ಇಂದು ಶಾಲೆಗಳಿಗೆ ರಜೆ ಘೋಷಣೆ

ಉಡುಪಿ:  ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಪ್ರಯುಕ್ತ ಮುಂಜಾಗರೂಕ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಶನಿವಾರ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
       ತಗ್ಗು ಪ್ರದೇಶ, ನದಿ, ಸಮುದ್ರ ತೀರದ ಜನರು, ಮೀನುಗಾರರು, ಕೃಷಿಕರು ಮುಂಜಾಗರೂಕತೆಯಿಂದ ಇರುವಂತೆ ಕೂಡ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಗುರುವಾರ ರಾತ್ರಿ ಜೋರಾಗಿ ಸುರಿದ ಮಳೆಯು ಶುಕ್ರವಾರವು ಮುಂದುವರಿದಿದೆ. ಶುಕ್ರವಾರ ಮುಂಜಾನೆಯ ಅಲ್ಲಲ್ಲಿ ಗಾಳಿ ಸಹಿತ ಮಳೆಯಾದ ಕಾರಣ ಮರಗಳು ಧರೆಗೆ ಉರುಳಿದೆ ಜೊತೆಗೆ ಮನೆಗಳು ಕೂಡ ಜಖಂಗೊಂಡಿವೆ. ಈ ನಡುವೆ ಸಮುದ್ರದ ಅಲೆಗಳು ಅಬ್ಬರವು ಜೋರಾಗಿದ್ದು, ಕುಂದಾಪುರ, ಉಡುಪಿ ಹಾಗೂ ಕಾರ್ಕಳ ತಾಲೂಕಿನ ಕಡಲ ತೀರದ ಸಮೀಪದ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.   ಶುಕ್ರವಾರ ಮುಂಜಾನೆ ಸುರಿದ ಗಾಳಿ ಮಳೆಯಿಂದಾಗಿ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಪದ್ದು ಪೂಜಾರ್ತಿ ಅವರ ಮನೆಯ ಮೇಲೆ ಹೆಬ್ಬೆಲಸು ಮರ ಉರುಳಿ ರು. 8,990 ನಷ್ಟವಾಗಿದೆ. ಪಾದೂರು ಗ್ರಾಮದ ಸುಂದರಿ ಮೂಲ್ಯ ಅವರ ಮನೆ ಮೇಲೆ ಮರ ಬಿದ್ದು ರು. 20 ಸಾವಿರ ಹಾನಿಯಾಗಿದೆ.
      ತಾಲೂಕಿನ ಖಾರ್ವಿಕೇರಿ ಗ್ರಾಮದ ಗಿರಿಜಾ ಅವರ ಮನೆಯ ಹೆಂಚು ಗಾಳಿ ಮಳೆಗೆ ಹಾರಿ ಹೋಗಿದ್ದು ಸುಮಾರು ರು. 20 ಸಾವಿರ ನಷ್ಟ, ಕೋಟೇಶ್ವರದ ಕೋಡಿ ಗ್ರಾಮದ ರಾಮಶೆಟ್ಟಿ ಅವರ ಮನೆಯ ಮೇಲೆ ಸಾಗುವಾನಿ ಮರ ಉರುಳಿ ರು. 10 ಸಾವಿರ ನಷ್ಟ, ಹಾರ್ದಳ್ಳಿ ಗ್ರಾಮದ ಚೀರೂ ಕುಲಾಲ್ತಿ ಅವರ ಮನೆಯು ಭಾಗಶಃ ಹಾನಿಯಾಗಿ ರು. 5 ಸಾವಿರ ನಷ್ಟ ಉಂಟಾಗಿದೆ. ಕೋಟ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಹಿರೇ ಮಹಾಲಿಂಗೇಶ್ವರ ರಥಬೀದಿ ಸಮೀಪ ಇರುವ 100 ವರ್ಷಕ್ಕೂ ಹಿಂದಿನ ಆಲದ ಮರ ಧರೆಗೆ ಉರುಳಿದೆ.
ತಾಲೂಕಿನಲ್ಲಿ 103.4 ಮಿ.ಮೀ. ಮಳೆಯಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com