ಈಗಿನ ಕನ್ನಡ ಚಿತ್ರಗಳು ತೀರಾ ಕಳಪೆ ಮಟ್ಟದ್ದು: ಹೈಕೋರ್ಟ್

ಕುಂದಾಪ್ರ ಡಾಟ್ ಕಾಂ ವಾರ್ತೆ: ಡಾ. ರಾಜಕುಮಾರ್ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿದ್ದರು. ಅವರ ಚಿತ್ರದಲ್ಲಿ ಸಮಾಜಕ್ಕೆ ಮತ್ತು ನಮ್ಮ ಸಂಸ್ಕೃತಿಗೆ ಉತ್ತಮ ಸಂದೇಶವಿರುತ್ತಿತ್ತು. ಈಗಿನ ಕನ್ನಡ ಚಿತ್ರಗಳ ಗುಣಮಟ್ಟ ತೀರಾ ಕಳಪೆ ಮಟ್ಟದ್ದು ಎಂದು ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಈಗಿನ ಚಿತ್ರೋದ್ಯಮ ಬರೀ ಲಾಭ, ನಷ್ಟದ ಚಿಂತನೆಯಲ್ಲಿ ಮುಳುಗಿದೆ. ದಿನಕ್ಕೊಬ್ಬರು ಹೀರೋಗಳು ಹುಟ್ಟುತ್ತಿದ್ದಾರೆ. ರಾಜ್ ನಂತರ ವಿಷ್ಣುವರ್ಧನ್ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಇವರಿಬ್ಬರ ನಂತರ ಉತ್ತಮ ಸಾಮಾಜಿಕ ಕಳಕಳಿಯ ಚಿತ್ರಗಳು ಅಂತ್ಯ ಕಂಡಿವೆ ಎಂದು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ. 
           ಬ್ಲಾಕ್ ಬಸ್ಟರ್ ಚಿತ್ರ ಮುಂಗಾರು ಮಳೆ ಚಿತ್ರವನ್ನು ಉಲ್ಲೇಖಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಆ ಚಿತ್ರದಲ್ಲಿ ಸಮಾಜಕ್ಕೆ ಏನು ಸಂದೇಶ ದೊರಕಿತು? ಬರೀ ಮನೋರಂಜನೆ ಬಿಟ್ಟರೆ ಆ ಚಿತ್ರದಲ್ಲಿ ಬೇರೇನಿತ್ತು? ಮುನ್ನಾಭಾಯಿ ಎಂಬಿಬಿಎಸ್ ಹಿಂದಿ ಚಿತ್ರದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡುವುದು ಹೇಗೆಂದು ತೋರಿಸಲಾಯಿತು. ಅದು ಕನ್ನಡ ಸಹಿತ ಇತರ ಭಾಷೆಗಳಲ್ಲೂ ರಿಮೇಕ್ ಆಯಿತು. ಎತ್ತ ಸಾಗುತಿದೆ ನಮ್ಮ ಚಿತ್ರರಂಗ ಎಂದು ನ್ಯಾ. ರಾಮಮೋಹನ ರೆಡ್ಡಿ ವಿಷಾದ ವ್ಯಕ್ತ ಪಡಿಸಿದ್ದಾರೆ.
           ರಾಜ್ಯ ಚಲನಚಿತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ದೋಷವಿರುವುದು ಎದ್ದು ಕಾಣುತ್ತಿದೆ. ಇದರಲ್ಲಿ ಸಚಿವರೂ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ, ಇದನ್ನು ಸಿಬಿಐ ತನಿಖೆಗೆ ಒಪ್ಪಿಸುವುದೇ ಸೂಕ್ತ ಎಂದು ನ್ಯಾ. ರಾಮಮೋಹನ ರೆಡ್ಡಿವಿರುವ ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಚುನಾವಣೆಯಲ್ಲಿ ಆಯ್ಕೆಯಾಗುವ ರಾಜಕೀಯ ಮುಖಂಡರ ಕೆಲಸ ಜನಸೇವೆ ಮಾಡುವುದು. ಚಲನಚಿತ್ರಗಳ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಮೂಗು ತೂರಿಸುವುದಲ್ಲ. ಈ ಅವ್ಯವಹಾರದ ಬಗ್ಗೆ ಸತ್ಯಾಂಶ ಹೊರಬೀಳ ಬೇಕಾದರೆ ಸಿಬಿಐ ತನಿಖೆಯೇ ಸೂಕ್ತ. ಸದ್ಯದಲ್ಲೇ ಪೀಠ ಸೂಕ್ತ ಆದೇಶ ಹೊರಡಲಿಸಲಿದೆ ಎಂದು ನ್ಯಾ.ರಾಮಮೋಹನ ರೆಡ್ಡಿ ಹೇಳಿದ್ದಾರೆ. ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿ 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ರಾಜ್ಯ ವಾರ್ತಾ ಇಲಾಖೆ ಹಿಂದಕ್ಕೆ ಪಡೆದಿದ್ದನ್ನು ಇಲ್ಲಿ ನಾವು ಸ್ಮರಿಸಿ ಕೊಳ್ಳಬಹುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com