು ನದಿ ಪಕ್ಕದ ತಗ್ಗು ಸ್ಥಳಗಳು ಹಾಗೂ ಕೃಷಿ ಭೂಮಿಗಳು ಜಲಾವೃತಗೊಂಡಿದೆ. ನದಿಯ ನೀರು ಅಪಾಯದ ಮಟ್ಟ ಮುಟ್ಟದಿದ್ದರೂ ಈ ಭಾಗದಲ್ಲಿ ಮಳೆ ಹೀಗೆಯೇ ಮುಂದುವರಿದ್ದಲ್ಲಿ ರಾತ್ರಿ ವೇಳೆ ನೆರೆ ಏರುವ ಸಾಧ್ಯತೆ ಇದೆ.
      ಸೋಮವಾರ ಮಧ್ಯಾಹ್ನದ ಅನಂತರ ಮಳೆ ತನ್ನ ಬಿರುಸನ್ನು ಕಂಡುಕೊಂಡಿದ್ದು ಮಳೆಯೊಂದಿಗೆ ಗಾಳಿ ಬೀಸಿದ್ದರಿಂದ ಕೆಲವು ಕಡೆ ಹಾನಿ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ಬಳಿಕ ಮಳೆ ಮತ್ತಷ್ಟು ಬಿರುಸುಗೊಂಡಿದೆ.
      ಜಿಲ್ಲಾಡಳಿತ ಮಂಗಳವಾರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಮುಂಜಾಗ್ರತ ಕ್ರಮವಾಗಿ ರಜೆ ಘೋಷಣೆ ಮಾಡಿದ್ದರಿಂದ ಕೆಲವೊಂದು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಯಿತು.

ನದಿ ತೀರದಲ್ಲಿ ನೆರೆ ಭೀತಿ
    ತಾಲೂಕಿನ ಪಂಚ ನದಿಗಳು ತುಂಬಿ ಹರಿಯುತ್ತಿದ್ದು, ಸೌಪರ್ಣಿಕ ನದಿ ತೀರದಲ್ಲಿರುವ ಪ್ರದೇಶದಲ್ಲಿರುವ ನಾವುಂದ, ಸಾಲುºಡದಲ್ಲಿ ನೆರೆ ಕಾಣಿಸಿಕೊಂಡಿದೆ. ಇದೇ ರೀತಿ ಮಳೆಯಾದರೆ ಅಪಾಯದ ಮಟ್ಟ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಬಡಾಕೆರೆ, ಕೋಣಿR, ಕೂಡ್ಗಿತ್ಲು, ನಾಡಾ-ಚಿಕ್ಕಳ್ಳಿ, ಪಡುಕೋಣೆ, ಹಡವು, ಸೇನಾಪುರದ ತೆಂಗಿನಗುಂಡಿ, ಪರಮಕಳಿ, ಹೊಸಾಡು ಗ್ರಾಮದ ಹೊಕ್ಕೊಳಿ, ಅರಾಟೆ, ಚಕ್ರಾನದಿ ತೀರದ ಯಳೂರು, ಬಟ್ಟೆಕುದ್ರು, ತೊಪುÉ, ತೆಕ್ಕಟ್ಟೆ ಬಳಿಯ ಕೊಮೆ ತೋಟದ ಬೆಟ್ಟು, ಕೊರವಡಿ , ಮಲ್ಯಾಡಿ, ಹಲೂ¤ರು ಮುಂತಾದ ಗ್ರಾಮೀಣ ಭಾಗಗಳಲ್ಲಿ ನೀರಿನ ಪ್ರಮಾಣ ಏರಿಕೆ ಕಂಡಿದೆ ಇದೇ ರೀತಿಯಲ್ಲಿ ಮಳೆ ನಿರಂತರವಾಗಿ ಸುರಿದರೇ ಈ ಪರಿಸರದಲ್ಲಿ ನೆರೆಯ ಭೀತಿ ಎದುರಾಗುವ ಮುನ್ಸೂಚನೆಗಳಿವೆ ಕೊಂಕಣ ರೈಲ್ವೆ ಹಳಿಗಳ ಆಸು-ಪಾಸಿನ ಕೃಷಿ ಗದ್ದೆಗಳಲ್ಲಿ ಕೃತಕ ನೆರೆ ನಿರ್ಮಾಣವಾಗಿ ನೀರು ತುಂಬಿಕೊಂಡಿದೆ. ಮರವಂತೆ ಗ್ರಾಮದ ಕುರು, ಸಾಲುºಡ ಸಮೀಪದ ಕುದ್ರು, ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಕುದ್ರು ಪ್ರದೇಶಗಳು ಜಲಾವೃತಗೊಂಡಿದೆ.
     ಸೋಮವಾರ ಸುರಿದ ಮಳೆಯಿಂದಾಗಿ ಉಪ್ಪಿನಕುದ್ರುವಿನ ಸೀತಾರಾಮ ಆಚಾರ್‌ ಅವರ ಮನೆಗೆ ಭಾಗಶ: ಹಾನಿಯಾಗಿದ್ದು 25 ಸಾವಿರ ನಷ್ಟ ಉಂಟಾಗಿದೆ. ಹಳ್ನಾಡಿನ ಶಂಕರ ಶೆಟ್ಟಿ ಅವರ ಮನೆಗೆ ಹಾನಿಯುಂಟಾಗಿದ್ದು ರೂ. 10 ಸಾವಿರ ನಷ್ಟ ಸಂಭವಿಸಿದೆ. ಪಡು ವಾಲೂ¤ರಿನ ಸರಕಾರಿ ಹಿ.ಪ್ರಾ.ಶಾಲೆಯ ರಂಗ ಮಂದಿರಕ್ಕೆ ಗಾಳಿಯಿಂದಾಗಿ ಹಾನಿಯುಂಟಾಗಿದ್ದು, 15 ಸಾವಿರ ರೂ. ನಷ್ಟ ಸಂಭವಿಸಿದೆ.

       ಮಂಗಳವಾರ ಸುರಿದ ಮಳೆ ಹಾಗೂ ಗಾಳಿಗೆ ಬೆಳ್ವೆ ಗ್ರಾ. ಪಂ. ವ್ಯಾಪ್ತಿಯ ಗುಮ್ಮಲ ಅಪ್ಪು ಅವರ ಮನೆಯ ಮಲ್ಚಾವಣಿ ಹಾರಿ ಹೋಗಿ ಮನೆ ಸಂಪೂರ್ಣ ಜಖಂಗೊಂಡಿದೆ.
       ಮನೆಯ ಮಣ್ಣಿನಿಂದ ಮಾಡಿದ ಗೋಡೆಗಳು ಕೂಡ ಕುಸಿದು ಬಿದ್ದಿದ್ದು, ಯಾರಿಗೂ ಅಪಾಯ ಸಂಭವಿಸಿಲ್ಲ. ಪ್ರಸ್ತುತ ಮನೆಯವರನ್ನು ಹಾಗೂ ದಿನಬಳಕೆ ವಸ್ತುಗಳನ್ನು ಪಕ್ಕದ ಮನೆಗೆ ಸಾಗಿಸಿ ಅವರಿಗೆ ಅಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.
       ಘಟನಾ ಸ್ಥಳಕ್ಕೆ ಗ್ರಾ. ಪಂ. ಅಧ್ಯಕ್ಷ ಶಿವರಾಮ ಪೂಜಾರಿ, ಸದಸ್ಯರಾದ ಸುದರ್ಶನ ಹಾಗೂ ಉಮೇಶ್‌ ಭೇಟಿ ನೀಡಿ ಪರಿಶೀಲಿಸಿದರು.

ರಾಜ್ಯ ಹೆದ್ದಾರಿ ಬಂದ್‌
        ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿಯ ಅಂಪಾರಿನಿಂದ ಮಡಾಮಕ್ಕಿ ತನಕ ಅಲ್ಲಲ್ಲಿ ಮರಗಳು ಗಾಳಿ ಮಳೆಗೆ ಉರುಳಿ ಬಿದ್ದು ಸಂಚಾರದಲ್ಲಿ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಶಂಕರನಾರಾಯಣ ಹಾಗೂ ಅಂಪಾರು ಮಧ್ಯೆ ಹೆದ್ದಾರಿಗೆ ಮರ ಬಿದ್ದು ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಮರ ತೆರವುಗೊಳಿಸುವ ವಿಚಾರದಲ್ಲಿ ಸ್ಥಳೀಯರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಲಘು ಮಾತಿನ ಚಕಮಕಿ ನಡೆಯಿತು.
        ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ. ಹಾಲಾಡಿ, ಬೆಳ್ವೆ, ಮಡಾಮಕ್ಕಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com