ನಿಲ್ಲದ ಮಳೆ. ಬಿರುಸುಗೊಂಡ ಅಲೆ. ಕಡಲ್ಕೊರೆತ-ಹಾನಿ

ಕುಂದಾಪುರ: ಕುಂದಾಪುರದಲ್ಲಿ ಬುಧವಾರ ಸಂಜೆ ವೇಳೆಗೆ ಮಳೆ ಬಿರುಸುಗೊಂಡಿದೆ. ಕಡಲು ಪ್ರಕ್ಷಬ್ಧಗೊಂಡಿದ್ದು, ಮಳೆ ಹಾಗೂ ಗಾಳಿಯೊಂದಿಗೆ ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಾ ಇವೆ.
     ಕಳೆದ ಎರಡು ದಿನಗಳಿಂದ ತ್ರಾಸಿ - ಮರವಂತೆ, ದೊಂಬೆ, ಕೋಡಿ, ಕಿರಿಮಂಜೇಶ್ವರಗಳಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು ಕಡಲು ಪ್ರಕ್ಷಬ್ಧವಾಗಿದೆ. ಕಿರಿಮಂಜೇಶ್ವರದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಸ್ಥಳಕ್ಕೆ ಬೈಂದೂರು ತಹಶೀಲ್ದಾರರು ಹಾಗೂ ಆಧಿಕಾರಿಗಳು ಭೇಟಿ ನೀಡಿದ್ದಾರೆ.

ಮರವಂತೆಯಲ್ಲಿ ಕಡಲ್ಕೊರೆತ
     ಮರವಂತೆಯಲ್ಲಿ  ಮಂಗಳವಾರ ರಾತ್ರಿಯಿಂದ ಕಡಲು ಪ್ರಕ್ಷುಬ್ಧವಾಗಿದ್ದು, ತೀರದುದ್ದಕ್ಕೂ ಕಡಲ್ಕೊರೆತ ಆರಂಭವಾಗಿದೆ.
     ತೆರೆದ ಮೀನುಗಾರಿಕಾ ಬಂದರು ನಿರ್ಮಾಣವಾಗುತ್ತಿರುವ ಪ್ರದೇಶದ ಬಳಿ ತೆರೆಗಳ ಅಬ್ಬರ ಹೆಚ್ಚಿದ್ದು, ಸಮುದ್ರಕ್ಕೆ ಸಮಾನಾಂತರವಾಗಿರುವ ಕರಾವಳಿ ಮಾರ್ಗಕ್ಕೆ ಅಪಾಯ ಎದುರಾಗಿದೆ. ರಸ್ತೆಯ ಬದಿಯ ರಕ್ಷಣಾ ಗೋಡೆ ಸಮುದ್ರ ಪಾಲಾಗಿದೆ. ತೆರೆಗಳು ಇನ್ನಷ್ಟು ಮುಂದಕ್ಕೆ ಬಂದರೆ ರಸ್ತೆ ಕಡಿದು ಹೋಗುವ ಸಾಧ್ಯತೆ ಇದೆ.

ಕೋಡಿಯಲ್ಲಿ ಕಡಲ್ಕೊರೆತ
    ತಾಲೂಕಿನ ಕೋಡಿ ಹಾಗೂ ಹಳವಳ್ಳಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಸ್ಥಳೀಯರು ಭೀತರಾಗಿದ್ದಾರೆ. ಸಮುದ್ರದ ನೀರು ರಸ್ತೆಯವರೆಗೂ ಬರುತ್ತಿದ್ದು ರಸ್ತೆ ಸಮೀಪದಲ್ಲಿರುವ ಮನೆಗಳು, ಅಂಗಡಿಗಳು ಅಪಾಯದ ಅಂಚಿನಲ್ಲಿದೆ. ಕೋಡಿ - ಬೀಜಾಡಿ (ಹಳವಳ್ಳಿ) ಸಂಪರ್ಕ ರಸ್ತೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಹಳವಳ್ಳಿ ಹಾಗೂ ಕೋಡಿ ಪ್ರದೇಶದಲ್ಲಿರುವ ಕಿನಾರ ಹೊಟೇಲ್‌ಗೆ ಸಂಬಂಧಿಸಿದ ಕ್ಯಾಬಿನ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ನೀರಿನ ತಡೆಗೆ ಹಾಕಿದ ತಡೆಗೋಡೆಯ ಕಲ್ಲುಗಳು ನೀರಿನ ಪಾಲಾಗುತ್ತಿದ್ದು ಮರ - ಮಟ್ಟುಗಳು ಕಡಲಿನಾಳಕ್ಕೆ ಇಳಿಯುತ್ತಿವೆ.
     ಕೋಡಿ ಕಡಲ್ಕೊರೆತ ಪ್ರದೇಶಕ್ಕೆ ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌, ಕಂದಾಯ ಅಧಿಕಾರಿಗಳು, ಬಂದರು ಇಲಾಖೆಯ ಎಂಜಿನಿಯರ್‌, ತಾ.ಪಂ. ಸದಸ್ಯ ಮಂಜು ಬಿಲ್ಲವ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರ ಬಿದ್ದು ಹಾನಿ
       ಮಳೆಯೊಂದಿಗೆ ಗಾಳಿಯ ಪ್ರಮಾಣ ಇರುವುದರಿಂದ ಕೆಲವು ಕಡೆ ಮರ ಬಿದ್ದು ಹಾನಿಯಾಗಿದೆ. ಕುಂದಾಪುರ ಟಿ.ಟಿ. ರಸ್ತೆ, ಕಲ್ಯಾಣ ಸ್ವಾಮಿ ರಸ್ತೆ, ಹಟ್ಟಿಕುದ್ರು, ಕೊçಕಾಡಿಗಳಲ್ಲಿ ಮರಗಳು ಬಿದ್ದು ಸುಮಾರು 10 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಗುಲ್ವಾಡಿ ಗ್ರಾಮದ ಚಂದು ಪೂಜಾರ್ತಿ ಅವರ ಮನೆಯ ಮೇಲೆ ಮರ ಬಿದ್ದು ಮನೆ ಸುಮಾರು 10,000 ರೂ. ನಷ್ಟ ಸಂಭವಿಸಿದೆ. ಬೆಳ್ವೆ ಗ್ರಾಮದ ಗೊಮ್ಮಲ ಲೂವಿಸ್‌ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ ಸುಮಾರು 30,000 ರೂ. ನಷ್ಟ ಸಂಭವಿಸಿದೆ.

ಪ್ರವಾಸಿಗರೇ ಎಚ್ಚರ
 ಬೈಂದೂರಿನ ದೊಂಬೆ ಹಾಗೂ ಮರವಂತೆಯ ಕಂಚುಗೋಡಿನಲ್ಲಿ ಕಡಲ್ಕೊರೆತ ಮುಂದುವರಿದಿದೆ. ತ್ರಾಸಿಯಲ್ಲಿ ಕಡಲ ಅಬ್ಬರ ತೀವ್ರಗೊಂಡಿದ್ದು, ಪ್ರವಾಸಿಗರಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com