ನಿಲ್ಲದ ಮಳೆ: ಮುಂದುವರಿದ ಕಡಲ್ಕೊರೆತ, ಪ್ರವಾಹ

ಕುಂದಾಪುರ: ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಂದಾಪುರದ ಎಲ್ಲ ನದಿಗಳು ತುಂಬಿ ಹರಿಯುತ್ತಿದ್ದು ಹೆಚ್ಚಿನ ನದಿಗಳಲ್ಲಿ ಪ್ರವಾಹ ಬಂದಿದೆ. ಕರಾವಳಿ ತೀರಗಳಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಕೆಲವಡೆ ಪರಿಹಾರ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

    ಸೌಪರ್ಣಿಕಾ ನದಿ ತೀರದಲ್ಲಿ ನೆರೆ:
    ಇಲ್ಲಿನ ಪ್ರಮುಖ ಸೌಪರ್ಣಿಕಾ ನದಿ ಉಕ್ಕಿ ಹರಿಯುತ್ತಿದ್ದು ಮತ್ತೆ ನೆರೆ ಪರಿಸ್ಥಿತಿ ಕಂಡುಬಂದಿದೆ. ಈ ವರ್ಷದಲ್ಲಿ ಮೂರನೇ ಬಾರಿ ಬಂದಿರುವ ನೆರೆ ಶುಕ್ರವಾರ ಗಂಭೀರ ಸ್ವರೂಪ ತಾಳಿದೆ.
        ನದಿ ಇಕ್ಕೆಲಗಳ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹೇರೂರು, ಚಿತ್ತಾಡಿ, ನಾವುಂದದ ಸಾಲುºಡ, ಬಡಾಕೆರೆ, ಮರವಂತೆ, ಹಡವು, ನಾಡ, ತ್ರಾಸಿ, ಹೊಸಾಡು ಮತ್ತು ಸೇನಾಪುರ ಗ್ರಾಮಗಳ ಅಪಾರ ಪ್ರಮಾಣದ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ.

   ಸಾಲ್ಬುಡ, ಚಿತ್ತಾಡಿ, ಮರವಂತೆ, ನಾಡದ ಕೆಲವೆಡೆ ನದಿದಂಡೆಯ ಮೇಲಿನ ಮನೆಗಳ ಜನರು ಮುಂಜಾಗರೂಕತಾ ಕ್ರಮವಾಗಿ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ,
       ಈ ಪ್ರದೇಶದಲ್ಲಿ ಮಧ್ಯಾಹ್ನದ ತನಕ ಮಳೆಯ ಪ್ರಮಾಣ ತಗ್ಗಿದೆಯಾದರೂ ನಿನ್ನೆ ರಾತ್ರಿ ಘಟ್ಟದ ಮೇಲೆ ಬಿದ್ದ ಮಳೆಯ ಕಾರಣದಿಂದ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಶುಕ್ರವಾರ ಹಗಲು ಬೆಳಗ್ಗೆ ನದಿ ನೀರಿನ ಮಟ್ಟ ಏರುತ್ತಲೇ ಇದೆ.

ಸುಮನಾ ನದಿ ತೀರದಲ್ಲಿ ನೆರೆ :
     ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಬೈಂದೂರು ಭಾಗದ ಪಡುವರಿ ಗ್ರಾ.ಪ. ವ್ಯಾಪ್ತಿಯ ಸಣ್ಣ ಬೆಸ್ಕೂರಿನಲ್ಲಿ ಸುಮನಾ ನದಿ ಉಕ್ಕಿ ಹರಿದ ಪರಿಣಾಮ ಎರಡು ಮನೆಗಳಿಗೆ ನೀರು ನುಗ್ಗಿ, ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.
      ನೆರೆಪೀಡಿತ ಸ್ಥಳಕ್ಕೆ ಬೈಂದೂರು ತಹಶೀಲ್ದಾರ್‌ ಎಂ.ಎನ್‌. ಖಾನ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು ಕೃಷಿ ಅಧಿಕಾರಿಗಳೊಂದಿಗೆ ಕೃಷಿ ಭೂಮಿಯ ನಷ್ಟದ ಅಂದಾಜು ಪಟ್ಟಿ ಮಾಡಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ..
     ಗ್ರಾಂ. ಸದಸ್ಯ ನಾಗೇಶ ಖಾರ್ವಿ, ಸುಬ್ರಹ್ಮಣ್ಯ ಪೂಜಾರಿ ಹಾಗೂ ಪಡುವರಿ ಗ್ರಾಮ ಲೆಕ್ಕಾಧಿಕಾರಿ ವಿನಾಯಕ ಹಾಜರಿದ್ದರು.
        ಗುಲ್ವಾಡಿ ಚಂದ್ರಶೇಖರ ಶೆಟ್ಟಿ ಅವರ ಮನೆ, ಹಾರ್ದಳ್ಳಿ-ಮಂಡಳ್ಳಿಯ ಚೀರು ಕುಲಾಲ್ತಿ ಅವರ ಮನೆ ಕುಸಿದು ಹಾನಿ ಸಂಭವಿಸಿದೆ. ಶೇಡಿಮನೆ ಗಿರಿಜಮ್ಮ ಶೆಡ್ತಿ ಅವರ ಮನೆ ಕುಸಿದು ಹಾನಿ ಸಂಭವಿಸಿದೆ.

ಮುಂದುವರಿದ ಕಡಲ್ಕೊರೆತ:
       ತಾಲೂಕಿನ ಕರಾವಳಿಯಲ್ಲಿ ಕಡಲು ಬಿರುಸುಗೊಂಡಿದ್ದು ಅನೇಕ ಕಡೆಗಳಲ್ಲಿ ಕಡಲ್ಕೊರೆತ ಮುಂದುವರಿದಿದೆ. ಕುಂದಾಪುರ ಕೋಡಿಯಲ್ಲಿ ಕಡಲ್ಕೊರೆತ ಅದೇ ಸ್ಥಿತಿಯಲ್ಲಿದ್ದು, ಕಡಲ ತಡಿಗೆ ಕಲ್ಲು ಹಾಕುವ ಕಾರ್ಯ ಮುಂದುವರಿಸಲಾಗಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶುಕ್ರವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
      ಕಿರಿಮಂಜೇಶ್ವರ ಗ್ರಾಮದ ಆದ್ರಗೋಳಿ, ನಾವುಂದ ಕಡಲ ಕಿನಾರೆಯ ಬಳಿ, ಬೈಂದೂರಿನ ದೊಂಬೆ, ಕಳಿಹಿತ್ಲು, ಮರವಂತೆ ಕರಾವಳಿ ಮಾರ್ಗ, ನಾಗೂರು ಹೊಸ ಹಿತ್ಲು, ಗಂಗೊಳ್ಳಿಯ ಮಡಿಯಲ್ಲಿ ಕಡಲ ಕೊರೆತ ಮುಂದುವರಿದಿದ್ದು ತುರ್ತು ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com