ಕೋಟ್ಯಾಧಿಪತಿ ವೇದಿಕೆಯಲ್ಲಿ ಅಣ್ಣವ್ರ ಮಕ್ಕಳು

ಕನ್ನಡದ ಕೋಟ್ಯಾಧಿಪತಿಯಲ್ಲಿ ಡಾ. ರಾಜಕುಮಾರ್ ಅವರ ಮೂವರು ಮಕ್ಕಳನ್ನ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಟಿವಿ ವೀಕ್ಷಕರಿಗೆ ಲಭಿಸಲಿದೆ. ಇದೇ ಜುಲೈ 24-25ರಂದು (ಬುಧವಾರ-ಗುರುವಾರ) ಪ್ರಸಾರವಾಗಲಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‍ ಕುಮಾರ್ ಅವರಿಗೆ ಕೋಟಿ ಗೆಲ್ಲುವ ಆಟದ ಪ್ರಶ್ನೆ ಕೇಳಲಿದ್ದಾರೆ. ತುಂಬಾ ವರ್ಷಗಳ ನಂತರ ಕನ್ನಡದ ಮನೆಮಂದಿಯೆಲ್ಲಾ ಸೇರಿ ರಾಜ್ ಮಕ್ಕಳು ಆಡುವ ಕೋಟಿ ಗೆಲ್ಲುವ ಆಟವನ್ನು ವೀಕ್ಷಿಸಬಹುದಾಗಿದೆ. ಇದು ಕೋಟ್ಯಾಧಿಪತಿ ಸೀಸನ್ 2 ನ ಗ್ರ್ಯಾಂಡ್ ಫಿನಾಲೇ ಆಗಿದ್ದು, ಈ ಸಂಚಿಕೆಯು ಕಟ್ಟಕಡೆಯ ಸಂಚಿಕೆಯಾಗಿರುತ್ತದೆ. ಅದರ ಅಂಗವಾಗಿ ಒಂದೇ ವೇದಿಕೆಯಲ್ಲಿ ಅಣ್ಣಾವ್ರ ಮಕ್ಕಳ ಸಂಗಮವಾಗಲಿದೆ. ಈ ತ್ರಿಮೂರ್ತಿಗಳು ಆಡುತ್ತಿರುವ ಕೋಟ್ಯಾಧಿಪತಿ ಆಟದಲ್ಲಿ ಗೆದ್ದ ಮೌಲ್ಯವನ್ನು ಚಾರಿಟಿಗಾಗಿ ಅಂದರೆ ಉತ್ತರಾಖಂಡ ಪರಿಹಾರ ಧನ, ಅವರ ತಾಯಿ ಮೈಸೂರಿನಲ್ಲಿ ನಡೆಸುತ್ತಿರುವ ಶಕ್ತಿಧಾಮ ಆಶ್ರಮ ಮತ್ತು ಡಾ|| ರಾಜಕುಮಾರ್ ಟ್ರಸ್ಟ್ ಗಳಿಗೆ ಹಂಚಲಿದ್ದಾರೆ. 

ಭಾವುಕರಾದ ಶಿವಣ್ಣ! 
    ಡಾ.ರಾಜ್‍ಕುಮಾರ್ ಬಗ್ಗೆ ಮಾತನಾಡುತ್ತಾ ಶಿವರಾಜ್ ಕುಮಾರ್ ಭಾವುಕರಾದ ಪ್ರಸಂಗ ನಡೆಯಿತು. ಅವರ ಅವಿರತ ಪ್ರೀತಿಗೆ ಕೋಟಿ ಕೊಟ್ಟರೂ ಸಾಲದು ಎನ್ನುವಾಗ ಶಿವಣ್ಣನ ಕಣ್ಣು ಒದ್ದೆಯಾಗಿತ್ತು. ಅಂತೆಯೇ ಇಡೀ ಸಂಚಿಕೆಯ ಮಧ್ಯೆ ಮಧ್ಯೆ ರಾಜ್ ಸಾಧನೆ, ಶಿವರಾಜ್ ಕುಮಾರ್ ಅವರ ಬಾಲ್ಯ, ಬಾಲ್ಯದ ಗೆಳೆಯರಾದ ಶೇಖರ್ ಮೊದಲಾದವರ ಜೊತೆ ಅತ್ಯಮೂಲ್ಯ ಮಾತುಕತೆ ಹಾಗೂ ಕೌತುಕ ವಿಷಯಗಳನ್ನು ಈ ವಿಶೇಷ ಸಂಚಿಕೆಯಲ್ಲಿ ಶಿವಣ್ಣ ಹಂಚಿ ಕೊಂಡಿದ್ದಾರೆ.

ಪಂಚ್ ಕೊಡುತ್ತಿದ್ದ ರಾಘಣ್ಣ! 
   ಮಾತು ಮಾತಿಗೂ ಪಂಚ್ ಕೊಡುತ್ತಿದ್ದ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅಪ್ಪು ಅವರು ಒಂದು ಪ್ರಶ್ನೆ ಕೇಳುತ್ತಾರೆ. ನಿಮಗೆ ಈ ನಾಲ್ಕು ಉತ್ತರಗಳಲ್ಲಿ ಯಾವುದರ ಮೇಲೆ ಡೌಟ್ ಇದೆ ಎಂದು ಅಪ್ಪು ಅವರು ಕೇಳಿದಾಗ ರಾಘಣ್ಣ "ನನಗೆ ಈ ಕಂಪ್ಯೂಟರ್ ಮೇಲೆಯೇ ಡೌಟ್ ಇದೆ!" ಎಂದರು.

ಕೋಟ್ಯಾಧಿಪತಿ ಫಿನಾಲೆ ರಾಘಣ್ಣ ಮಧ್ಯೆ ಮಧ್ಯೆ ಹಾಸ್ಯದ ಚಟಾಕಿಗಳನ್ನು ಹಾರಿಸುತ್ತಾ ಲೀಲಾಜಾಲವಾಗಿ ಕೋಟಿಗೆಲ್ಲುವ ಆಟ ಆಡುತ್ತಾ ಹೋಗುತ್ತಾರೆ. ಅಲ್ಲಲ್ಲಿ ಮಾತಿನ ಕಚಗುಳಿ ಇಡುತ್ತಾರೆ. ರಾಘಣ್ಣನಿಗೆ ಅಣ್ಣ ಶಿವಣ್ಣ ಹೆಗಲು ಕೊಡುತ್ತಾರೆ. ಇಬ್ಬರೂ ಸೇರಿ ಕೋಟಿ ಆಟಕ್ಕೆ ಇನ್ನಷ್ಟು ಮೆರಗು ನೀಡುತ್ತಾರೆ.

ಶಿವಣ್ಣನ ಫ್ಯಾನ್ಸ್ ಗಳ ಹಬ್ಬ! 
    ಕಾರ್ಯಕ್ರಮ ಶುರುವಾದಾಗ ಹತ್ತು ನಿಮಿಷ ಅಲ್ಲಿ ಕೇಳಿಬಂದ ಜಯಘೋಷವನ್ನು ಕಂಟ್ರೋಲ್ ಮಾಡುವುದೇ ಕಷ್ಟವಾಯಿತು. ಅಲ್ಲಿ ಶಿವಣ್ಣನ ನೂರಾರು ಅಭಿಮಾನಿಗಳು ಜಮೆಗೊಂಡಿದ್ದರು. ಪ್ರತಿಯೊಬ್ಬರ ಬಾಯಲ್ಲೂ ‘ಅಣ್ಣಾವ್ರ ಮಕ್ಕಳಿಗೇ... ಜೈ' ಹರ್ಷೋದ್ಘಾರ!

ಕೋಟ್ಯಾಧಿಪತಿ ಸೀಸನ್ 2 ಮುಕ್ತಾಯ ಈ ನಡುವೆ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಸೇರಿ ಆನಂದ್ ಚಿತ್ರದ ಟುವಿ ಟುವೀ ಹಾಡಿಗೆ ಒಟ್ಟಿಗೇ ಹೆಜ್ಜೆ ಹಾಕಿದರು. ಶಿವಣ್ಣ ಇನ್ನೊಂದು ಕಡೆಯಿಂದ ಲಾಂಗ್ ಹಿಡಿದು ನಡೆದುಬರುತ್ತಿದ್ದರೆ ಇಡೀ ಕೋಟ್ಯಾಧಿಪತಿ ಸೆಟ್ಟಿನಲ್ಲಿ ಸಂಭ್ರಮವೋ ಸಂಭ್ರಮ. ಕೋಟ್ಯಾಧಿಪತಿ ಗ್ರ್ಯಾಂಡ್ ಫಿನಾಲೆಯ ಈ ವಿಶೇಷ ಸಂಚಿಕೆಯನ್ನು ಇದೇ ಜುಲೈ 24 -25 ರ ಬುಧುವಾರ - ಗುರುವಾರ ಸಂಜೆ 8-30ಕ್ಕೆ ಸುವರ್ಣ ವಾಹಿನಿಯಲ್ಲಿ ನೋಡ ಬಹುದಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com