ಮುಂದುವರಿದ ಮಳೆ, ಗಂಗೊಳ್ಳಿ, ಆನಗಳ್ಳಿಯಲ್ಲಿ ಸುಂಟರಗಾಳಿ

ಕುಂದಾಪುರ: ತಾಲೂಕಿನಲ್ಲಿ ಗಾಳಿ ಮಳೆ ಅಬ್ಬರ ಮುಂದುವರಿದಿದ್ದು, ಸುಂಟರ ಗಾಳಿ ಅಬ್ಬರಕ್ಕೆ ಗಂಗೊಳ್ಳಿ ಮತ್ತು ಆನಗಳ್ಳಿ ಗ್ರಾಮ ತತ್ತರಿಸಿದೆ. ಶನಿವಾರ ಬೆಳಗ್ಗೆ ಕೊಂಚ ಬಿಡುವು ಕಂಡುಕೊಂಡ ಮಳೆ ಮತ್ತೆ ತನ್ನ ರುದ್ರ ಪ್ರತಾಪ ತೋರ್ಪಡಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿದ್ಯುತ್, ದೂರವಾಣಿ ಸಂಪರ್ಕ ಅಸ್ತವ್ಯಸ್ತವಾಗಿದೆ. ಮನೆ ಕುಸಿತ, ಮರ ಬಿದ್ದು ಮನೆ ಹಾನಿ, ಹೆಂಚು ಹಾರಿಹೋಗಿರುವುದು ಸೇರಿದಂತೆ ತಾಲೂಕಿ ನಾದ್ಯಂತ ಮಳೆರಾಯ ನಾಗರಿಕ ಬದುಕಿನ ಮೇಲೆ ಪ್ರಹಾರ ನಡೆಸಿದ್ದಾನೆ. ಸುಂಟರಗಾಳಿ ಗಂಗೊಳ್ಳಿ ಬಂದರು ತತ್ತರ: ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೀಸಿದ ಸುಂಟರ ಗಾಳಿಗೆ ಗಂಗೊಳ್ಳಿ ಕಿರು ಬಂದರು ತತ್ತರಿಸಿದ್ದು, ಮೀನುಗಾರಿಕೆ ಪ್ರಾಂಗಣ, ಶೆಡ್ ಮತ್ತು ಅಕ್ಕಪಕ್ಕದ ಹಲವು ಅಂಗಡಿಗಳು ಹಾನಿಗೀಡಾಗಿವೆ. ಗಂಗೊಳ್ಳಿ ಮೀನುಗಾರಿಕೆ ಬಂದರಿಲ್ಲಿರುವ ಎರಡು ಶೆಡ್‌ಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಬಂದರಿನ ಉತ್ತರ ದಿಕ್ಕಿನಲ್ಲಿರುವ ಒಂದನೇ ಶೆಡ್ ಭಾಗಶಃ ಹಾನಿಗೊಂಡಿದ್ದು, ಈ ಶೆಡ್‌ನಲ್ಲಿದ್ದ ಮೂರು ಮೀನುಗಾರರ ಕಚೇರಿಗಳಿಗೆ ಹಾನಿಯುಂಟಾಗಿದೆ. ಈ ಶೆಡ್‌ನ ಮುಂಭಾಗದಲ್ಲಿದ್ದ ಮೀನುಗಾರರ ಬಾಕ್ಸ್ ಶೆಡ್‌ನ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಈ ಶೆಡ್‌ನ ಮೇಲ್ಛಾವಣಿಯ ಭಾರಿ ಗಾತ್ರದ ಕಬ್ಬಿಣದ ಪೈಪ್ ಗಾಳಿಗೆ ಹಾರಿ ಮೀನುಗಾರಿಕೆ ಶೆಡ್‌ನಲ್ಲಿರುವ ಆಫೀಸಿನ ಬಾಗಿಲು ಮುರಿದು ಒಳ ನುಗ್ಗಿದೆ. 

ದನ ಸಾವು: ಇದೇ ಸಂದರ್ಭ ಬಂದರಿನ ಉತ್ತರ ದಿಕ್ಕಿನ ಸಮೀಪದಲ್ಲಿ ಕುಸಿತಕ್ಕೊಳಗಾದ ಅಂಗಡಿಯ ಮೇಲ್ಛಾವಣಿಯ ಕೆಳಗೆ ದನವೊಂದು ಸಿಲುಕಿ ಮೃತಪಟ್ಟಿದೆ. ಶುಕ್ರವಾರ ಬೆಳಗ್ಗೆ ಅಂಗಡಿಯ ಮೇಲ್ಛಾವಣಿಯ ಭಾಗಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭ ದನದ ಕಳೇಬರ ಪತ್ತೆಯಾಗಿದೆ. ಮೀನುಗಾರಿಕಾ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಗಣಪತಿ ಭಟ್, ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ ಖಾದ್ರಿ, ಇಲಾಖೆಯ ಸಿಬ್ಬಂದಿ ಗೋಪಾಲಕಷ್ಣ, ದಿವಾಕ ಖಾರ್ವಿ, ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ. ಆನಗಳ್ಳಿಯಲ್ಲಿ ಸುಂಟರ ಗಾಳಿ: ಆನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕುದ್ರು ಮತ್ತು ಆನಗಳ್ಳಿಯಲ್ಲಿ ಶುಕ್ರವಾರ ಕಾಣಿಸಿಕೊಂಡ ಸುಂಟರ ಗಾಳಿಗೆ ಅಪಾರ ನಷ್ಟ ಸಂಭವಿಸಿದೆ. ಹಲವು ಮನೆಗಳು ಹಾನಿಗೀಡಾಗಿವೆ. ಇಲ್ಲಿನ ಸರೋಜ, ಗಿರಿಜಮ್ಮ ಶೆಡ್ತಿ, ಲಚ್ಚು ಪೂಜಾರ್ತಿ, ನಾರಾಯಣ ಪೂಜಾರಿ, ಮುತ್ತು ಪೂಜಾರ್ತಿ, ಸಿಂಗಾರಿ ಶೆಡ್ತಿ, ಮೋತಿ ಡಿಮೆಲ್ಲೊ, ಹೆನ್ರಿ ಡಿಮೆಲ್ಲೊ, ಚಾರ್ಲಿ ಡಿಸೋಜ, ಶಂಕರ ಪೂಜಾರಿಯವರ ಮನೆಗಳು ಹಾನಿಗೊಂಡಿದ್ದು, ಒಟ್ಟು 5ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. 

ಮಾಜಿ ಸಚಿವ ಭೇಟಿ: ಬಿರುಗಾಳಿಗೆ ಸಿಲುಕಿ ಹಾನಿಗೊಳಗಾದ ಗಂಗೊಳ್ಳಿ ಮೀನುಗಾರಿಕೆ ಬಂದರಿಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಭೇಟಿ ನೀಡಿ, ಹಾನಿ ಪರಿಶೀಲಿಸಿದರು. ಬಂದರಿನ ಎರಡು ಶೆಡ್‌ಗಳು ಅಪಾರ ಹಾನಿಗೊಳಗಾಗಿರುವುದು ಮತ್ತು ಮೀನುಗಾರರ ಬಾಕ್ಸ್ ಶೆಡ್‌ಗಳು ಹಾನಿಗೊಳಗಾಗಿರುವುದು ಹಾಗೂ ಘಟನೆಯಲ್ಲಿ ದನವೊಂದು ಅಸುನೀಗಿರುವುದನ್ನು ಪರಿಶೀಲಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಘಟನೆ ಬಗ್ಗೆ ಮೀನುಗಾರಿಕೆ ಮತ್ತು ಬಂದರು ಸಚಿವರನ್ನು ಖದ್ದು ಭೇಟಿ ಮಾಡಿ ದುರಸ್ಥಿ ಹಾಗೂ ಪರಿಹಾರದ ಬಗ್ಗೆ ಮಾತುಕತೆ ನಡೆಸಲಾಗುವುದು. ಗಂಗೊಳ್ಳಿಯ ಈ ಘಟನೆಯನ್ನು ಸದನದಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುವೆ ಎಂದರು. 

ಮುಂದುವರಿದ ಕಡಲ್ಕೊರೆತ: ಕುಂದಾಪುರ ತಾಲೂಕಿನ ಕರಾವಳಿಯಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಕಡಲಿಗೆ ಕಲ್ಲು ಹಾಕುವ ಪ್ರಕ್ರಿಯೆ ನಡೆ ಯುತ್ತಿದೆ. ಕೋಡಿ, ಗುಜ್ಜಾಡಿ ಮಡಿ ಸಮುದ್ರ ಕಿನಾರೆ, ಮರವಂತೆ, ನಾಗೂರು, ಕಿರಿಮಂಜೇಶ್ವರ, ಉಪ್ಪುಂದ ಮಡಿಕಲ್, ಪಡುವರಿ ದೊಂಬೆ ಯಲ್ಲಿ ಕಡಲಬ್ಬರ ಹೆಚ್ಚಳಗೊಂಡಿದ್ದು ಅಲೆಗಳ ಹೊಡೆತಕ್ಕೆ ತೀರ ಪ್ರದೇಶ ನಲುಗಿದೆ. ಕೋಡಿ ಕಿನಾರ ಬೀಚ್ ಸಂಪೂರ್ಣ ಕೊಚ್ಚಿಹೋಗಿ ರಸ್ತೆ ಅಪಾಯದಂಚಿನಲ್ಲಿದ್ದು, ಕಡಲಿಗೆ ಕಲ್ಲು ಹಾಕುವ ಪ್ರಕ್ರಿಯೆ ಭರದಿಂದ ಸಾಗಿದೆ.

-ಜಾನ್ ಡಿಸೋಜ-ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com