ಕುಂದಾಪುರದಲ್ಲಿ ಪತ್ರಿಕಾ ದಿನ ಆಚರಣೆ

    ‘ಪತ್ರಕರ್ತರು ಯಾರಿಗೂ ಗುಲಾಮರಲ್ಲ. ನಮ್ಮ ಮಾಲಿಕರು ಓದುಗರು, ನಾವು ಓದುಗರ ಪರವಾಗಿ ಇದ್ದರೆ ಮಾತ್ರ ವೃತ್ತಿ ಧರ್ಮವನ್ನು ಪಾಲಿಸಲು ಸಾಧ್ಯ. ಕೇವಲ ಸುದ್ಧಿಯನ್ನು ನೀಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಲ್ಲ, ಸಮಾಜಮುಖಿ ಚಿಂತನೆಗಳು, ಜನಪರ ಕಾಳಜಿ, ಸೂಕ್ಷ್ಮ ಸಂವೇದನೆಯನ್ನು ಸುದ್ದಿಗಾರರು ಹೊಂದಿರಬೇಕು’ ಎಂದು ಹಿರಿಯ ಪತ್ರಕರ್ತ, ಮೈಸೂರಿನ ಅಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಹೇಳಿದರು.
ಜುಲೈ 1ರಂದು ಕುಂದಾಪುರದ ಜ್ಯೂನಿಯರ್ ಕಾಲೇಜು ವಠಾರದ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇವರು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಆಶಯ ಭಾಷಣ ಮಾಡಿದರು.
‘ಪತ್ರಿಕಾ ರಂಗ ಇಂದು ಪತ್ರಿಕೋಧ್ಯಮವಾಗಿ ಬೆಳೆದಿದೆ. ಇದು ಮುಕ್ತ ಕ್ಷೇತ್ರವಾದ್ದರಿಂದ ನಿಜವಾದ ಪತ್ರಕರ್ತರ ಜೊತೆ ಜನಪರ ಕಾಳಜಿ ಇಲ್ಲದವರು, ಬಂಡವಾಳಶಾಹಿಗಳು ಈ ಕ್ಷೇತ್ರಕ್ಕೆ ಬಂದಿದ್ದಾರೆ’ ಎಂದು ವಿಷಾದ ವ್ಯಕ್ತ ಪಡಿಸಿದ ಅವರು, ‘ನಾಡಿನ ಅಭಿವೃದ್ದಿ, ಬದಲಾವಣೆ ಪತ್ರಕರ್ತನಿಂದ ಸಾಧ್ಯ. ಇಂತಹ ಮೂಲಭೂತ ಯೋಚನೆಗಳು ಪತ್ರಕರ್ತರಲ್ಲಿ ಇರಬೇಕು. ಜನಪರವಾದ ವರದಿಗಳು, ನಿಪ್ಷಕ್ಷಪಾತವಾದ ಸುದ್ಧಿಗಳನ್ನು, ಗೊಂದಲಗಳಿಲ್ಲದೇ ಓದುಗರ ಮುಂದೆ ನೀಡುವ ತುಡಿತ ಇರಬೇಕು. ನಾವು ಯಾವತ್ತೂ ರಾಜಕಾರಣಿಗಳ ಗುಲಾಮರಲ್ಲ, ಹಿಂಬಾಲಕರಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು’ ಎಂದರು.
‘ಪತ್ರಿಕೆಗಳಲ್ಲಿ ಅಪರಾಧ ಸುದ್ದಿಗಳೆ ಆಧ್ಯತೆಯಲ್ಲ. ಇತರ ಸುದ್ದಿಗಳಿಗೂ ಆಧ್ಯತೆ ನೀಡಬೇಕು. ಮಾನವೀಯ ಕಳಕಳಿ, ಜನಪರವಾದ ನಿಲುವು ಪತ್ರಕರ್ತರಲ್ಲಿ ಇದ್ದಾಗ ಪತ್ರಿಕಾರಂಗವೂ ಅರ್ಥಪೂರ್ಣವಾಗುತ್ತದೆ. ಇಂದು ಸವಾಲುಗಳು ಈ ಕ್ಷೇತ್ರದಲ್ಲಿ ಇಲ್ಲ. ವಿಜ್ಞಾನದಿಂದ ಎಲ್ಲವೂ ಸರಳವಾಗಿದೆ’ ಎಂದರು. 
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ.ಬಿ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಾಲ್ಕು ದಶಕಗಳಿಂದ ಪತ್ರಿಕಾ ವಿತರರಣೆ ಮಾಡುತ್ತಿರುವ ಮಹಮ್ಮದ್ ಗೌಸ್ ಮತ್ತು ಮಹಮ್ಮದ್ ಖಾಜ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಎಸ್.ಜನಾರ್ದನ್ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ ಕೆ.ಸಿ ಸ್ವಾಗತಿಸಿ, ಚಂದ್ರಶೇಖರ  ಬೀಜಾಡಿ ರಾಜಶೇಖರ್ ಕೋಟಿ ಅವರನ್ನು ಪರಿಚಯಿಸಿದರು.  ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ವಂದಿಸಿದರು. ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಡಾಯ್ಜಿ ವಲ್ರ್ಡ್‍ನ ಸಿಲ್ವೆಸ್ಟರ್ ಡಿ’ಸೋಜ, ನಮ್ಮ ಟಿವಿಯ ಶ್ರೀಕರ ಎಸ್., ಸ್ಮೈಲ್ ವಾಹಿನಿಯ ರಾಘವೇಂದ್ರ ಬಳ್ಕೂರು ಕಾರ್ಯಕ್ರಮಕ್ಕೆ ಸಹಕರಿಸಿದರು.
-ನಾಗರಾಜ ವಂಡ್ಸೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com