ಬಳ್ಕೂರು ಗ್ರಾಮ ಸಭೆಯಲ್ಲಿ ಪಡಿತರ ಗದ್ದಲ

ಕುಂದಾಪುರ: ಜಿಲ್ಲೆಯಾದ್ಯಂತ ಪಡಿತರ ಚೀಟಿಯ ಸಮಸ್ಯೆ ಹಾಗೂ ಗೊಂದಲಗಳಿಗೆ ಬಳ್ಕೂರಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪ್ರತ್ಯಕ್ಷ ಸಾಕ್ಷಿಯಾಯಿತು.
       ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 70ಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿ ರದ್ದಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ, ವೈಜ್ಞಾನಿಕ ಸರ್ವೆ ಮಾಡದೆ ಪಡಿತರ ಚೀಟಿಯನ್ನು  ರದ್ದು ಪಡಿಸಿರುವುದರಿಂದ ಬಡ ಕುಟುಂಬಗಳು ಅತಂತ್ರವಾಗಿವೆ ಎಂದು ಅಸಮಧಾನ ತೋಡಿಕೊಂಡ ನಾಗರಿಕರು, ಇಂದಿನ ಸಭೆಯಲ್ಲಿ ಈ ಸಮಸ್ಯೆ ಕುರಿತು ಉತ್ತರಿಸಬೇಕಾದ ಆಹಾರ ಇಲಾಖೆಯ ಅಧಿಕಾರಿ ಸಭೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
         ಸಮಸ್ಯೆ ಕುರಿತು ಸಮಜಾಯಿಸಿ ನೀಡಲು ಮುಂದಾದ ಗ್ರಾಮ ಕರಣಿಕರನ್ನು ತಡೆದ ಗ್ರಾಮಸ್ಥರು ಕಂದಾಯ ಇಲಾಖೆಯ ತಹಶೀಲ್ದಾರರು ಅಥವಾ ಆಹಾರ ಇಲಾಖೆಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದು ಧರಣಿ ನಡೆಸಲು ಮುಂದಾದರು.
      ತಹಶೀಲ್ದಾರರು ಜಿಲ್ಲಾಧಿಕಾರಿಗಳೊಂದಿಗೆ ಸಭೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಪಡೆದುಕೊಂಡ ಗ್ರಾಮಸ್ಥರು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಬಂದು ಉತ್ತರ ನೀಡುವಂತೆ ಒತ್ತಾಯಿಸಿದರು.
        ಮಧ್ಯಾಹ್ನ ಸುಮಾರು 1.30ರ ವೇಳೆಯಲ್ಲಿ ಸಭೆಗೆ ಅಧಿಕಾರಿಗಳು ಬಂದರೂ, ಸಮಸ್ಯೆಯ ಕುರಿತಂತೆ ಉತ್ತರ ನೀಡಲು ವಿಫಲಾಗಿದ್ದರಿಂದ ಸಭೆಯನ್ನು ಮೊಟಕುಗೊಳಿಸ ಬೇಕಾಯಿತು.

ಪೊಲೀಸರು ಬೇಕಿಲ್ಲವಂತೆ!: ಗ್ರಾಮ ಸಭೆಯ ಪೂರ್ವದಲ್ಲಿ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಭೆಯ ಕುರಿತು ಮಾಹಿತಿ ನೀಡುವುದು ವಾಡಿಕೆ. ಹೆಚ್ಚಿನ ಇಲಾಖೆಗೆ ಅಧಿಕೃತ ಮಾಹಿತಿ ಪತ್ರ ತಲುಪದೆ ಇದ್ದುದರಿಂದ  ಸಭೆಯಲ್ಲಿ ಬೆರಳೆಣಿಕೆಯ ಅಧಿಕಾರಿಗಳ ಉಪಸ್ಥಿತಿ ಎದ್ದು ಕಾಣುತ್ತಿತ್ತು.
       ಬೆಳಗ್ಗೆಯಿಂದ ಮಧ್ಯಾಹ್ನದವರೆಗಿನ ಸಭೆ ಗಲಾಟೆ-ಗದ್ದಲಗಳ ಗೂಡಾಗಿದ್ದರಿಂದ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕಾದ ಪೊಲೀಸರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪೊಲೀಸ್ ಇಲಾಖೆಗೆ ಸಭೆಯ ಕುರಿತು ಮಾಹಿತಿ ನೀಡಲಾಗಿದೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಂಚಾಯಿತಿ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಬೇಕು ಎನ್ನುವ ನಿಯಮವಿಲ್ಲ ಎಂಬ ಉತ್ತರ ನೀಡಿದರು.
        ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇದರ ಮುಖ್ಯ ಶಿಕ್ಷಕ ಯೋಗೇಶ್ ಎನ್. ಎಚ್. ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ ಟಿ. ಮೆಂಡನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪೂರ್ಣಿಮ ಜಿ. ಪೂಜಾರಿ, ಕೃಷಿ ಇಲಾಖೆಯ ರಾಜೇಶ್, ಮೆಸ್ಕಾಂನ ಅಶೋಕ್, ಆರೋಗ್ಯ ಇಲಾಖೆಯ ಗ್ರೇಸಿ ಎಂ.ವಿ ಮುಂತಾದವರು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ಶೇರೆಗಾರ್ ಸ್ವಾಗತಿಸಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com