ಶಿರೂರು ದೊಂಬೆ ಪರವಾನಗಿ ಬಸ್ಸುಗಳು ಬರುತ್ತಿಲ್ಲ!

ಬೈಂದೂರು: ಬೈಂದೂರು ಕ್ಷೇತ್ರದ ಪ್ರಮುಖ ಕರಾವಳಿ ಭಾಗಗಳಾದ ಶಿರೂರು ,ದೊಂಬೆ ,ಸೋಮೇಶ್ವರ ಮಾರ್ಗಗಳಲ್ಲಿ ಹತ್ತಾರು ಬಸ್ಸುಗಳಿಗೆ ಪರವಾನಗೆಯಿದ್ದರು ಬಸ್ಸುಗಳೇ ಬಾರದಿರುವುದರಿಂದ ಪ್ರತಿದಿನ ಸಾರ್ವಜನಿಕರು ಪರದಾಡುವಂತಾಗಿದೆ.
      ಬೈಂದೂರಿನಿಂದ ಭಟ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದೇ ದೊಂಬೆ-ಕರಾವಳಿ ರಸ್ತೆ. ಮೀನುಗಾರಿಕಾ ಇಲಾಖೆ ವ್ಯಾಪ್ತಿಗೊಳಪಡುವ ಈ ಮಾರ್ಗದಲ್ಲಿ ಪಡುವರಿ, ಸೋಮೆಶ್ವರ, ದೊಂಬೆ, ಕರಾವಳಿ,ಪಡಿಯಾರಹಿತ್ಲು,ಸೇರಿದಂತೆ ಹತ್ತಾರು ಊರುಗಳು ಸಿಗುತ್ತದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೈಂದೂರು ಹಾಗೂ ಶಿರೂರಿಗೆ ತೆರಳುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರತಿದಿನ ಹತ್ತಾರು ಬಸ್ಸುಗಳು ಸಂಚರಿಸುತ್ತಿದ್ದು ಪ್ರಸ್ತುತ ಪ್ರತಿದಿನ ಒಂದೆರೆಡು ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಸಾರ್ವಜನಿಕರು ಅತೀವ ಸಂಕಟಪಡುವಂತಾಗಿದೆ.
     ಉಡುಪಿ ಸಾರಿಗೆ ಇಲಾಖೆಯಿಂದ ದೊಂಬೆ-ಶಿರೂರು ಮುಂತಾದ ಊರುಗಳಿಗೆ ಹತ್ತಕ್ಕೂ ಅಧಿಕ ಬಸ್ಸುಗಳಿಗೆ ಪರವಾನಗೆ ನೀಡಿದೆ. ಆದರೆ ಬಸ್ಸುಗಳು ಮಾತ್ರ ಓಡುತ್ತಿಲ್ಲ. ಈ ಬಗ್ಗೆ ಸ್ಥಳೀಯರು ಸಾರಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
      ಕರಾವಳಿ ಹಾಗೂ ದೊಂಬೆಯಿಂದ ನೂರಾರು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲಾಗದೇ ಪರದಾಡುವಂತಾಗಿದೆ.
      ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಗಣಪತಿ ಮೊಗೇರರವರು ಹಿಂದೆಲ್ಲಾ ದಿನಕ್ಕೆ ಹತ್ತಾರು ಬಸ್ಸುಗಳು ಈ ಮಾರ್ಗದ ಮೂಲಕ ಬರುತ್ತಿದ್ದವು. ರಸ್ತೆ ಹದಗೆಟ್ಟಿರುವ ಕಾರಣ ನೀಡಿ ನಿಲುಗಡೆಗೊಂಡ ಬಸ್ಸುಗಳು ರಸ್ತೆ ಸುಧಾರಣೆಯಾದರು ಸಹ ಬರುತ್ತಿಲ್ಲ. ಇದರಿಂದಾಗಿ ನಿತ್ಯ ಪ್ರಯಾಣಿಕರು ಪ್ರಯಾಸಪಡಬೇಕಾಗಿದೆ. ಸಂಬಂಧಪಟ್ಟ ಇಲಾಖೆ ಪರವಾನಗಿಯಿದ್ದು ಸೂಕ್ತವಾಗಿ ಸಂಚರಿಸದ ಬಸ್ಸುಗಳ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
     ದಿನಂಪ್ರತಿ ಹತ್ತಾರು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗುವ ಕರಾವಳಿ ಭಾಗದ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಆಧಿಕಾರಿಗಳು ಸ್ಫಂಧಿಸುವ ಜೊತೆಗೆ ಇಲ್ಲಿನ ಸಮಸ್ಯೆಗಳಿಗೊಂದು ಮುಕ್ತಿ ನೀಡಬೇಕಾಗಿದೆ.
-ಅರುಣ ಕುಮಾರ್‌ ಶಿರೂರು
ಉದಯವಾಣಿ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com